Friday, November 22, 2024

ಬೆಂಗಳೂರಿಗೆ ಆಘಾತ ನೀಡಿದ ನಾರ್ತ್ ಈಸ್ಟ್ ಯುನೈಟೆಡ್

ಸ್ಪೋರ್ಟ್ಸ್ ಮೇಲ್ ವರದಿ 

 ರೆದೀಮ್ ತಾಂಗ್ (20ನೇ ನಿಮಿಷ) ಹಾಗೂ ಜುವಾನ್ ಮಾಸ್ಕಿಯ (90ನೇ ನಿಮಿಷ ) ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್ ನ ಮೊದಲ ಹಂತದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ಎಫ್ ಸಿ ವಿರುದ್ಧ 2-1 ಗೋಲುಗಳ ಅಚ್ಚರಿಯ ಜಯ ಗಳಿಸಿದೆ. ಬೆಂಗಳೂರು ಪರ ಶೆಸ್ಕೊ ಹೆರ್ನಾಂಡಿಸ್ (82ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ನಾರ್ತ್ ಈಸ್ಟ್ ಮೇಲುಗೈ
ರೆದೀಮ್ ತಾಂಗ್ 20ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ತಂಡ ಬಲಿಷ್ಠ ಬೆಂಗಳೂರು ವಿರುದ್ಧ ಮೇಲುಗೈ ಸಾಧಿಸಿತು. ಪ್ರೇಕ್ಷಕರ ಬೆಂಬಲ ಹಾಗೂ ದಿಟ್ಟ ಆಟದ ನೆರವಿನಿಂದ ಆತಿಥೇಯರನ್ನು ನಿಯಂತ್ರಿಸುವಲ್ಲಿ ಬೆಂಗಳೂರು ವಿಫಲವಾಯಿತು.  ಮೊದಲ ಗೋಲು ಗಳಿಸಿದ ನಂತರವೂ ನಾರ್ತ್ ಈಸ್ಟ್ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಪಾಯಕಾರಿ ಪಾಸ್‌ಗಳು ಪ್ರವಾಸಿ ತಂಡವನ್ನು ತಲ್ಲಣಗೊಳಿಸುವಂತೆ ಮಾಡಿತ್ತು. ದಿಮಾಸ್ ಡೆಲ್ಗಾಡೋ ಬಾಕ್ಸ್‌ನ ಹೊರಗಡೆಯಿಂದ ಇಟ್ಟ ಗುರಿ ಬೆಂಗಳೂರು ತಂಡದ ಉತ್ತಮ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಬಾರ್ತಲೋಮ್ಯೊ ಒಗ್ಬಚೆ ನೀಡಿದ ಪಾಸ್ ಮೂಲಕ ನಾರ್ತ್ ಈಸ್ಟ್ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಅಂತಿಮ ಹಂತದಲ್ಲಿ ಒಗ್ಬಚೆ ಗಾಯಗೊಂಡಿರುವುದು ಆತಿಥೇಯರ ಪಾಲಿಗೆ ಆತಂಕದ ಕ್ಷಣವಾಗಿತ್ತು.
ಹೀರೋ ಇಂಡಿಯನ್ ಸೂಪರ್ ಲೀಗ್‌ನ ಲೀಗ್ ಹಂತದ ಪಂದ್ಯಗಳು ಮುಗಿದು, ನಾಲ್ಕು ತಂಡಗಳು ಸೆಮಿೈನಲ್‌ಗೆ ಸಜ್ಜಾಗಿವೆ. ಮೊದಲ ಸೆಮಿಫೈನಲ್ ನಲ್ಲಿ ಆತಿಥೇಯ ನಾರ್ತ್ ಈಸ್ಟ್ ಹಾಗೂ ಲೀಗ್‌ನ ಟಾಪ್ ಟೀಮ್ ಬೆಂಗಳೂರು ಎಫ್ ಸಿ ಮುಖಾಮುಖಿಯಾದವು. ಲೀಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ನಾರ್ತ್ ಈಸ್ಟ್ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಬೆಂಗಳೂರು ವಿರುದ್ಧ ಜಯ ಗಳಿಸಬೇಕಾದರೆ ನಾರ್ತ್ ಈಸ್ಟ್ ಕಠಿಣ ಹೋರಾಟ ನೀಡಬೇಕಾಗಿದೆ. ಲೀಗ್ ಹಂತದ ಕೊನೆಯ ಐದು ಪಂದ್ಯಗಳಲ್ಲಿ ನಾರ್ತ್ ಈಸ್ಟ್ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಿ ಎಂಬುದು ಗಮನಾರ್ಹ. ತಂಡದ ನಾಯಕ ಹಾಗೂ ಸ್ಟ್ರೈಕರ್ ಬಾರ್ತಲೋಮ್ಯೊ ಒಗ್ಬಚೆ 12 ಗೋಲುಗಳನ್ನು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನಾರ್ತ್ ಈಸ್ಟ್ ತಂಡ ಇಡೀ ಲೀಗ್‌ನಲ್ಲಿ ಸೋತಿರುವುದು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ. ಸೆಮಿಫೈನಲ್ ತಲುಪಿರುವ ತಂಡಗಳಲ್ಲಿ ನಾರ್ತ್ ಈಸ್ಟ್ ಅತಿ ಕಡಿಮೆ ಗೋಲು ಗಳಿಸಿದ ಹಾಗೂ ಅತಿ ಕಡಿಮೆ ಗೋಲು ಎದುರಾಳಿ ತಂಡಕ್ಕೆ ನೀಡಿದ ತಂಡವೆನಿಸಿದೆ. ಬೆಂಗಳೂರು ತಂಡ ಲೀಗ್‌ನ ಕೊನೆಯ ಪಂದ್ಯದಲ್ಲಿ ಜೆಮ್ಶೆಡ್ಪುರ ತಂಡದ ವಿರುದ್ಧ 1-5 ಗೋಲಿನಿಂದ ಸೋತಿತ್ತು. ಆದರೆ ಆ ಪಂದ್ಯದಲ್ಲಿ ಕೋಚ್ ಕ್ವಾಡ್ರಾಟ್ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಬಿ ತಂಡವನ್ನು ಆಡಿದ್ದರು. ಅಲ್ಲದೆ ಬೆಂಗಳೂರು ತಂಡದ ಲೀಗ್‌ನ ಕೊನೆಯ ಐದು ಪಂದ್ಯಗಳ ಸಾಧನೆ ತೃಪ್ತಿದಾಯಕವಾಗಿರಲಿಲ್ಲ. ಬೆಂಗಳೂರು ಲೀಗ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋತಿತ್ತು. ಅದರಲ್ಲಿ ಮೂರು ಸೋಲು ಕೊನೆಯ ಐದು ಪಂದ್ಯಗಳಲ್ಲಿ ದಾಖಲಾಗಿತ್ತು. ಮನೆಯಂಗಣದ ಹೊರಗಡೆ ನಡೆದ ಪಂದ್ಯಗಳಲ್ಲಿ ಬೆಂಗಳೂರರು ತಂಡ 22 ಗೋಲುಗಳನ್ನು ನೀಡಿದೆ. ಸೆಮಿಫೈನಲ್ ತಲುಪಿರುವ ತಂಡಗಳಲ್ಲಿ ಇದು ಅತ್ಯಂತ ಹೆಚ್ಚು. ಇದುವರೆಗೂ ನಾರ್ತ್ ಈಸ್ಟ್ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಬೆಂಗಳೂರು ಮೂರು ಪಂದ್ಯಗಳಲ್ಲಿ ಜಯ ಗಳಿಸಿದೆ.

Related Articles