Friday, November 22, 2024

ಯುವರಾಜನ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ!

ಬೆಂಗಳೂರು: ಭಾರತದ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಕ್ರಿಕೆಟ್ ಪ್ರಿಯರ ಪಾಲಿನ ಕಣ್ಮಣಿ. ಆದರೆ ಇತ್ತೀಚಿನ ದಿನಗಳಲ್ಲಿ ಯುವರಾಜ್ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಫಿಟ್‌ನೆಸ್ ಸಮಸ್ಯೆ ಅವರನ್ನು ಕಾಡುತ್ತಿದೆ. ಯುವರಾಜನ ಜಮಾನ ಮುಗಿಯಿತು, ಅವರು ನಿವೃತ್ತಿಯಾಗಲಿದ್ದಾರೆ ಎಂದು ಮಾತುಗಳು ಕೇಳಿ ಬರುತ್ತಿರುವಂತೆಯೇ ತಮ್ಮ ಅಭಿಮಾನಿಗಳಿಗೆ ಯುವಿ ಸಿಹಿ ಸುದ್ದಿ ನೀಡಿದ್ದಾರೆ.
PC: Twitter/YWCfashion
ಸದ್ಯಕ್ಕೆ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ ಎಂದಿರುವ ಪಂಜಾಬ್ ಸಿಂಹ ಯುವರಾಜ್ ಸಿಂಗ್, ಇನ್ನೂ ಎರಡರಿಂದ 3 ಐಪಿಎಲ್‌ಗಳಲ್ಲಿ ಆಡುವ ಸಾಮರ್ಥ್ಯ ನನ್ನಲ್ಲಿದೆ ಎಂದಿದ್ದಾರೆ. ‘ನಾನಿನ್ನೂ ಆಡುತ್ತಿದ್ದೇನೆ. ಏಕೆಂದರೆ ನಾನು ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೇನೆ. ಭಾರತ ಪರ ಆಡಬೇಕು ಅಥವಾ ಐಪಿಎಲ್‌ನಲ್ಲಿ ಆಡಬೇಕೆಂಬುದಕ್ಕೆ ಕ್ರಿಕೆಟ್ ಆಡುತ್ತಿಲ್ಲ. ಆದರೆ ಭಾರತಕ್ಕೆ ಆಡಬೇಕೆಂಬುದು ಪ್ರೇರಣೆಯಂತೂ ಹೌದು. ಎರಡು ಅಥವಾ 3 ಐಪಿಎಲ್‌ಗಳಲ್ಲಿ ಆಡುವ ಸಾಮರ್ಥ್ಯ ನನ್ನಲ್ಲಿ ಉಳಿದಿದೆ ಎಂದು ನನಗನ್ನಿಸುತ್ತಿದೆ,’’ ಎಂದು 36 ವರ್ಷದ ಯುವರಾಜ್ ಸಿಂಗ್ ಹೇಳಿದ್ದಾರೆ.
ಐಪಿಎಲ್-11ನೇ ಸಾಲಿನಲ್ಲಿ ಯುವರಾಜ್ ಸಿಂಗ್ ಮತ್ತೆ ತಮ್ಮ ತವರು ತಂಡವಾದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದ್ದಾರೆ. ಜನವರಿ 27ರಂದು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಯುವರಾಜ್ ಸಿಂಗ್ ಅವರನ್ನು ಮೂಲಬೆಲೆ 2 ಕೋಟಿ ರೂ.ಗಳಿಗೆ ಖರೀದಿಸಿತ್ತು.
ಯುವರಾಜ್ ಸಿಂಗ್ ಅವರನ್ನು ಭಾರತದ ವಿಶ್ವಕಪ್ ಹೀರೊ ಎಂದು ಕರೆಯಲು ಕಾರಣ, ವಿಶ್ವಕಪ್‌ಗಳಲ್ಲಿ ಅವರ ಆಟ. 2000ರಲ್ಲಿ ನಡೆದ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಯುವಿ ಭಾರತ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಆಟವಾಡಿದ್ದ ಯುವರಾಜ್‌ಸಿಂಗ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ವಿಶ್ವದಾಖಲೆ ಬರೆದಿದ್ದರು. ಅಲ್ಲದೆ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ಕಾರಣರಾಗಿದ್ದರು.
2011ರಲ್ಲಿ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಭಾರತದ ವಿಶ್ವ ವಿಕ್ರಮದ ಹಿಂದಿನ ರೂವಾರಿಯಾಗಿ ಕಂಗೊಳಿಸಿದ್ದರು.

Related Articles