ಗಯಾನ:
ನಾಯಕಿ ಹರ್ಮಾನ್‌ಪ್ರೀತ್ ಕೌರ್(103) ಅವರ ಸ್ಪೋಟಕ ಶತಕ ಹಾಗೂ ದಯಾಲನ್ ಹೇಮಲತಾ(3ವಿಕೆಟ್ ) ಹಾಗೂ ಪೂನಮ್ ಯಾದವ್(3 ವಿಕೆಟ್ ) ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ, ಮಹಿಳೆಯರ ಟಿ-ಟ್ವೆಂಟಿ ವಿಶ್ವಕಪ್‌ನ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 34 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ವಿಶ್ವ ಟಿ20 ಕ್ರಿಕೆಟ್ ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕೌರ್ ಪಾತ್ರರಾದರು.
ಇಲ್ಲಿನ ಪ್ರೊವಿಡೆನ್‌ಸ್ ಕ್ರೀಡಾಂಗಣದಲ್ಲಿ ಗುಂಪು(ಬಿ) ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು, 40 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ತನಿಯಾ ಭಾಟಿಯಾ(9), ಸ್ಮತಿ ಮ ಮಂಧಾನ(2) ಹಾಗೂ ದಯಾಲನ್ ಹೇಮಲತಾ(15) ಬಹುಬೇಗ ವಿಕೆಟ್ ಒಪ್ಪಿಸಿದರು.
ನಾಯಕಿ ಹರ್ಮಾನ್ ಪ್ರೀತ್ ಕೌರ್ ಹಾಗೂ ರೊಡ್ರಿಗಸ್ ಜೋಡಿ ಉತ್ತಮ ಬ್ಯಾಟಿಂಗ್ ಮಾಡಿತು. ನ್ಯೂಜಿಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಒಟ್ಟು 134 ರನ್ ಗಳ ಜತೆಯಾಟ ಆಡುವ ಮೂಲಕ ತಂಡದ ಮೊತ್ತ 170ರ ಗಡಿ ದಾಟಲು ನೆರವಾಯಿತು.
ಕ್ರೀಸ್‌ಗೆ ಬಂದ ಕ್ಷಣದಿಂದಲೂ ಅಬ್ಬರಿಸಿದ ನಾಯಕಿ ಹರ್ಮಾನ್‌ಪ್ರೀತ್ ಕೌರ್ ನ್ಯೂಜಿಲೆಂಡ್ ಬೌಲರ್‌ಗಳನ್ನು ಭರ್ಜರಿಯಾಗಿ ದಂಡಿಸಿದರು. ಎಂದಿನಂತೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮಾಡಿದ ಕೌರ್, ಕೇವಲ 51 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ ಸ್ಪೋಟಕ ಶತಕ(103) ಸಿಡಿಸಿದರು. ನಾಯಕಿ ಕೌರ್‌ಗೆ ಸಾಥ್ ನೀಡಿದ ರೊಡ್ರಿಗ್ಯೂಸ್ ಮತ್ತೊಂದು ತುದಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದರು. 45 ಎಸೆತಗಳಿಗೆ ಏಳು ಬೌಂಡರಿಯೊಂದಿಗೆ 59 ರನ್ ಗಳಿಸಿದರು. ಒಟ್ಟಾರೆ, ಭಾರತ ನಿಗದಿತ 20 ಓವರ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು 194 ರನ್ ದಾಖಲಿಸಿತು. ಇದರೊಂದಿಗೆ ನ್ಯೂಜಿಲೆಂಡ್ ಗೆ 195 ಬೃಹತ್ ಸವಾಲು ನೀಡಿತು.
ಬೃಹತ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡು 160 ರನ್‌ಗಳಿಗೆ ಶಕ್ತವಾಯಿತು. ಇದರೊಂದಿಗೆ ನ್ಯೂಜಿಲೆಂಡ್ 34 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ನ್ಯೂಜಿಲೆಂಡ್ ಪರ ಉತ್ತಮ ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ್ತಿ 67 ರನ್ ಗಳಿಸಿದರು. ಇವರನ್ನು ಬಿಟ್ಟರೆ ಕಾಟೆ ಮಾರ್ಟಿನ್ 39 ರನ್ ದಾಖಲಿಸಿದರು. ಇವರನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸವಮೆನ್ ಗಳು ವಿಫಲರಾದರು. ಭಾರತದ ಪರ ಉತ್ತಮ ಬೌಲಿಂಗ್ ಮಾಡಿದ ದಯಾಲನ್ ಹೇಮಲತಾ ಹಾಗೂ ಪೂನಮ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ, ರಾಧಾ ಯಾದವ್ ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 194/5(20)
ಹರ್ಮಾನ್‌ಪ್ರೀತ್ ಕೌರ್-103
ರೊಡ್ರಿಗಸ್-59
ಬೌಲಿಂಗ್: ಲೀ ತಹುಹು 18ಕ್ಕೆೆ 2.
ನ್ಯೂಜಿಲೆಂಡ್ಮ: 160/9(20)
ಸುಜಿ ಬೇಟ್‌ಸ್-67
ಕಾಟೆ ಮಾರ್ಟಿನ್-39
ಬೌಲಿಂಗ್: ದಯಾಲನ್ ಹೇಮಲತಾ 26ಕ್ಕೆೆ 3, ಪೂನಮ್ ಯಾದವ್ 33ಕ್ಕೆೆ 3.