ಗೋವಾ, ಫೆಬ್ರವರಿ 14
ಜಾಕಿಚಂದ್ ಸಿಂಗ್ (1ನೇ ನಿಮಿಷ) ಹಾಗೂ ಫರಾನ್ ಕೊರೊಮಿನಾಸ್ (52 ಹಾಗೂ 81ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಟಿಕೆ ತಂಡವನ್ನು 3-0 ಅಂತರದಲ್ಲಿ ಮಣಿಸಿದ ಗೋವಾ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ಒಟ್ಟು 28 ಅಂಕಗಳೊಂದಿಗೆ ಗೋವಾ ಎರಡನೇ ಸ್ಥಾನ ತಲುಪಿತು.
ಗೋಲ್ಡನ್ ಬೂಟ್ ಮತ್ತೆ ಸಮಬಲ
ಎಟಿಕೆ ವಿರುದ್ಧದ ಪ್ರಥಮಾರ್ಧದಲ್ಲಿ ಜಾಕಿಚಾಂದ್ ಗೆ ಗೋಲು ಗಳಿಸುವಲ್ಲಿ ನೆರವಾಗಿದ್ದ ಫರಾನ್ ಕೊರೊಮಿನಾಸ್ ದ್ವಿತೀಯಾರ್ಧದ 52ನೇ ನಿಮಿಷದಲ್ಲಿ ಸ್ವತಃ ತಾನೇ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು. ನಂತರ 81ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಮತ್ತೊಂದು ಗೋಲು ಗಳಿಸಿದರು. ಫೆರಾನ್ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ನಲ್ಲಿ ಒಟ್ಟು 13ನೇ ಗೋಲು ಗಳಿಸಿದರು. ಇದರೊಂದಿಗೆ ಸದ್ಯ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಇಬ್ಬರು ಸ್ಪಷ್ಟ ಪೈಪೋಟಿ ನಡೆಸುತ್ತಿರುವಂತಾಯಿತು. ನಾರ್ತ್ ಈಸ್ಟ್ ಯುನೈಟೆಡ್ ನ ಬಾರ್ತಲೋಮ್ಯೋ ಒಗ್ಬೇಚೆ ಕೂಡ 12 ಗೋಲುಗಳನ್ನು ಗಳಿಸಿ ಸ್ಪರ್ಧೆಯಲ್ಲಿದ್ದಾರೆ.
ಗೋವಾ ಮೇಲುಗೈ
ಪಂದ್ಯ ಆರಂಭಗೊಂಡ 1ನೇ ನಿಮಿಷದಲ್ಲಿ ಜಾಕಿಚಂದ್ ಸಿಂಗ್ ಗಳಿಸಿದ ಗೋಲಿನಿಂದ ಆತಿಥೇಯ ಗೋವಾ ತಂಡ ಮೇಲುಗೈ ಸಾಧಿಸಿತು. ಗೋವಾದ ಆಕ್ರಮಣಕಾರಿ ಆಟವನ್ನು ನಿಯಂತ್ರಿಸುವಲ್ಲಿ ಎಟಿಕೆ ವಿಲವಾಯಿತು. ಎಡ ಭಾಗದಿಂದ ಫೆರಾನ್ ಕೊರೊಮಿನಾಸ್ ನೀಡಿದ ಪಾಸ್ ಜಾಕಿಚಂದ್ ಸಿಂಗ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಗೋಲ್ ಪೋಸ್ಟ್ನ ಹತ್ತಿರದಲ್ಲೇ ಸಿಕ್ಕ್ ಈ ಅವಕಾಶವನ್ನು ಜಾಕಿಚಂದ್ ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡರು. ನೇರವಾಗಿ ಗೋಲ್ಬಾಕ್ಸ್ಗೆ ಗುರಿ ಇಟ್ಟು ತಂಡಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು. ಅರಿಂದಮ್ ಭಟ್ಟಾಚಾರ್ಯ ಅವರಿಗೆ ಚೆಂಡನ್ನು ತಡೆಯಲು ಯಾವುದೇ ಅವಕಾಶ ಸಿಗಲಿಲ್ಲ. ಗೋವಾಕ್ಕೆ 45 ನಿಮಿಷಗಳ ಅವಧಿಯಲ್ಲಿ ಮತ್ತೊಂದು ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಎಟಿಕೆ ಅದನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಪ್ರಥಮಾರ್ಧ 1-0 ಗೋಲಿನ ಅಂತರದಲ್ಲಿ ಕೊನೆಗೊಂಡಿತು.
