ಸ್ಪೋರ್ಟ್ಸ್ ಮೇಲ್ ವರದಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಸೂಪರ್ ಲೀಗ್ನ ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸಲ ಕಪ್ ನಮ್ದೇ ಅನ್ನುತ್ತಿದ್ದವರೆಲ್ಲ ಈಗ ನಿರಾಸೆಯ ಮಡುವಿನಲ್ಲಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಂಡ ನಗೆಪಾಟಲಿಗೆ ಗುರಿಯಾಗಿದೆ. ಆರ್ಸಿಬಿ ತಂಡವನ್ನು ಖರೀದಿಸುವ ಬದಲು ಜೆಸಿಬಿ ಖರೀದಿ ಮಾಡಿರುತ್ತಿದ್ದರೆ ಇದುವರೆಗೆ ಲಾಭ ಆಗುವುದರ ಜತೆಯಲ್ಲಿ ಗೌರವವೂ ಉಳಿಯುತ್ತಿತ್ತು ಎಂಬ ತಮಾಷೆಯ ನುಡಿ ಎಲ್ಲೆಡೆ ಹರಿದಾಡುತ್ತಿದೆ.
ಆರ್ಸಿಬಿ ತಂಡಕ್ಕೆ ಮುಂದಿನ ಬಾರಿ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಆಡಲು ಹಿಂಬಡ್ತಿ ನೀಡಲಾಗಿದೆ. ಅದರ ಬದಲು ಹುಬ್ಬಳ್ಳಿ ಟೈಗರ್ಸ್ ತಂಡ ಮುಂದಿನ ಐಪಿಎಲ್ನಲ್ಲಿ ಆಡಲಿದೆ ಎಂದು, ನಾರ್ತ್ ಸ್ಟಾಂಡ್ ಗ್ಯಾಂಗ್-ವಾಂಖೆಡೆ ಸ್ಟೇಡಿಯಂ ಟ್ವಿಟರ್ ಖಾತೆಯಲ್ಲಿ ಸಲಹೆ ನೀಡಿದೆ.
ಆರ್ಸಿಬಿ ತಂಡ ಪ್ರತಿಯೊಂದು ತಂಡಕ್ಕೂ ಎರಡೆರಡು ಅಂಕಗಳನ್ನು ಹಂಚುತ್ತಿದೆ ಎಂದು ಇನ್ನೊಂದೆಡೆ ಟ್ರೋಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿರುವ ನಿಮಗೆ ಆ ತಂಡಕ್ಕೆ ಅನ್ವಯವಾಗುವ ಸಿನಿಮಾ ಯಾವುದು ಎಂದು ವೀರೇಂದ್ರ ಸೆಹ್ವಾಗ್ ಟ್ವಿಟರ್ನಲ್ಲಿ ಕೇಳಿದ್ದಾರೆ ಅದಕ್ಕೆ ಅಭಿಮಾನಿಯೊಬ್ಬರು, ಹಮ್ ಆಪ್ಕೆ ಹೇ ಕೌನ್? ಎಂದು ಉತ್ತರಿಸಿದ್ದಾರೆ.
‘ಫಲಿತಾಂಶ ಏನೆಂಬುದು ಗೊತ್ತಿರುತ್ತದೆ, ಆದರೂ ಪರೀಕ್ಷೆಗೆ ಹಾಜರಾಗಲೇ ಬೇಕಾಗತ್ತದೆ,‘ ಇದು ಇಆರ್ಸಿಬಿ ತಂಡದ ಸದ್ಯದ ಸ್ಥಿತಿ. ‘ಕೊಹ್ಲಿಗೆ ಸಾವಿರ ಸಲ ಬಡ್ಕೊಂಡೆ ಬ್ಯಾಟಿಂಗ್ ಮಾಡುವಾಗ ಲಿಂಬೆ ಹಣ್ಣು ಜೇಬಲ್ಲಿ ಇಡ್ಕೊಳ್ಳು ಅಂತ ಕೇಳಲೇ ಇಲ್ಲ, ಈಗ ಅನುಭವಿಸುತ್ತಿದ್ದಾನೆ,‘ ಎಂದು ಸಚಿವ ಎಚ್.ಡಿ. ರೆವಣ್ಣ ಅವರು ಹೇಳಿದ್ದಾರೆಂಬುದನ್ನು ವ್ಯಂಗ್ಯದ ಮೂಲಕ ಪ್ರಕಟಿಸಲಾಗಿದೆ.
ಸೋಲು ನಿರಂತರವಾಗಿರಬಹುದು, ಆರ್ಸಿಬಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿರಬಹುದು, ಆದರೆ ಶೈಕ್ಷಣಿಕವಾಗಿ ಮುಂದುವರಿದ ತಂಡವೆಂದರೆ ಅದು ಆರ್ಸಿಬಿ ಎನ್ನಲಾಗುತ್ತಿದೆ, ಏಕೆಂದರೆ ಹಿಂದೆ ಸೋತಾಗಲೆಲ್ಲ ವಿರಾಟ್ ಕೊಹ್ಲಿ ಹೇಳುತ್ತಿದ್ದರು, ‘ನಿಮಗೆ ಜಯ ಏನನ್ನೂ ಕಲಿಸುವುದಿಲ್ಲ, ಆದರೆ ಸೋಲು ಸಾಕಷ್ಟು ಪಾಠ ಕಲಿಸುತ್ತದೆ,‘ ಎಂದು . ಈ ಕಾರಣಕ್ಕಾಗಿಯೇ ನಿರಂತರವಾಗಿ ಸೋತರೂ ತಂಡ ಹೆಚ್ಚು ಕಲಿತಿದೆ ಎಂದು ವ್ಯಂಗ್ಯ ಮಾಡಲಾಗುತ್ತಿದೆ.
ಸಂದರ್ಶನದ ವೇಳೆ ಕಂಪೆನಿಯ ಮಾಲೀಕ…
ನಮಗೆ ಸಾಕಷ್ಚು ತಾಳ್ಮೆ ಇರುವಂಥ ಉದ್ಯೋಗಿ ಬೇಕಾಗಿದೆ..
ಉದ್ಯೋಗಾಕಾಂಕ್ಷಿ… ಸರ್ 12 ವರ್ಷಗಳಿಂದ ಆರ್ಸಿಬಿ ಫ್ಯಾನ್…
ಕಂಪೆನಿಯ ಮಾಲೀಕ…ಕೆಲಸಕ್ಕೆ ಯಾವಾಗ ಸೇರ್ತೀರಿ?
ಈ ಸಲ ಕಪ್ ನಮ್ದೇ ಎಂದು ಆರ್ ಸಿ ಬಿ ಅಭಿಮಾನಿಗಳು ಹೇಳುತ್ತಲೇ ಇದ್ದಾರೆ. ಆದರೆ ಕೊಹ್ಲಿ ಪಡೆ ಸತತ ಮೂರು ಪಂದ್ಯಗಳಲ್ಲಿ ಸೋತಿದೆ. ಬೆಂಗಳೂರು ತಂಡಕ್ಕೆ ಜಯದ ಹಾದಿಗೆ ಮರಳುವ ಸಾಮರ್ಥ್ಯ ಇದೆ. ಇಂಥವುಗಳನ್ನು ತಮಾಷೆಯಾಗಿ ಕಂಡು ನಾಲ್ಕನೇ ಪಂದ್ಯದಿಂದ ಬೆಂಗಳೂರು ಜಯದ ಹಾದಿ ಕಾಣಲಿ ಎಂಬುದೇ ಹಾರೈಕೆ.