ಮುಂಬೈಗೆ ಗೋವಾದಲ್ಲಿ ಸೋಲಿನ ಕಿಕ್
ಗೋವಾ, ಅಕ್ಟೋಬರ್ 24
ಫರಾನ್ ಕೊರೊಮಿನಾಸ್ (4ನೇ ನಿಮಿಷ), ಜಾಕಿಚಾಂದ್ (55ನೇ ನಿಮಿಷ), ಎಡು ಬೇಡಿಯ (61ನೇ ನಿಮಿಷ),ಮಿಗ್ವೆಲ್ ಫೆರ್ನಾಂಡಿಸ್ ( 84 ಮತ್ತು 90ನೇ ನಿಮಿಷ ) ಮಿಂಚಿನ ಗೋಲು ಗಳಿಸುವುದರೊಂದಿಗೆ ಮುಂಬೈ ಎಫ್ ಸಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಫ್ ಸಿ ಗೋವಾ ತಂಡ 5-0 ಅಂತರದಲ್ಲಿ ಜಯ ಗಳಿಸಿತು. ಪ್ರಥಮಾರ್ಧದಲ್ಲಿ ಒಂದು ಗೋಲು ಗಳಿಸಿದ್ದ ಗೋವಾ ದ್ವಿತಿಯಾರ್ಧದಲ್ಲಿ ನಾಲ್ಕು ಗೋಲು ಗಳಿಸುವುದರೊಂದಿಗೆ ಪಂದ್ಯ ಏಕ ಮುಖವಾಗಿ ಅಂತ್ಯಗೊಂಡಿತು.
ಗೋವಾ 2-0
ಮೊದಲಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಲರಾದ ಜಾಕಿಚಾಂದ್ 55ನೇ ನಿಮಿಷದಲ್ಲಿ ಯಶಸ್ಸು ಕಂಡರು. ಪರಿಣಾಮ ಗೋವಾಕ್ಕೆ 2-0 ಮುನ್ನಡೆ. ಸೆರಿಟಾನ್ ನೀಡಿದ ಪಾಸ್ ಮೂಲಕ ಜಾಕಿಚಾಂದ್ ಈ ಗೋಲನ್ನು ಗಳಿಸಿದರು. ಸೌವಿಕ್ ಚಕ್ರವರ್ತಿ ಈ ಬಾರಿ ಚೆಂಡನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಅದೇ ರೀತಿ ಮುಂಬೈ ಗೋಲ್ ಕೀಪರ್ ಕೂಡ.
ಗೋವಾ ಮೇಲುಗೈ
ಫೆರಾನ್ ಕೊರೊಮಿನಾಸ್ ಪ್ರಸಕ್ತ ಐಎಸ್‌ಎಲ್‌ನಲ್ಲಿ ನಾಲ್ಕನೇ ಗೋಲು ಗಳಿಸುವುದರೊಂದಿಗೆ ಎಫ್ ಸಿ ಗೋವಾ ತಂಡ ಮುಂಬೈ ವಿರುದ್ಧದ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. 7ನೇ ನಿಮಿಷದಲ್ಲಿ ದಕ್ಕಿದ ಪೆನಾಲ್ಟಿ ಅವಕಾಶದ ಮೂಲಕ ಕೊರೊಮಿನಾಸ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ನೇರವಾಗಿ ಚೆಂಡನ್ನು ತುಳಿದು ಗೋಲ್‌ಕೀಪರ್ ಅರ್ಮಿಂದರ್ ಸಿಂಗ್ ಅವರನ್ನು ವಂಚಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಸೌವಿಕ್ ಚಕ್ರವರ್ತಿ ಗೋವಾದ ಗೋಲ್ ಮೆಷಿನ್ ಕೊರೊಮಿನಾಸ್ ಅವರನ್ನು ನೆಲಕ್ಕೆ ಕೆಡವಿದ ಕಾರಣಕ್ಕೆ ತಕ್ಕ ಬೆಲೆ ತೆರಬೇಕಾಯಿತು.
34ನೇ ನಿಮಿಷದಲ್ಲಿ ಗೋವಾ ತಂಡಕ್ಕೆ ಎರಡನೇ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಎಡಭಾಗದಿಂದ ಬಂದ ಚೆಂಡನ್ನು ಜಾಕಿಚಾಂದ್ ಕೊರೊಮಿನಾಸ್‌ಗೆ ಅನುವುಮಾಡಿಕೊಟ್ಟರು. ಸುಲಭವಾಗಿ ಗೋಲು ಗಳಿಸಬಹುದಾಗಿತ್ತು. ಆದರೆ ಈ ನಡುವೆ ಸೌವಿಕ್ ಚಕ್ರವರ್ತಿ ಅಡ್ಡಿಪಡಿಸಿದ ಕಾರಣ ಅವಕಾಶ ತಪ್ಪಿಹೋಯಿತು.
