ಹೊಸದಿಲ್ಲಿ: ದ್ವಿತಿಯಾರ್ಧದಲ್ಲಿ ಇತ್ತಂಡಗಳು ತಲಾ ಒಂದು ಗೋಲು ಗಳಿಸುವುದರೊಂದಿಗೆ ಡೆಲ್ಲಿ ಡೈನಾಮೋಸ್ ಹಾಗೂ ಚೆನ್ನೈಯಿನ್ ಎಫ್ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ 1-1ರಿಂದ ಸಮಬಲಗೊಂಡಿತು. 59ನೇ ನಿಮಿಷದಲ್ಲಿ ಡೆಲ್ಲಿ ಪರ ಕಲು ಅಚೆ ಪೆನಾಲ್ಟಿ ಮೂಲಕ ಗೋಲು ಗಳಿಸಿದರೆ, 81ನೇ ನಿಮಿಷದಲ್ಲಿ ಮೈಲ್ಸನ್ ಆಲ್ವೆಸ್ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು.
ಡೆಲ್ಲಿ ತಂಡದ ನಾಯಕ ಕಲು ಅಚೆ ಅವರು ಗಳಿಸಿದ ಪೆನಾಲ್ಟಿ ಗೋಲಿನಿಂದ ಆತಿಥೇಯ ದ್ವಿತಿಯಾರ್ಧದಲ್ಲಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತು. ಡೆಲ್ಲಿ ತಂಡದ ಮಿರಾಬಜ್ ಅವರನ್ನು ಚೆನ್ನೈನ ರಾಫೆಲ್ ಆಗಸ್ಟೋ ಪೆನಾಲ್ಟಿ ವಲಯದಲ್ಲಿ ಉದ್ದೇಶಪೂರ್ವಕವಾಗಿ ಕೆಡಹಿದ ಕಾರಣ ರೆಫರಿ ಡೆಲ್ಲಿಗೆ ಪೆನಾಲ್ಟಿ ಕಾರ್ನರ್ ಅವಕಾಶ ಕಲ್ಪಿಸಿದರು. ಕಲು ಅಚೆ ಯಾವುದೇ ಪ್ರಮಾದವೆಸಗದೆ ತಂಡಕ್ಕೆ 1-0 ಮುನ್ನಡೆ ಕಲ್ಪಿಸಿದರು. ಆದರೆ ಈ ಡೆಲ್ಲಿಯ ಮುನ್ನಡೆದ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 81ನೇ ನಿಮಿಷದಲ್ಲಿ ಮೈಲ್ಸನ್ ಆಲ್ವೆಸ್ ಗಳಸಿದ ಗೋಲಿನಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ಈ ಋತುವಿನಲ್ಲಿ ಡೆಲ್ಲಿ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿರಬಹುದು, ಆದರೆ ಚೆನ್ನೈ ವಿರುದ್ಧ ಆಡಿರುವ ಏಳು ಪಂದ್ಯಗಳಲ್ಲಿ 4-1ರಲ್ಲಿ ಪ್ರಭುತ್ವ ಸಾಧಿಸಿದೆ.