Friday, November 22, 2024

ರಣಜಿ: ಕರ್ನಾಟಕಕ್ಕೆ ಜಯದ ಹಾದಿ ಸುಲಭ, ಆದರೆ…

ಸ್ಪೋರ್ಟ್ಸ್ ಮೇಲ್ ವರದಿ

ರಾಜಸ್ಥಾನ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ಗೆಲ್ಲಲು ಆತಿಥೇಯ ಕರ್ನಾಟಕಕ್ಕೆ 184 ರನ್ ಜಯದ ಗುರಿ ಕಷ್ಟವೇನಲ್ಲ. ಆದರೆ 45 ರನ್ ಗಳಿಸುತ್ತಲೇ ಮೂರು ಅಮೂಲ್ಯ ವಿಕೆಟ್ ಕಳೆದುಕೊಂಡಿರುವ ಮನೀಶ್ ಪಾಂಡೆ ಪಡೆ ಅಂತಿಮ ದಿನದಲ್ಲಿ ಎಚ್ಚರಿಕೆಯ ಆಟವಾಡಬೇಕಾದ ಅನಿವಾರ್ಯತೆ ಇದೆ.

ದ್ವಿತೀಯ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡವನ್ನು 222ರನ್‌ಗೆ ಕಡಿವಾಣ ಹಾಕುವಲ್ಲಿ  ಕರ್ನಾಟಕ ಯಶಸ್ವಿಯಾಯಿತು. ಕೆ. ಗೌತಮ್ 4, ಶ್ರೇಯಸ್ ಗೋಪಾಲ್ 3 ಹಾಗೂ ಅಭಿಮನ್ಯು ಮಿಥುನ್ 2 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ರಾಜಸ್ಥಾನದ ನಾಯಕ ಮಹಿಪಾಲ್ ಲೊಮ್ರೋರ್ (42) ಹಾಗೂ ರಾಬಿನ್ ಬಿಸ್ಟ್ (44) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಬೌಲರ್‌ಗೆ ನೆರವಾದ ಪಿಚ್‌ನಲ್ಲಿ ಸವಾಲಿನ ಮೊತ್ತವನ್ನು ಗಳಿಸಿದರು.
ಮಧ್ಯಮ ವೇಗಿ ಅನಿಕೇತ್ ಚೌಧರಿ ಅವರ ಬೌಲಿಂಗ್ ದಾಳಿಗೆ ಸಿಲುಕಿದ ಕರ್ನಾಟಕ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಆರ್. ಸಮರ್ಥ್ (16), ಡಿ. ನಿಶ್ಚಲ್ (1) ಹಾಗೂ ಕೆ. ಸಿದ್ಧಾರ್ಥ್ (5) ಅವರ ವಿಕೆಟ್ ಬೇಗನೆ ಕಳೆದುಕೊಂಡಿತು. ಇದುವರೆಗೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿರುವ ಕರುಣ್ ನಾಯರ್ ಅಜೇಯ 18 ರನ್ ಗಳಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿದ್ದ ರೋನಿತ್ ಮೋರೆ ಮತ್ತೊಮ್ಮೆ ಜವಾಬ್ದಾರಿಯುತ ಆಟ ಪ್ರದರ್ಶಿಸುತ್ತಿದ್ದು, ತಾಳ್ಮೆಯಲ್ಲಿ 5 ರನ್ ಗಳಿಸಿದ್ದಾರೆ. 18 ಓವರ್‌ಗಳಲ್ಲಿ ಕರ್ನಾಟಕ 45 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದು, ಇನ್ನು ಅಂತಿಮ ದಿನದಲ್ಲಿ 139 ರನ್ ಗಳಿಸಬೇಕಾಗಿದೆ. ವಿನಯ್ ಕುಮಾರ್ ಅವರು ಮೊದಲ ಇನಿಂಗ್ಸ್‌ನಲ್ಲಿ ತೋರಿದ ಬ್ಯಾಟಿಂಗ್ ಶಕ್ತಿಯನ್ನು ನೈಜ ಬ್ಯಾಟ್ಸ್‌ಮನ್‌ಗಳು ತೋರಿದರೆ ಕರ್ನಾಟಕಕ್ಕೆ ಜಯದ ಹಾದಿ ಸುಲಭವಾಗಲಿದೆ.

Related Articles