ಹೀರೋ ಇಂಡಿಯನ್ ಸೂಪರ್ ಲೀಗ್ನ 76ನೇ ಪಂದ್ಯದಲ್ಲಿ ಆತಿಥೇಯ ಗೋವಾ ಹಾಗೂ ಪ್ರವಾಸಿ ಎಟಿಕೆ ತಂಡಗಳು ಅಂತಿಮ ನಾಲ್ಕರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾದವು. ಎಟಿಕೆ ತಂಡಕ್ಕೆ ಇದು ಮಾಡು ಇಲ್ಲವೆ ಮಡಿ ಪಂದ್ಯ ಇದ್ದಂತೆ. ತನಗಿಂತ ಮೇಲಿರುವ ತಂಡಗಳೊಂದಿಗೆ ಹೋರಾಟ ನಡೆಸಬೇಕಾದರೆ ಆರರನೇ ಸ್ಥಾನದಲ್ಲಿರುವ ಎಟಿಕೆ ಇಲ್ಲಿ ಜಯ ಸಾಧಿಸಲೇಬೇಕು. ಎಟಿಕೆ ಈಗ ಅಂತಿಮ ನಾಲ್ಕರ ತಂಡಗಳಿಗಿಂತ ಹೊರಗಿದ್ದು, ಇನ್ನೂ ನಾಲ್ಕು ಅಂಕ ಗಳಿಸಬೇಕಾಗಿದೆ. ಗೋವಾ ವಿರುದ್ಧ ಜಯ ಗಳಿಸಿದರೆ ಹೋರಾಟದಲ್ಲಿ ಮುಂದುವರಿಯಬಹುದು. ಎರಡು ತಂಡಗಳ ನಡುವಿನ ಏಳು ಪಂದ್ಯಗಳಲ್ಲಿ ಜಯಕ್ಕಿಂತ ಡ್ರಾ ನಡೆದಿದ್ದೇ ಹೆಚ್ಚು. ಕೋಲ್ಕೊತಾ ಮೂರು ಬಾರಿ ಜಯ ಗಳಿಸಿದೆ. ಗೋವಾ ತಂಡ ಒಂದು ಬಾರಿ ಜಯ ಗಳಿಸಿದೆ. ಆದರೆ ಹಿಂದಿನ ಲಿತಾಂಶಗಳು ಇಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಇಲ್ಲಿ ಗೆಲ್ಲುವ ತಂಡ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲಿದೆ. ಚಳಿಗಾಲದ ವಿರಾಮದ ನಂತರ ಗೋವಾ ತಂಡ ಉತ್ತಮ ರೀತಿಯಲ್ಲಿ ದಾಳಿ ನಡೆಸುತ್ತಿದ್ದರೂ ಡಿಫೆನ್ಸ್ ವಿಭಾಗದಲ್ಲಿ ಹಿಂದೆ ಬಿದ್ದಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಗೋವಾ ಎರಡು ಪಂದ್ಯಗಳಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿದೆ. ಎಟಿಕೆ ತಂಡ ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿದೆ, ಆದರೆ ಗೆದ್ದಿರುವುದು ಮಾತ್ರ ಒಂದು ಪಂದ್ಯದಲ್ಲಿ. ಎರಡು ಪಂದ್ಯಗಳಲ್ಲಿ ಡ್ರಾ ಕಂಡಿದೆ. ಆದರೆ ಇನ್ನುಳಿದಿರುವ ಪಂದ್ಯಗಳಲ್ಲಿ ಡ್ರಾ ಯಾವುದೇ ರೀತಿಯ ಪ್ರಯೋಜನವಾಗದು. ಈ ಹಿಂದೆ ಇತ್ತಂಡಗಲು ಮುಖಾಮುಖಿಯಾದಾಗ ಪಂದ್ಯ ಗೋಲಿಲ್ಲದೆ ಡ್ರಾಗೊಂಡಿತ್ತು.