Friday, November 22, 2024

ಕ್ರಿಸ್ತು ಜಯಂತಿ ಕಾಲೇಜಿಗೆ ಫುಟ್ಬಾಲ್ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನಲ್ಲಿ ನಡೆದ ರಿಲೆಯನ್ಸ್ ಫೌಂಡರೇಷನ್ ಯೂತ್ ಸ್ಪೋರ್ಟ್ಸ್ ಕಾಲೇಜು ಹುಡುಗರ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ನಗರ ವಿಭಾಗದಲ್ಲಿ ಕ್ರಿಸ್ತು ಜಯಂತಿ ಕಾಲೇಜು ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ಕ್ರಿಸ್ತು ಜಯಂತಿ ಕಾಲೇಜು ತಂಡ ಯಾವುದೇ ಪಂದ್ಯದಲ್ಲಿ ಸೋಲನುಭವಿಸದೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಟೂರ್ನಿ ನಾಕೌಟ್ ಮಾದರಿಯಲ್ಲಿ ನಡೆದಿತ್ತು. ಲೀಗ್‌ನ ಫೈನಲ್‌ನಲ್ಲಿ ಆಚಾರ್ಯ ಶಿಕ್ಷಣ ಸಂಸ್ಥೆಯ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿದ ಕ್ರಿಸ್ತು ಜಯಂತಿ ಕಾಲೇಜು ತಂಡ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಿತು.
ಕ್ರಿಸ್ತು ಜಯಂತಿ ಕಾಲೇಜು ತಂಡದ ಪರ ಅಬ್ದುಲ್ ಹಫೀಜ್ 32ನೇ ನಿಮಿಷದಲ್ಲಿ ಗಳಿಸಿದ ಗೋಲು ತಂಡಕ್ಕೆ ಚಾಂಪಿಯನ್‌ಪಟ್ಟ ತಂದುಕೊಟ್ಟಿತು. ಆಚಾರ್ಯ ತಂಡಕ್ಕೆ ಕ್ರಿಸ್ತು ಜಯಂತಿ ಕಾಲೇಜಿನ ರಕ್ಷಣಾ ಕೋಟೆಯನ್ನು ಮುರಿಯಲಾಗಲಿಲ್ಲ. ಪರಿಣಾಮ ಕೊನೆಯ ವಿಜಿಲ್ ವರೆಗೂ ಸ್ಕೋರ್ 1-0 ಆಗಿತ್ತು. ಕ್ರಿಸ್ತು ಜಯಂತಿ ಕಾಲೇಜಿನ ಸಿಬಿ ಪಿಯು ಚಾಂಪಿಯನ್‌ಷಿಪ್‌ನ ಬೆಸ್ಟ್ ಗೋಲ್‌ಕೀಪರ್ ಆಗಿ ಆಯ್ಕೆಯಾದರು. ಅಡಿಡಾಸ್ ನೀಡಿದ ಗೋಲ್ಡನ್ ಗ್ಲೋವ್ಸ್ ಪ್ರಶಸ್ತಿಗೆ ಸಿಬಿ ‘ಭಾಜನರಾದರು. ಅಬ್ದುಲ್ ಹಫೀಜ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಮೊದಲ ಪಂದ್ಯದಲ್ಲಿ ಕ್ರಿಸ್ತು ಜಯಂತಿ ಕಾಲೇಜು ತಂಡ ಶೇಷಾದ್ರಿಪುರಂ  ಕಾಲೇಜು ವಿರುದ್ಧ ಡ್ರಾ ಸಾಧಿಸಿತ್ತು, ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಜಯ ಗಳಿಸಿತ್ತು.
ನ್ಯಾಷನಲ್ ಕಾಲೇಜು ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ತು ಜಯಂತಿ ಕಾಲೇಜು ತಂಡ 6-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಸೇಂಟ್ ಜೊಸೆಫ್  ಕಾಲೇಜು ವಿರುದ್ಧ ನಡೆದ ಸೆಮಿಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ನಂತರ ನಡೆದ ಶೂಟೌಟ್‌ನಲ್ಲಿ ಕ್ರಿಸ್ತು ಜಯಂತಿ ತಂಡ 4-3 ಗೋಲುಗಳಿಂದ ಗೆದ್ದಿತ್ತು. ದೇಶದ ಇತರ ಪ್ರಮುಖ ನಗರಗಳಲ್ಲಿ ಗೆದ್ದಿರುವ ತಂಡದ ವಿರುದ್ಧ ಕ್ರಿಸ್ತು ಜಯಂತಿ ಕಾಲೇಜು ತಂಡ ರಾಷ್ಟ್ರೀಯ ಮಟ್ಟದ ಪಂದ್ಯಗಳನ್ನಾಡಲಿದೆ.
ಚಾಂಪಿಯನ್ ತಂಡಕ್ಕೆ ಕ್ರಿಸ್ತು ಜಯಂತಿ ಕಾಲೇಜು ತಂಡದ ಪ್ರಾಂಶುಪಾಲ ಫ್ರಾ. ಜೋಸ್‌ಕುಟ್ಟಿ ಪಿ.ಡಿ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಅರೋಕಿಯಾ ರಾಜ್ ಅಭಿನಂದನೆ ಸಲ್ಲಿಸಿದ್ದಾರೆ. ಕೃಷ್ಣಮೂರ್ತಿ ಎನ್. ಚಾಂಪಿಯನ್ ತಂಡಕ್ಕೆ ತರಬೇತಿ ನೀಡಿರುತ್ತಾರೆ.
ತಂಡದ ವಿವರ
ಅಮ್ಲಾನ್  ಭಾಸ್ಕರ್, ಎ.ಎಸ್. ರಮ್ಮುಂಗಮ್ ಮಕಾಂಗ್, ಮಹಾಡೆಮೊ ಖುವುಂಗ್,  ಸಂತೋಷ್ ಸಿ., ಸಿಬಿ ಪಿಯು, ವಿಷ್ಣು ದಾಸ್, ಕಾರಿಯಪ್ಪ ಸಿ.ಕೆ, ಆರ್ಚೆಲಿ ಕೆವಿನ್ ಖಾರ್ಗೊಂಗೊರ್, ಗೌತಮ್ ಎಂ.ಕೆ. ಅಬ್ದುಲ್ ಹಫೀಜ್, ಮುಜಿಂಗ್ ಕಾಜಿಮೊಟೊ ನೋಯ್, ಯೋಗೇಶ್ವರನ್, ಎಸ್. ಅಜಯ್, ಅಮಲ್ ಮೊಹಮ್ಮದ್, ಸೊವ್ನೀರ್ ಪ್ರಧಾನ್ (ನಾಯಕ), ಅಲ್ತಾಮಿಶ್ ಚೌ‘ರಿ, ಮೆಲ್ವಿನ್ ಫೆರ್ನಾಂಡೀಸ್, ಹರೀಶ್ ಎಸ್., ರಾಮಲಿಂಗಂ ಕೆ.,  ಸೂರಜ್ ಶಾಜನ್, ಅನೂಪ್ ಜೆ.

Related Articles