Sunday, December 22, 2024

ವಿಜಯ್ ಹಜಾರೆ: ಕನ್ನಡಿಗರ ಖದರ್‌ಗೆ ಒಡಿಶಾ ಉಡೀಸ್

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಒಡಿಶಾ ತಂಡವನ್ನು 133 ರನ್‌ಗಳಿಂದ ಭರ್ಜರಿಯಾಗಿ ಬಗ್ಗು ಬಡಿದಿದೆ.
ಈ ಮೂಲಕ ’ಎ’ ಗುಂಪಿನಲ್ಲಿ 5 ಪಂದ್ಯಗಳಿಂದ 14 ಅಂಕಗಳನ್ನು ಸಂಪಾದಿಸುವ ಮೂಲಕ ನಾಕೌಟ್ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ.
ಇಲ್ಲಿನ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನ(1)ರಲ್ಲಿ ಮಂಗಳವಾರ ನಡೆದ ‘ಪಂದ್ಯದಲ್ಲಿ ಕರ್ನಾಟಕ ಸಂಘಟಿತ ಪ್ರದರ್ಶನ ತೋರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 353 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಭರ್ಜರಿ ಶತಕಗಳನ್ನು ಬಾರಿಸಿದರು.
ಬಿರುಸಿನ ಆಟವಾಡಿದ  ಮಯಾಂಕ್ 94 ಎಸೆತಗಳಲ್ಲಿ 102 ರನ್ ಬಾರಿಸಿದರೆ, ಕರುಣ್ 111 ಎಸೆತಗಳಲ್ಲಿ 100ರ ರನ್ ಗಳಿಸಿದರು.  ಮಧ್ಯಮ ಕ್ರಮಾಂಕದಲ್ಲಿ ಆರ್ಭಟಿಸಿದ ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ 37 ಎಸೆತಗಳಲ್ಲಿ 54 ರನ್ ಸಿಡಿಸಿದರೆ, ಸ್ಲಾಗ್ ಓವರ್‌ಗಳಲ್ಲಿ ಒಡಿಶಾ ದಾಳಿಯನ್ನು ಧೂಳೀಪಟ ಮಾಡಿದ ಆಲ್ರೌಂಡರ್ ಕೆ.ಗೌತಮ್ ಕೇವಲ 20 ಎಸೆತಗಳಲ್ಲಿ 47 ರನ್ ಬಾರಿಸಿದರು.
ಬಳಿಕ 354 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಒಡಿಶಾ ತಂಡ 41 ಓವರ್‌ಗಳಲ್ಲಿ 220 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರಸಕ್ತ ವಿಜಯ್ ಹಜಾರೆ ಟ್ರೋಫಿಯಲ್ಲಿ  ಮೊದಲ ಪಂದ್ಯವಾಡಿದ ಎಡಗೈ ಸ್ಪಿನ್ನರ್ ಜೆ.ಸುಚಿತ್ 34 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಒಡಿಶಾ ಕುಸಿತಕ್ಕೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 353 ರನ್
ಮಯಾಂಕ್ ಅಗರ್ವಾಲ್  102, ಕರುಣ್ ನಾಯರ್ 100, ಪವನ್ ದೇಶಪಾಂಡೆ ಅಜೇಯ 54,
ಕೆ.ಗೌತಮ್  47; ದೇವವ್ರತ್ ಪ್ರಧಾನ್  2/69, ದೀಪಕ್ ಬೆಹೆರಾ 2/76.
ಒಡಿಶಾ: 41 ಓವರ್‌ಗಳಲ್ಲಿ 220ಕ್ಕೆ ಆಲೌಟ್
ರಾಜೇಶ್ ಧುಪೆರ್ 53, ಅನುರಾಗ್ ಸಾರಂಗಿ 58; ಜೆ.ಸುಚಿತ್ 5/34, ಶ್ರೇಯಸ್ ಗೋಪಾಲ್ 2/55, ಕೆ.ಗೌತಮ್ 2/38.

Related Articles