Friday, November 22, 2024

ಟಾರ್ಪೆಡೋಸ್ ಟಿ10 ಬ್ಯಾಶ್: ಡಿಎನ್‌ಐ, ಎನ್‌ಐಟಿಕೆ ತಂಡಗಳ ಮೇಲುಗೈ

ಸ್ಪೋರ್ಟ್ಸ್ ಮೇಲ್ ವರದಿ 

ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇದರ ಆಶ್ರಯದಲ್ಲಿ ಇಲ್ಲಿನ ಎನ್‌ಎಂಪಿಟಿ ಅಂಗಣದಲ್ಲಿ ನಡೆಯುತ್ತಿರುವ ಟಾರ್ಪೆಡೋಸ್ ಟಿ10 ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಬಲಿಷ್ಠ ಎನ್‌ಐಟಿಕೆ ಸುರತ್ಕಲ್ ಹಾಗೂ ಡಿಎನ್‌ಐ ತಂಡಗಳು ಅದ್ಭುತ ಜಯ ಗಳಿಸಿ ಮುನ್ನಡೆದಿವೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ  ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಸುರತ್ಕಲ್‌ನ ಎನ್‌ಐಟಿಕೆ ಆಡಿದ ಎರಡೂ ಪಂದ್ಯಗಳಲ್ಲೂ ಜಯ ಗಳಿಸಿ ಮೇಲುಗೈ ಸಾಧಿಸಿತು.  ತೆಲಂಗಾಣ ವಿರುದ್ಧ ನಡೆದ ಪಂದ್ಯದಲ್ಲಿ ಎನ್‌ಎಟಿಕೆ 10 ವಿಕೆಟ್ ಗಳ  ಜಯ ಗಳಿಸಿದರೆ, ಆ ನಂತರ ಎಂಸಿಎಫ್  ವಿರುದ್ಧ ನಡೆದ ಪಂದ್ಯದಲ್ಲಿ  4 ವಿಕೆಟ್ ಜಯ ಗಳಿಸಿತು.
ಮೊದಲ ಪಂದ್ಯದಲ್ಲಿ ತೆಲಂಗಾಣ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಎನ್‌ಐಟಿಕೆಯ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿದ ತೆಲಂಗಾಣ 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ  58 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಎನ್‌ಐಟಿಕೆ  6.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿ 10 ವಿಕೆಟ್‌ಗಳ ಜಯ ಗಳಿಸಿತು.  ಕೀರ್ತನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಎನ್‌ಐಟಿಕೆ ಎರಡನೇ ಪಂದ್ಯದಲ್ಲಿ ಎಂಸಿಎಫ್  ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿ, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎಂಬಂತೆ ಹೆಜ್ಜೆ ಇಟ್ಟಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಂಸಿಎಫ್  10 ಓವರ್‌ಗಳಲ್ಲಿ ಕೇವಲ 63 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಎನ್‌ಐಟಿಕೆ  3 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.
ಡಿಎನ್‌ಐ ಹಾಗೂ ಸೆಂಟ್ರಲ್ ಆಂಧ್ರ ತಂಡಗಳ ನಡುವಿನ ಪಂದ್ಯದಲ್ಲಿ ಡಿಎನ್‌ಐ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತ ದಾಖಲಿಸಿತು. 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ವಿಜಯ್ (33) ಹಾಗೂ ಅಲೀಮ್ (ಔಟಗಾದೆ 43) ತಂಡದ ಬೃಹತ್ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೆ ಉತ್ತರವಾಗಿ ಆಂಧ್ರ   4 ವಿಕೆಟ್ ನಷ್ಟಕ್ಕೆ ಕೇವಲ 76 ರನ್ ಗಳಿಸಿ ಸೋಲನುಭವಿಸಿತು. ಅಲೀಮ್ ಪಂದ್ಯಶ್ರೇಷ್ಠರೆನಿಸಿದರು.
ದಿನದ ಇತರ ಪಂದ್ಯಗಳ ಲಿತಾಂಶ
ತೆಲಂಗಾಣ (5 ವಿಕೆಟ್‌ಗೆ 64 ರನ್) ವಿರುದ್ಧ ಮಂಗಳೂರಿನ ಎಂಸಿಎಫ್  (ವಿಕೆಟ್ ನಷ್ಟವಿಲ್ಲದೆ 65)ಗೆ 10 ವಿಕೆಟ್ ಜಯ.
ಬೆದ್ರಾ ಫ್ರೆಂಡ್ಸ್  (9 ವಿಕೆಟ್ ನಷ್ಟಕ್ಕೆ 60ರನ್) ವಿರುದ್ಧ ಇಂಡಿಯನ್ ಪೋರ್ಟ್ (6.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 64ರನ್) 8 ವಿಕೆಟ್ ಜಯ.

Related Articles