ಸ್ಪೋರ್ಟ್ಸ್ ಮೇಲ್ ವರದಿ
ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಫೈನಲ್ ತಲಪುವ ಮೂಲಕ ಇತಿಹಾಸ ನಿರ್ಮಿಸಿದೆ. ಕರ್ನಾಟಕದ ವಾಲಿಬಾಲ್ ಇತಿಹಾಸದಲ್ಲೇ ರಾಜ್ಯ ತಂಡ ಇದೇ ಮೊದಲ ಬಾರಿಗೆ ಫೈನಲ್ ತಲುಪಿದೆ. 67 ವರ್ಷಗಳಿಂದ ನಡೆಯುತ್ತಿದ್ದ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಗುವ ಕ್ಷಣ ಸಮೀಪಿಸಿದೆ.
ಫೈನಲ್ ಪಂದ್ಯದಲ್ಲಿ ಹರಿಯಾಣ ವಿರುದ್ಧ ಜಯ 3-0 ಸೆಟ್‌ಗಳಅಂತರದಲ್ಲಿ ಜಯ ಗಳಿಸುವ ಮೂಲಕ ರಾಜ್ಯ ತಂಡ ಹೊಸ ಅಧ್ಯಾಯ ಬರೆಯಿತು. ಫೈನಲ್ ಪಂದ್ಯದಲ್ಲಿ ತಮಿಳುನಾಡು ಅಥವಾ ಕೇರಳ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ರಾಜ್ಯ ತಂಡ ಎದುರಿಸಲಿದೆ. ಶುಕ್ರವಾರ ಫೈನಲ್ ಪಂದ್ಯ ನಡೆಯಲಿದೆ.
1996ರಲ್ಲಿ ಕೋಲ್ಕೊತಾದಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡ ಮೂರನೇ ಸ್ಥಾನ ಗಳಿಸಿತ್ತು. ಆ ನಂತರ 2001ರಲ್ಲಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿತ್ತು.
ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ ಸೋಲನುಭವಿಸಿ ಆಘಾತಕಾರಿ ಆರಂಭ ಕಂಡಿತ್ತು. ಆದರೆ ತಮಿಳುನಾಡು ವಿರುದ್ಧದ ಎರಡನೇ ಪಂದ್ಯದಲ್ಲಿ 4-1 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿತು. ಪಂಜಾಬ್ ವಿರುದ್ಧ ನಡೆದ ಲೀಗ್ ಹಂತದ ಮೂರನೇ ಪಂದ್ಯದಲ್ಲಿ ರಾಜ್ಯ ತಂಡ ಐದು ಸೆಟ್‌ಗಳ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಹರಿಯಾಣ ವಿರುದ್ಧ 4 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿತು. ಸೆಮಿಫೈನಲ್‌ನಲ್ಲಿ ಪಂಜಾಬ್ ತಂಡವನ್ನು 3-0 ಸೆಟ್‌ಗಳಿಂದ ಮಣಿಸಿ 67 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿತು. ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯ ತಂಡ 25-13, 25-22, 25-20 ಅಂತರದಲ್ಲಿ ಪಂಜಾಬ್‌ಗೆ ಸೋಲುಣಿಸಿತು.
ಚೆನ್ನೈನಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಕರ್ನಾಟಕ ತಂಡದ ಪ್ರಧಾನ ಕೋಚ್ ಲಕ್ಷ್ಮೀನಾರಾಯಣ ಕೆ.ಆರ್. ಅವರು, ‘ಕರ್ನಾಟಕದ ವಾಲಿಬಾಲ್ ಇತಿಹಾಸದಲ್ಲೇಇದೊಂದು ಅವಿಸ್ಮರಣೀಯ ಕ್ಷಣ, ತಂಡದ ಪ್ರತಿಯೊಬ್ಬ ಆಟಗಾರರೂ ಉತ್ತಮವಾಗಿ ಸಂಘಟಿತ ಹೋರಾಟ ನೀಡಿದ್ದಾರೆ. ಫೈನಲ್‌ನಲ್ಲಿ ಗೆದ್ದರೆ ಅದು ಮತ್ತೊಂದು ಇತಿಹಾಸವಾಗಲಿದೆ. ವಾಲಿಬಾಲ್ ಆಟಗಾರರಿಗೆ ಈ ಯಶಸ್ಸು ಅವರ ಬದುಕಿನ ಮುಂದಿನ ದಿನಗಳಿಗೆ ನೆರವಾಗಲಿ ಎಂಬ ನಂಬಿಕೆ,‘ ಎಂದು ಹೇಳಿದರು.
ಇವರು ಇತಿಹಾಸ ಬರೆದ ಆಟಗಾರರು
ಕಾರ್ತಿಕ್ ಎ (ನಾಯಕ), ಅಶ್ವಲ್ ರೈ, ಭರತ್, ರವಿಕುಮಾರ್ ಟಿ.ಡಿ., ನಕುಲ್‌ದೇವ್, ರೈಸನ್ ಬೆನೆಟ್ ರೆಬೆಲ್ಲೊ, ಸುಜಿತ್ ಕುಮಾರ್, ಕಾರ್ತಿಕ್ ಎಸ್.ಎ., ಗಣೇಶ್ ಗೌಡ, ವಿನಾಯಕ ರೋಖಡೆ, ದರ್ಶನ್ ಎಸ್. ಗೌಡ, ಪ್ರತೀಕ್ ಶೆಟ್ಟಿ.
ಪ್ರಧಾನ ಕೋಚ್- ಲಕ್ಷ್ಮೀನಾರಾಯಣ ಕೆ.ಆರ್.