ಕೆಲವೊಂದು ಸಾಧನೆ ಮಾಡಲು ಹೆತ್ತವರು ಆತಂಕಪಡುತ್ತಾರೆ. ಏಕೆಂದರೆ ಆ ಸಾಧನೆಯ ಹಾದಿ ಅಪಾಯದಿಂದ ಕೂಡಿರುತ್ತದೆ. ತಾನು ರ‌್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ತಂದೆಗೆ ಗೊತ್ತಾದರೆ ಅವರು ನೊಂದುಕೊಳ್ಳುತ್ತಾರೆ, ಅಥವಾ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಅರಿತ ಆ ಯುವ ರೈಡರ್ ತಂದೆಯ ಗಮನಕ್ಕೆ ತಾರದೆ ಹಲವಾರು ರ‌್ಯಾಲಿಗಳಲ್ಲಿ ಪಾಲ್ಗೊಂಡು ಯಶಸ್ಸು ಕಾಣುತ್ತಾನೆ. ಆದರೆ ಈಗ ಹೆತ್ತವರಿಗೆ ತಮ್ಮ ಮಗನ ಸಾಧನೆ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಏಕೆಂದರೆ ಆ ರ‌್ಯಾಲಿ ಪಟು ಈಗ ದೇಶವೇ ಮೆಚ್ಚುವಂಥ ಸಾಧನೆ ಮಾಡಿದ್ದಾರೆ. 2019ರ ಡಕಾರ್ ರ‌್ಯಾಲಿಯನ್ನು ಪೂರ್ಣಗೊಳಿಸಿದ ಭಾರತದ ಎರಡನೇ ರೈಡರ್ ಎನಿಸಿರುವ ಉಡುಪಿಯ ಕಡಿಯಾಳಿಯ ಕೆ.ಪಿ. ಅರವಿಂದ್ ಸ್ಪೋರ್ಟ್ಸ್ ಮೇಲ್ ಗೆ ನೀಡಿದ ವಿಶೇಷ ಸಂದರ್ಶನದ ಪ್ರಮುಖ ಅಂಶ ಇಲ್ಲಿದೆ.
ಹೆತ್ತವರಿಗೆ ಖುಷಿಯಾಗಿದೆ, ಅದಕ್ಕಿಂತ ಇನ್ನೇನು ಬೇಕು ? : ಕೆ.ಪಿ. ಅರವಿಂದ್
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್
ಆರಂಭದ ದಿನಗಳಲ್ಲಿ ಹೆತ್ತವರಿಗೆ ಹೇಳದೇ ರ‌್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದೀರಲ್ಲ?
ಹೌದು, ನಮ್ಮ ತಂದೆಗೆ ನಾನೆಂದರೆ ಜೀವ. ನಾನು ಕ್ಷೇಮವಾಗಿ ಇರಬೇಕು ಎಂಬುದೇ ಅವರ ಆಸೆ. ರ‌್ಯಾಲಿಗಳಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ ಅಂಥ ಅವರಿಗೆ ಗೊತ್ತಿತ್ತು. ಆ ಕಾರಣಕ್ಕಾಗಿ ಈ ರೀತಿಯ ಸಾಧನೆ ಇಷ್ಟ ಇರಲಿಲ್ಲ. ಅವರಿಗೆ ಹೇಳದೆ ಅನೇಕ ರ‌್ಯಾಲಿಗಳಲ್ಲಿ ಪಾಲ್ಗೊಂಡಿರುವೆ. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದರೆ ಮಾತ್ರ ಅವರಿಗೆ ವಿಷಯ ತಿಳಿಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ಸಾಧನೆ ಅವರಿಗೆ ಖುಷಿ ಕೊಟ್ಟಿತ್ತು. ಡಕಾರ್ ಪೂರ್ಣಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅದೇ ನನಗೆ ಖುಷಿ. ಡಕಾರ್ ಗೆದ್ದಷ್ಟೇ ಸಂಭ್ರಮ.
ರ‌್ಯಾಲಿಯ ವೇಳೆ ಕನ್ನಡಿಗ ಸಿಎಸ್ ಸಂತೋಷ್ ಗಾಯಗೊಂಡಿರುವುದು ನಿಮ್ಮ ಗಮನಕ್ಕೆ ಬಂದಿತ್ತೇ?
