ಸ್ಪೋರ್ಟ್ಸ್ ಮೇಲ್ ವರದಿ
ಅತ್ಯಂತ ರೋಚಕವಾಗಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು 3-2 ಸೆಟ್‌ಗಳಿಂದ ಸೋಲಿಸಿದ ಚೆನ್ನೈ ಸ್ಪಾರ್ಟನ್ಸ್ ತಂಡ ಪ್ರೊ ವಾಲಿಬಾಲ್ ಲೀಗ್‌ನ ಫೈನಲ್ ತಲುಪಿದೆ. ಫೈನಲ್ ಪಂದ್ಯದಲ್ಲಿ ಸ್ಪಾರ್ಟನ್ಸ್ ಕ್ಯಾಲಿಕಟ್ ಹೀರೋಸ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಬುಧವಾರದ ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈ ಸ್ಪಾರ್ಟನ್ಸ್ ಪಡೆ 16-14, 9-15, 10-15, 15-8, 15-13 ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತು ತಲುಪಿತು. ಚೆನ್ನೈ ಪರ ರುಸ್ಲಾನ್ಸ್ ಸೊರೊಕಿನ್ಸ್ 17 ಅಂಕಗಳನ್ನು ಗಳಿಸಿ ಪಂದ್ಯದ ಹೀರೋ ಎನಿಸಿದರು. ರುಸ್ಲಾನ್ಸ್ 15 ಸ್ಪೈಕ್ಸ್. 1 ಬ್ಲಾಕ್ ಹಾಗೂ 1 ಸರ್ವ್ ಅಂಕಗಳ ಮೂಲಕ ಚೆನ್ನೈ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಕೊಚ್ಚಿ ಪರ ಮನು ಜೋಸೆಫ್ ಕೂಡ 17 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಚೆನ್ನೈ ಮೊದಲ ಸೆಟ್ ಗೆದ್ದುಕೊಂಡು ನಂತರದ ಎರಡು ಸೆಟ್‌ಗಳಲ್ಲಿ ಆಘಾತ ಅನುಭವಿಸಿ ಆಂತಕದಲ್ಲಿದ್ದಿತ್ತು. ಆದರೆ ನಂತರದ ಎರಡು ಸೆಟ್‌ಗಳಲ್ಲಿ ಜಯ ಗಳಿಸಿ ಶುಕ್ರವಾರ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿತು.
ಮೊದಲ ಸೆಟ್ ಅತ್ಯಂತ ರೋಕಚವಾಗಿ ನಡೆದಿತ್ತು, ಒಂದು ಹಂತದಲ್ಲಿ ಪಂದ್ಯ 6-6ರಲ್ಲಿ ಸಮಬಲಗೊಂಡಿತ್ತು. ಆದರೆ ಸೊರೊಕಿನ್ಸ್ ಅವರ ಅದ್ಭುತ ಆಟದ ನೆರವಿನಿಂದ ಚೆನ್ನೈ 8-7 ರಲ್ಲಿ ಮುನ್ನಡೆ ಕಂಡಿತು. ನಂತರ ಕೊಚ್ಚಿ ಪರ ಪ್ರಭಾಕರನ್ ಉತ್ತಮ ಆಟ ಪ್ರದರ್ಶಿಸಿದುದರ ಪರಿಣಾಮ 10-8ರಲ್ಲಿ ಮುನ್ನಡೆ ಕಂಡಿತು. ಇತ್ತಂಡಗಳ ಸಮಬಲದ ಹೋರಾಟದ ಪರಿಣಾಮ ಸ್ಕೋರ್ ಒಂದು ಹಂತದಲ್ಲಿ 11-11ರಲ್ಲಿ ಸಮಬಲಗೊಂಡಿತು. ಆದರೆ ಚೆನ್ನೈ ಅಂತಿಮವಾಗಿ 16-14 ಅಂತರದಲ್ಲಿ ಸೆಟ್ ಗೆದ್ದುಕೊಂಡಿತು. ನಂತರದ ಎರಡೂ ಸೆಟ್‌ಗಳಲ್ಲಿ ಕೊಚ್ಚಿ ಜಯ ಗಳಿಸಿದುದರ ಪರಿಣಾಮ ಆತಿಥೇಯ ಚೆನ್ನೈ ಒತ್ತಡಕ್ಕೆ ಸಿಲುಕಿತು. ಆದರೆ ಸೊರೊಕಿನ್ಸ್ ಅವರ ಅದ್ಭುತ ಆಟದ ನೆರವಿನಿಂದ 15-8, 15-13 ಅಂತರದಲ್ಲಿ ನಂತರದ ಎರಡೂ ಸೆಟ್‌ಗಳನ್ನು ಗೆದ್ದು ಕೊಂಡ ಚೆನ್ನೈ ಫೈನಲ್ ಪ್ರವೇಶಿಸಿತು.