ಸ್ಪೋರ್ಟ್ಸ್ ಮೇಲ್ ವರದಿ
ಭಾರ್ಗವ್ ಭಟ್ ದಾಳಿಗೆ ತತ್ತರಿಸಿದ ಕರ್ನಾಟಕ ತಂಡ ಬರೋಡ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಸಂಕಷ್ಟಕ್ಕೆ ಗುರಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 112 ರನ್‌ಗೆ ಆಲೌಟ್ ಆಗಿದ್ದ ಮನೀಶ್ ಪಾಂಡೆ ಪಡೆ, ಎರಡನೇ ಇನಿಂಗ್ಸ್‌ನಲ್ಲೂ 13 ರನ್ ಗಳಿಸುತ್ತಲೇ 2 ಅಮೂಲ್ಯ ವಿಕೆಟ್ ಕಳೆದುಕೊಂಡಿದೆ.
ಬರೋಡ ಪ್ರಥಮ ಇನಿಂಗ್ಸ್‌ನಲ್ಲಿ 223 ರನ್ ಗಳಿಸಿ ಮೊದಲ ಇನಿಂಗ್ಸ್‌ನ ಮುನ್ನಡೆ ಕಂಡಿತ್ತು. ಚೊಚ್ಚಲ ರಣಜಿ ಪಂದ್ಯವನ್ನಾಡಿದ ಕರ್ನಾಟಕದ ಶುಭಾಂಗ್ ಹೆಗ್ಡೆ 74 ರನ್‌ಗೆ 4 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕದ ಆರಂಭಿಕ ಆಟಗಾರ ಡಿ. ನಿಶ್ಚಲ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಮನೀಶ್ ಪಾಂಡೆ (43) ಹಾಗೂ ಬಿ.ಆರ್. ಶರತ್ (30) ಅವರನ್ನು ಹೊರತುಪಡಿಸಿದರೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಬರೋಡದ ದಾಳಿಯನ್ನು ಎದುರಿಸುವಲ್ಲಿ ವಿಲರಾದರು. ಭಟ್ (27ಕ್ಕೆ 3) ಹಾಗೂ ಮೆರಿವಾಲ (22ಕ್ಕೆ 3) ಕರ್ನಾಟಕದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.
ಬರೋಡದ ಪ್ರಥಮ ಇನಿಂಗ್ಸ್‌ನ ಆರಂಭ ಕೂಡ ಉತ್ತಮವಾಗಿರಲಿಲ್ಲ. 22 ರನ್ ಗಳಿಸುತ್ತಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ದೀಪಕ್ ಹೂಡಾ (51) ಹಾಗೂ ವಿಷ್ಣು ಸೊಲಾಂಕಿ (69) ಅವರ ಅ‘ರ್ ಶತಕದ ನೆರವಿನಿಂದ ತಂಡ ಚೇತರಿಸಿಕೊಂಡಿತು. ಯೂಸುಫ್ ಪಠಾಣ್ ಅವರು ಅಜೇಯ 36 ರನ್ ಗಳಿಸುವುದರೊಂದಿಗೆ ಬರೋಡ ಇನ್ನೂರರ ಗಡಿದಾಟಿತು.
ಕರ್ನಾಟಕದ ಪರ ಶ್ರೇಯಸ್ ಗೋವಾಲ್47ರನ್‌ಗೆ 4 ವಿಕೆಟ್ ಗಳಿಸಿದರೆ, ಶುಭಾಂಗ್ ಹೆಗ್ಡೆ 74 ರನ್‌ಗೆ 4 ವಿಕೆಟ್ ಗಳಿಸಿದರು.
ಕರ್ನಾಟಕದ ದ್ವಿತೀಯ ಇನಿಂಗ್ಸ್ ಕೂಡ ಆತಂಕದಲ್ಲೇ ಆರಂಭಗೊಂಡಿತು. ಆರ್. ಸಮರ್ಥ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರೆ, ನೈಟ್‌ವಾಚ್ಮನ್ ಆಗಿ ಬಂದ ಶುಭಾಂಗ್ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. 13 ರನ್ ಗಳಿಸುತ್ತಲೇ ತಂಡ ಭಟ್ ಅವರ ಸ್ಪಿನ್ ದಾಳಿಗೆ ಸಿಲುಕಿ ಎರಡು ವಿಕೆಟ್ ಕಳೆದುಕೊಂಡಿದ್ದು, ಇನ್ನೂ 98 ರನ್ ಹಿನ್ನಡೆಯಲ್ಲಿದೆ.