ಮುಂಬೈ: ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಣಸಲಿದೆ. ಸತತ ಆರು ಪಂದ್ಯಗಳಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದ್ದ ಆರರ್ಸಿಬಿಗೆ ಪಂಜಾಬ್ ವಿರುದ್ಧದ ಗೆಲುವಿನಿಂದಾಗಿ ಸ್ವಲ್ಪ ಒತ್ತಡ ಕಡಿಮೆಯಾಗಿದೆ. ಇದೀಗ ಮತ್ತೊಂದು ಗೆಲುವಿನತ್ತ ಚಿತ್ತ ನೆಟ್ಟಿದೆ.
ಆರ್ಸಿಬಿ ಕೇವಲ 2 ಅಂಕಗಳಿಂದ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಜಯಿಸಿ, ಇನ್ನುಳಿದ 3 ಕಾದಾಟದಲ್ಲಿ ಸೋಲು ಅನುಭವಿಸಿದೆ. ಅಂಕ ಪಟ್ಟಿಯಲ್ಲಿ ಮುಂಬೈ 8 ಅಂಕಗಳೊಂದಿಗೆ ಮೂರನೇ ಕ್ರಮಾಂಕದಲ್ಲಿದೆ.
ಆರ್ಸಿಬಿ ಹಾಗೂ ಮುಂಬೈ ಮಾ. 8 ರಂದು ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರಿನಲ್ಲಿ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಬಾರಿ ಮುಖಾ ಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೇವಲ 6 ರನ್ಗಳಿಂದ ಗೆಲವು ಪಡೆದಿತ್ತು. ಈ ಪಂದ್ಯದಲ್ಲಿ 188 ರನ್ ಗುರಿ ಬೆನ್ನತ್ತಿದ ಆರ್ಸಿಬಿ ನಿಗದಿತ 20 ಓವರ್ಗಳಿಗೆ ಐದು ವಿಕೆಟ್ ಕಳೆದುಕೊಂಡು 181 ರನ್ಗಳಿಗೆ ಸೀಮಿತವಾಗಿತ್ತು. ಈ ಪಂದ್ಯದಲ್ಲಿ ನಾಯಕ ಕೊಹ್ಲಿ 46 ರನ್ ಹಾಗೂ ಎಬಿ ಡೆವಿಲಿಯರ್ಸ್ 41 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು.
ಶನಿವಾರ ರಾತ್ರಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಲಯಕ್ಕೆ ಮರಳಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ , ಆರ್ಸಿಬಿಗೆ 174 ರನ್ ಗುರಿ ನೀಡಿತ್ತು. ನಾಯಕ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 67 ರನ್ ಹಾಗೂ ಎಬಿ ಡೆವಿಲಿಯರ್ಸ್ 38 ಎಸೆತಗಳಲ್ಲಿ ಅಜೇಯ 59 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದ್ದರು.
ಆರ್ಸಿಬಿ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ಕಳೆದ ಪಂದ್ಯದಲ್ಲಿ 19 ರನ್ಗಳಿಗೆ ಸೀಮಿತರಾದರು ಕೂಡ ಅವರು ಸ್ಥಿರ ಪ್ರದರ್ಶನ ತೋರುವಲ್ಲಿ ಸಫಲರಾಗಿದ್ದಾರೆ. ಜತೆಗೆ, ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ಉತ್ತಮ ಪ್ರದರ್ಶನ ತೋರುತ್ತಿದ್ದು, ತಂಡಕ್ಕೆ ಬ್ಯಾಟಿಂಗ್ ಬಲ ಹೆಚ್ಚಿಸಿದೆ. ಮಾರ್ಕುಸ್ ಸ್ಟೋಯಿನಿಸ್, ಮೊಯಿನ್ ಅಲಿ ಇವರಿಬ್ಬರಿಗೆ ಸಾಥ್ ನೀಡುವ ಅಗತ್ಯವಿದೆ.
ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್ ಸ್ಟೈನ್ ಅವರು ಕೌಲ್ಟರ್ ನೈಲ್ ಸ್ಥಾನಕ್ಕೆ ಆರ್ಸಿಬಿಗೆ ಆಗಮಿಸಿರುವುದರಿಂದ ಬೌಲಿಂಗ್ ವಿಭಾಗಕ್ಕೆ ಬಲಬಂದಂತಾಗಿದೆ. ಆರ್ಸಿಬಿ ವೇಗದ ವಿಭಾಗದಲ್ಲಿ ಸ್ಥಿರ ಪ್ರದರ್ಶದ ಸಮಸ್ಯೆ ಕಾಡುತ್ತಿದೆ. ಹಿರಿಯ ವೇಗಿ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಕಳೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ದುಬಾರಿಯಾದರು. ಒಟ್ಟು 11 ವಿಕೆಟ್ ಪಡೆದು ಅಗ್ರ ಎರಡನೇ ಸ್ಥಾನದಲ್ಲಿರುವ ಯಜುವೇಂದ್ರ ಚಾಹಲ್ ಕೂಡ ಶನಿವಾರ ರಾತ್ರಿ 8.85 ಸರಾಸರಿಯಲ್ಲಿ ರನ್ ಕೊಟ್ಟರು. ಮೊಯಿನ್ ಅಲಿ ಹಾಗೂ ನವನೀತ್ ಸೈನಿ ಉತ್ತಮ ನಿರ್ವಹಣೆ ತೋರಿದ್ದರು. ಡೆತ್ ಓವರ್ಗಳಲ್ಲಿ ಆರ್ಸಿಬಿ ಬೌಲರ್ಗಳು ನಿಯಂತ್ರಣ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ, ನಾಳಿನ ಪಂದ್ಯದಲ್ಲಿ ಡೇಲ್ ಸ್ಟೈನ್ಗೆ ಅಂತಿಮ 11 ರಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆ ಹೆಚ್ಚಿದೆ.
ಇನ್ನೂ ಮುಂಬೈ ಇಂಡಿಯನ್ಸ್ ತಂಡ, ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ಗಳಿಂದ ಸೋಲು ಅನುಭವಿಸಿದೆ. ಈ ಸೋಲು ಅನುಭವಿಸಿತ್ತು. ಗೆಲುವಿನ ಲಯಕ್ಕೆ ಮರಳುವ ಯೋಜನೆಯೊಂದಿಗೆ ತವರು ಅಂಗಲದಲ್ಲಿ ನಾಳೆ ಆರರ್ಸಿಬಿ ವಿರುದ್ಧ ಸೆಣಸಲಿದೆ. ಮುಂಬೈ ಇಂಡಿಯನ್ಸ್ ಪರ ಕ್ವಿಂಟಾಕ್ ಡಿ ಕಾಕ್ ಅದ್ಭುತ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ 52 ಎಸೆತಗಳಲ್ಲಿ 81 ರನ್ ಸಿಡಿಸಿದ್ದರು. ನಾಯಕ ರೋಹಿತ್ ಶರ್ಮಾ 47 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 28 ರನ್ ಗಳಿಸಿ ಉತ್ತಮ ಪ್ರದರ್ಶನ ತೋರುತ್ತಿದ್ದರು. ಆದರೆ, ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 43 ಎಸೆತಗಳಲ್ಲಿ 89 ರನ್ ಗಳಿಸಿ ಮುಂಬೈ ಗೆಲುವಿಗೆ ತಣ್ಣೀರೆರಚಿದರು.
ಮುಂಬೈ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಕ್ವಿಂಟಾನ್ ಡಿ ಕಾಕ್, ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಬಲವಿದೆ. ಸ್ಥಿರ ಪ್ರದರ್ಶನ ತೋರುತ್ತಿರುವ ಜಸ್ಪ್ರೀತ್ ಬೂಮ್ರಾ ಅವರಿಗೆ ಜೇಸನ್ ಬೆಹ್ರನ್ ಡ್ರಾಪ್, ಅಲ್ಜಾರಿ ಜೋಸೆಫ್ ಉತ್ತಮ ಸಾಥ್ ನೀಡುವ ಅಗತ್ಯವಿದೆ. ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಹಾಗೂ ರಾಹುಲ್ ಚಾಹರ್ ನಿರ್ವಹಿಸಲಿದ್ದಾರೆ.