Thursday, December 26, 2024

ಬಾಲ್‌ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಆಂಧ್ರಪ್ರದೇಶದ ಮಚಲೀಪಟ್ಟಣದ ಕೃಷ್ಣ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ವನಿತೆಯರ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸತತ ಐದನೇ ಬಾರಿ ಹಾಗೂ ದಾಖಲೆಯ ಎಂಟನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.

ದೇಶದ ೮೪ ವಿಶ್ವವಿದ್ಯಾನಿಲಯಗಳು ಪಾಲ್ಗೊಂಡಿದ್ದ ಈ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡ ಕೊಯಮತ್ತೂರಿನ ಭಾರತಿಯಾರ್ ವಿವಿ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿ ಸತತ ಹದಿನೈದನೇ ಬಾರಿಗೆ ಲೀಗ್ ಹಂತ ತಲುಪಿತು.
ಲೀಗ್ ಹಂತದ ಮೊದಲ ಪಂದ್ಯದಲ್ಲಿ ಮಂಗಳೂರು ವಿವಿ ಆತಿಥೇಯ ಕೃಷ್ಣ ವಿವಿ ತಂಡವನ್ನು 35-19,35-13 ಅಂತರದಲ್ಲಿ ಮಣಿಸಿತು. ಎರಡನೇ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ತಂಡ ಎಸ್‌ಆರ್‌ಎಂ ವಿವಿ ವಿರುದ್ಧ 27-35,35-26,35-29 ಅಂತರದಲ್ಲಿ  ಸೋಲಿಸಿತು. ಫೈನಲ್ ಪಂದ್ಯದಲ್ಲಿ ಕಲ್ಲಿಕೋಟೆ ವಿವಿ ತಂಡವನ್ನು35-21, 35-19 ಅಂತರದಲ್ಲಿ ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಕ್ಯಾಲಿಕಟ್ ವಿವಿ ರನ್ನರ್ ಅಪ್ ಗೌರವಕ್ಕೆ ಪಾತ್ರವಾಯಿತು. ಎಸ್‌ಆರ್‌ಎಂ ವಿವಿ ಮೂರನೇ ಸ್ಥಾನ ಗಳಿಸಿತು. ಆತಿಥೇಯ ಕೃಷ್ಣ ವಿವಿ ನಾಲ್ಕನೇ ಸ್ಥಾನ ಗಳಿಸಿತು.
ಮಂಗಳೂರು ವಿವಿ ತಂಡದ ನಾಯಕಿ, ಸ್ಟಾರ್ ಆಫ್ ಇಂಡಿಯಾ ಖ್ಯಾತಿಯ ಜಯಲಕ್ಷ್ಮೀ ಅತ್ಯುತ್ತಮ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

Related Articles