ಏಜೆನ್ಸೀಸ್ ನಾಗ್ಪುರ
ವಿರಾಟ್ ಕೊಹ್ಲಿ ಅವರ ೪೦ನೇ ಏಕದಿನ ಶತಕ (116) ಹಾಗೂ ವಿಜಯ ಶಂಕರ್ ಅವರ ಕೊನೆಯ ಓವರ್‌ನ ಮ್ಯಾಜಿಕ್‌ನಿಂದ ಯಶಸ್ಸು ಕಂಡ ಭಾರತ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 8 ರನ್‌ಗಳ ರೋಚಕ ಜಯ ಗಳಿಸಿತು. ಇದು ಭಾರತದ ಪಾಲಿಗೆ ಏಕದಿನ ಕ್ರಿಕೆಟ್‌ನಲ್ಲಿ ದಕ್ಕಿದ 500ನೇ ಜಯವಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಅಂಬಾಟಿ ರಾಯುಡು ಅವರ ವಿಕೆಟ್ ಬೇಗನೆ ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ಪ್ರತಿಯೊಂದು ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ನಾಯಕ ವಿರಾಟ್ ಕೊಹ್ಲಿ ಅವರನ್ನು ನಿಯಂತ್ರಿಸಲು ಆಸೀಸ್ ಬೌಲರ್‌ಗಳಿಗೆ ಸಾ‘್ಯವಾಗಲಿಲ್ಲ. 120 ಎಸೆತಗಳನ್ನೆದುರಿಸಿ 10 ಬೌಂಡರಿ ನೆರವಿನಿಂದ ಕೊಹ್ಲಿ 116 ರನ್ ಗಳಿಸಿ ಆತಂಕದ ಸ್ಥಿತಿಯಲ್ಲಿದ್ದ ತಂಡಕ್ಕೆ ನೆರವಾದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ನಾಯಕನ ಜವಾಬ್ದಾರಿಯ ಆಟ ಪ್ರದರ್ಶಿಸಿದ ಕೊಹ್ಲಿಯ 40ನೇ ಶತಕದ ನೆರವಿನಿಂದ ಭಾರತ 250 ರನ್ ಗಳಿಸಿತು. ವಿಜಯ ಶಂಕರ್ ಅಮೂಲ್ಯ 46 ರನ್ ಗಳಿಸಿ ಕೊಹ್ಲಿಗೆ ಉತ್ತಮ ರೀತಿಯಲ್ಲಿ ಸಾಥ್ ನೀಡಿದರು.
251 ರನ್ ಜಯದ ಗುರಿ ಹೊತ್ತ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಸೋಲುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ವಿಜಯ್ ಶಂಕರ್ ಎಸೆದ ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿಗೆ ಶರಣಾಯಿತು. ಅಂತಿಮ ಓವರ್‌ನಲ್ಲಿ 11 ರನ್ ಅಗತ್ಯವಿದ್ದಾಗ ಕೊಹ್ಲಿ ಅಂತ್ಯತ ಆತ್ಮವಿಶ್ವಾಸದಲ್ಲಿ ವಿಜಯ್ ಶಂಕರ್‌ಗೆ ಅವಕಾಶ ನೀಡಿದರು. ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಜಯದ ಬೆನ್ನೇರಿ 52 ರನ್ ಗಳಿಸಿ ಆಡುತ್ತಿದ್ದ ಮಾರ್ಕಸ್ ಸ್ಟಾಯ್ನಿಸ್ ಅವರ ವಿಕೆಟ್ ಪಡೆದರು. ಇದು ಅಂತಾಷ್ಟ್ರೀಯ ಏಕದಿನದಲ್ಲಿ ವಿಜಯ್ ಶಂಕರ್ ಅವರ ಮೊದಲ ವಿಕೆಟ್. ನಂತರದ ಎಸೆತದಲ್ಲಿ 2 ರನ್ ದಾಖಲಾರೂ, ಮೂರನೇ ಏಸೆತದಲ್ಲಿ ಜಾಂಪಾ ವಿಕೆಟ್ ಒಪ್ಪಿಸಿದರು. ಕೇವಲ 2 ರನ್ ನೀಡಿದ ವಿಜಯ ಶಂಕರ್ 2 ವಿಕೆಟ್ ಗಳಿಸಿದರು. 6 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ ಸುಸ್ಥಿತಿಯಲ್ಲಿದ ಆಸ್ಟ್ರೇಲಿಯಾ ಅಂತಿಮವಾಗಿ 242 ರನ್ ಗಳಿಸುವಷ್ಟರಲ್ಲಿ ಸರ್ವ ಪತನ ಕಂಡಿತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಕಂಡಿದೆ.