ಸ್ಪೋರ್ಟ್ಸ್ ಮೇಲ್ ವರದಿ
ಅಬು ಧಾಬಿಯಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸುನಿಲ್ ಛೆಟ್ರಿ ಥಾಯ್ಲೆಂಡ್ ವಿರುದ್ಧ ಗೋಲು ಗಳಿಸುವ ಮೂಲಕ ಫುಟ್ಬಾಲ್ ಜಗತ್ತಿನಲ್ಲೇ ಅಚ್ಚರಿಯ ದಾಖಲೆಯೊಂದನ್ನು ಮುರಿದಿದ್ದಾರೆ. ಅವರು ಗಳಿಸಿದ 67ನೇ ಗೋಲು ಈ ಐತಿಹಾಸಿಕ ಸಾಧನೆಗೆ ಕಾರಣವಾಯಿತು. ಸುನಿಲ್ 67, ಮೆಸ್ಸಿ 65. ಅರ್ಜೆಂಟೀನಾದ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅವರ ದಾಖಲೆಯನ್ನು ಮುರಿದು ಇತಿಹಾಸ ಬರೆದಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸದ್ಯ ಚಾಲ್ತಿಯಲ್ಲಿರುವ ಆಟಗಾರರಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಇದಾಗಿದೆ.
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮೆಸ್ಸಿ ಅತ್ಯಂತ ಪ್ರಸಿದ್ಧ ತಂಡಗಳ ವಿರುದ್ಧ ಆಡಿರಬಹುದು, ಜಗತ್ತಿನ ಅತ್ಯಂತ ಶ್ರೀಮಂತ ಪುಟ್ಬಾಲಿಗರ ಪಟ್ಟಿಯಲ್ಲಿ ಸೇರಿರಬಹುದು, ಆದರೆ ದಾಖಲೆಯ ವಿಚಾರ ಬಂದಾಗ ಸುನಿಲ್ ಛೆಟ್ರಿಯ ಸಾಧನೆಯನ್ನು ಮೆಚ್ಚಲೇಬೇಕು. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್ಸಿ ತಂಡದ ನಾಯಕರಾಗಿರುವ ಛೆಟ್ರಿ 2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿಟ್ಟಿದ್ದರು. ಅದೇ ವರ್ಷ ಮೆಸ್ಸಿ ಕೂಡ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿಟ್ಟಿದ್ದರು. ಮೆಸ್ಸಿ 128 ಪಂದ್ಯಗಳನ್ನಾಡಿ 65 ಗೋಲುಗಳನ್ನು ಗಳಿಸಿದ್ದರೆ, ಛೆಟ್ರಿ 105 ಪಂದ್ಯಗಳನ್ನಾಡಿ 67ನೇ ಗೋಲು ಗಳಿಸಿದರು. ಫಿಫಾ ರಾಂಕಿಂಗ್ ನಲ್ಲಿ ಭಾರತ 97, ಅರ್ಜೆಂಟೀನಾ 11 ಹೊಂದಿರಬಹುದು ಆದರೆ ಈ ದಾಖಲೆ ಭಾರತದ ಫುಟ್ಬಾಲ್ ಅಭಿಮಾನಿಗಳಲ್ಲಿ ಹೊಸ ಉಲ್ಲಾಸ, ಅಆಟಗಾರರಲ್ಲಿ ಹೊಸ ಹುಮ್ಮಸ್ಸು ತರುವುದು ಸತ್ಯ.