ಬಂದಿತ್ತು, ಅವರನ್ನು ಮಾತನಾಡಿಸಿಯೇ ಮುಂದೆ ಸಾಗಿದೆ. ದಾರಿಯಲ್ಲಿ ಸಾಗುವಾಗ ಅವರು ಅಪಘಾತಕ್ಕೀಡಾಗಿರುವುದು ತಿಳಿದು ಬಂತು. ಅವರೊಂದಿಗೆ ಅವರ ತಂಡದ ಸದಸ್ಯರು ಇದ್ದ ಕಾರಣ, ಸುಮಾರು ಇಪ್ಪತ್ತು ನಿಮಿಷಗಳ ಕಾಲ ಅಲ್ಲಿದ್ದು ಮುಂದೆ ಸಾಗಿದೆ. ಕೆಲಹೊತ್ತು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದರಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಅವರೊಬ್ಬ ಕೆಚ್ಚೆದೆಯ ರಾಲಿಪಟು. ಡಕಾರ್ ರ‌್ಯಾಲಿಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ. ಈಗ ಚೇತರಿಸಿಕೊಂಡಿದ್ದಾರೆ.
ಜಗತ್ತಿನ ಅತ್ಯಂತ ಅಪಾಯಕಾರಿ ರ‌್ಯಾಲಿ ಪೂರ್ಣಗೊಳಿಸಿರು ವುದಕ್ಕೆ ಹೇಗನ್ನಿಸುತ್ತಿದೆ?
ದೊಡ್ಡ ಭಾರವೊಂದು ಇಳಿದಂತಾಗಿದೆ. ಸತತ ಮೂರು ವರ್ಷಗಳಿಂದ ಈ ರ‌್ಯಾಲಿಯನ್ನು ಪೂರ್ಣಗೊಳಿಸುವ ಗುರಿಹೊಂದಿದ್ದೆ. ಎರಡು ಬಾರಿ ವಿಫಲನಾಗಿದ್ದೆ. ಆದರೆ ಈ ಬಾರಿ ಅಂದಾಜು 5000 ಕಿ.ಮೀ. ಅಂತರವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದೆ. ಈ ಸಾಧನೆ ಮಾಡಿದ ಭಾರತದ ಎರಡನೇ ರ‌್ಯಾಲಿಪಟು ಎಂಬ ಹೆಮ್ಮೆಯೂ ಇದೆ.
ಭಾರತಕ್ಕೆ ಈ ರ‌್ಯಾಲಿಯಲ್ಲಿ ಗೆಲ್ಲುವ ಸಾಧ್ಯತೆ ಇದೆಯೇ?
ಖಂಡಿತಾ ಸಾಧ್ಯವಿದೆ. ಆದರೆ ಇದಕ್ಕೆ ಕಾಲಾವಕಾಶ ಬೇಕು. ನಿರಂತರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ ಇದು ಸಾಧ್ಯ ಮೋಟಾರ್ ಸ್ಪೋರ್ಟ್ಸ್‌ಗೆ ಸರಕಾರ ಪ್ರೋತ್ಸಾಹ ನೀಡಬೇಕು. ಇದೊಂದು ಸಾಹಸ ಕ್ರೀಡೆ. ರ‌್ಯಾಲಿಗಳನ್ನು ಆಯೋಜಿಸಲು ನೆರವಾಗಬೇಕು. ಉತ್ತಮ ತರಬೇತಿಗೆ ಪ್ರೋತ್ಸಾಹ ನೀಡಬೇಕು. ಹಾಗಾದಲ್ಲಿ ಮಾತ್ರ ಮೋಟಾರ್ ಸ್ಪೋರ್ಟ್ಸ್ ಕಡೆಗೆ ಹೆಚ್ಚಿನ ಯುವಕರು ತಮ್ಮ ಗಮನ ಹರಿಸುತ್ತಾರೆ. ಜಗತ್ತಿನ ಯಾವುದೇ ರ‌್ಯಾಲಿಯನ್ನು ಗೆಲ್ಲುವ ಸಾಮರ್ಥ್ಯ ಭಾರತೀಯರಲ್ಲಿದೆ. ಮುಂದಿನ ಡಕಾರ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಹೆಚ್ಚಿನ ಶ್ರಮ ವಹಿಸುವೆ.
ಮೋಟಾರ್ ಸ್ಪೋರ್ಟ್ಸ್ ಆರ್ಥಿಕ ಭದ್ರತೆಯನ್ನು ನೀಡುತ್ತದೆಯೇ?
ಇತರ ಕ್ರೀಡೆಗಳಂತೆ ಇಲ್ಲಿ ಅತ್ಯಂತ ವೈಭವದ ಬದುಕನ್ನು ಕಾಣಲು ಸಾಧ್ಯವಿಲ್ಲ. ಸಾಧಾರಣ ಬದುಕು ನಡೆಸಲು ಯಾವುದೇ ತೊಂದರೆ ಇಲ್ಲ. ಕಂಪನಿಗಳ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದರೆ ಹೆಚ್ಚು ಅನುಕೂಲವಾಗುತ್ತದೆ. ನಾನೀಗ ಟಿವಿಎಸ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರ‌್ಯಾಲಿಪಟುಗಳ ಬದುಕು ಅಷ್ಟು ಉತ್ತಮವಾಗಿಲ್ಲ.