ಸ್ಪೋರ್ಟ್ಸ್ ಮೇಲ್ ವರದಿ
ಕುಂದಾಪುರದ ಟಾರ್ಪೆಡೋಸ್ ಕ್ರಿಕೆಟ್ ತಂಡದ ಮೂಲಕ ತಮ್ಮನ್ನು ಗುರುತಿಸಿಕೊಂಡ ಗೌತಮ್ ಶೆಟ್ಟಿ ಅವರು ಆಟದ ಅಂಗಣದಿಂದ ದೂರ ಸರಿದರೂ ತಮ್ಮ ಪ್ರವೃತ್ತಿಯನ್ನು ಅತ್ಯಂತ ವೃತ್ತಿಪರವಾಗಿ ಮುಂದುವರಿಸಿದ್ದಾರೆ. ತಾವೇ ಕಟ್ಟಿ ಬೆಳೆಸಿದ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯದ ಪೊಲೀಸರಿಗಾಗಿಯೇ ಆಯೋಜಿಸಿದ್ದ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ರಾಜ್ಯದ ಕ್ರೀಡಾ ಇತಿಹಾಸದಲ್ಲೊಂದು ಹೊಸ ಅಧ್ಯಾಯ ಬರೆಯಿತು.
ಜನವರಿ 27ರಂದು ಹಳೆಯಂಗಡಿಯಲ್ಲಿರುವ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪೊಲೀಸರಿಗಾಗಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರಾಜ್ಯದ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ಪಾಲ್ಗೊಂಡು ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಮಡಿಕೇರಿ ವಿಭಾಗದ ಎಎಸ್‌ಐ ಜಿತೇಂದ್ರ ರೈ ಹಾಗೂ ಬೆಂಗಳೂರಿನ ಸಿಎಆರ್ ದಿನೇಶ್ ಶೆಟ್ಟಿ ಜೋಡಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಉಡುಪಿಯ ಡಿಎಆರ್ ಕಿಶನ್ ಹಾಗೂ ರಾಘವೇಂದ್ರ ಜೋಡಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಉಡುಪಿಯ ಡಿಎಆರ್ ಕಿಶನ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಮಡಿಕೇರಿಯ ಎಎಸ್‌ಐ ಜಿತೇಂದ್ರರ ರನ್ನರ್ ಅಪ್ ಗೌರವಕ್ಕೆ ಪಾತ್ರರರಾದರು.
ಚಾಂಪಿಯನ್‌ಷಿಪ್ ಉದ್ಘಾಟಿಸಿ ಮಾತನಾಡಿದ ಡಾ. ಅರವಿಂದ್ ಭಟ್, ಪೊಲೀಸರಲ್ಲಿರುವ ಕ್ರೀಡಾ ಕೌಶಲವನ್ನು ಪ್ರಕಟಪಡಿಸಲು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಿರುವುದು ಸ್ವಾಗತಾರ್ಹ ಎಂದರು. ಮಂಗಳೂರು, ಉಡುಪಿ, ಮೂಲ್ಕಿ, ಕಾರ್ಕಳ, ಕುಂದಾಪುರ, ಮಡಿಕೇರಿ, ಬೆಂಗಳೂರು, ಪಣಂಬೂರು ಹಾಗೂ ಸುರತ್ಕಲ್‌ನ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಚಾಂಪಿಯನ್‌ಷಿಪ್ ಕುರಿತು ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ, ‘ಅನೇಕ ಕ್ರೀಡಾಪಟುಗಳು, ಕ್ರೀಡಾಸಕ್ತರು ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಂತರ ಮತ್ತೆ ಸಂಬಂಧಪಟ್ಟ ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಬಹಳ ಕಡಿಮೆ. ಸ್ಪರ್ಧೆಯಿಂದ ಹಿಂದೆ ಸರಿದ ಮೇಲೂ ಕೆಲವರು ಆಟದಲ್ಲಿ ಮುಂದುವರಿಯುತ್ತಿರುತ್ತಾರೆ. ಆದರೆ ಅವರಿಗೆ ಸೂಕ್ತವಾದ ಟೂರ್ನಿಗಳು ಸಿಗುತ್ತಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಮೊದಲ ಬಾರಿಗೆ ಪೊಲೀಸರಿಗಾಗಿ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಿದೆವು, ಮುಂದೆ ಹಲವು ರೀತಿಯ ಟೂರ್ನಿಗಳನ್ನು ಆಯೋಜಿಸುವ ಯೋಜನೆ ಹಮ್ಮಿಕೊಂಡಿದ್ದೇವೆ, ಸದ್ಯದಲ್ಲೇ ಡಾಕ್ಟರ್‌ಗಳಿಗಾಗಿ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ,‘ ಎಂದರು.