ಆರಂಭದಿಂದಲೂ ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು. ಮುಂಬೈ ಆಟಗಾರರು ಚೆಂಡಿಗಿಂತ ಕೊರೊಮಿನಾಸ್ ಅವರನ್ನು ನಿಯಂತ್ರಿಸುವುದಕ್ಕೆ ಹೆಚ್ಚಿನ ಗಮನ ಹರಿಸಿದಂತೆ ಕಾಣುತ್ತಿಲ್ಲ. ಸೌವಿಕ್ ಅದಕ್ಕೆ ಸಾಕ್ಷಿಯಾದರು.
4ನೇ ನಿಮಿಷದಲ್ಲಿ ಮುಂಬೈಗೆ ಗೋಲು ಗಳಿಸಲು ಉತ್ತಮ ಅವಕಾಶ ಸಿಕ್ಕಿತು. ಆದರೆ ಪೌಲೋ ಇಟ್ಟ ಗುರಿ ಗೋಲ್‌ಬಾಕ್ಸ್‌ನಿಂದ ಹೊರ ಸಾಗಿತ್ತು.
ಇಂಡಿಯನ್ ಸೂಪರ್ ಲೀಗ್‌ನ 17ನೇ ಪಂದ್ಯಕ್ಕೆ ಮುಂಬೈ ಹಾಗೂ ಗೋವಾ ತಂಡಗಳು ಮುಖಾಮುಖಿಯಾದವು. ಇದು ಡಿಫೆನ್ಸ್‌ನಲ್ಲಿ ಪ್ರಮುಖವಾಗಿರುವ ಎರಡು ಆತ್ಮೀಯ ತಂಡಗಳ ನಡುವಿನ ಪಂದ್ಯ. ಫಾರ್ವರ್ಡ್ ವಿಭಾಗದಲ್ಲಿ ಬಲಿಷ್ಠವಾಗಿರುವ ಗೋವಾ ತಂಡಕ್ಕೆ ಬ್ಯಾಕ್‌ಲೈನ್‌ನಲ್ಲಿ ಕೊಂಚ ಸಮಸ್ಯೆ ಇರುವುದು ಸ್ಪಷ್ಟ. ಈ ಬಾರಿ ಗೋವಾ ತಂಡ ಕ್ಲೀನ್ ಶೀಟ್ ಗಳಿಸುವಲ್ಲಿ ವಿಲವಾಗಿದೆ. ಕಳೆದ ವರ್ಷದಿಂದ ಇಲ್ಲಿಯವರೆಗೂ ಗೋವಾ ಕ್ಲೀನ್ ಶೀಟ್‌ಸಾ‘ನೆ ಮಾಡಿರುವುದು ಎರಡು ಬಾರಿ ಮಾತ್ರ. ಪುಣೆ ವಿರುದ್ಧದ ಪಂದ್ಯದಲ್ಲಿ ಮುಂಬೈ 2-0 ಅಂತರದಲ್ಲಿ ಗೆಲ್ಲುವ ಮೂಲಕ ಕ್ಲೀನ್ ಶೀಟ್ ಸಾಧನೆ ಮಾಡಿತ್ತು. 12 ಪಂದ್ಯಗಳ ನಂತರ ಮುಂಬೈ ಮೊದಲ ಬಾರಿಗೆ ಕ್ಲೀನ್ ಶೀಟ್ ಸಾಧನೆ ಮಾಡಿದೆ. ಗೋಲ್‌ಸ್ಕೋರ್ ಮಾಡಲು ಟ್ರೋಡಾ ಕ್ರೀಡಾಂಗಣ ಉತ್ತಮವೆನಿಸಿದೆ.
ಸೂಪರ್ ಕೊರೊಮಿನಾಸ್
ಗೋವಾ ತಂಡದ ಬೆನ್ನೆಲುಬು ಫೆರಾನ್ ಕೊರೊಮಿನಾಸ್. ಗೋವಾದ ಪ್ರತಿಯೊಂದು ಜಯದಲ್ಲೂ ಕೊರೊಮಿನಾಸ್ ಅವರ ಪಾತ್ರ ಇದ್ದೇ ಇದೆ.ಕಳೆದ ಬಾರಿಯ ಐಎಸ್‌ಎಲ್‌ನಲ್ಲಿ ಆಡಿರುವ 22 ಪಂದ್ಯಗಳಲ್ಲಿ 21 ಗೋಲುಗಳಿಸಿ ಚಿನ್ನದ ಬೂಟು ಪಡೆದಿರುವ ಕೊರೊಮಿನಾಸ್ ಈಗಾಗಲೇ ಗೋವಾದ ಜಯಕ್ಕೆ ಚಾಲನೆ ನೀಡಿದ್ದಾರೆ. ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ಚೆಂಡನ್ನು ತುಳಿಯುವಲ್ಲಿಯೂ ಕೊರೊಮಿನಾಸ್ ಅವರು ನಿಖರತೆಯನ್ನು ಕಾಯ್ದಕೊಂಡಿದ್ದಾರೆ.