ಕೌಲಾಲಂಪುರ್:
ಮುಂಬರುವ 2022ರ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲು ಚೈನೀಸ್ ತೈಫೆ ಹಾಗೂ ಉಜ್ಬೇಕಿಸ್ತಾನ್‌ನೊಂದಿಗೆ ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟ ಆಸಕ್ತಿ ತೋರಿದೆ.
ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟ ಹಾಗೂ ಚೈನೀಸ್ ತೈಫೆ ಫುಟ್ಬಾಲ್ ಒಕ್ಕೂಟ ಕ್ರಮವಾಗಿ 1979 ಹಾಗೂ 2001ರಲ್ಲಿ ಮಹಿಳಾ ಏಷ್ಯನ್ ಕಪ್ ಟೂರ್ನಿಯ ಆತಿಥ್ಯ ವಹಿಸಿದ್ದವು. ಇದೀಗ, ಇವರೆಡೂ ರಾಷ್ಟ್ರಗಳ ಜತೆಗೆ ಉಜ್ಬೇಕಿಸ್ತಾನ ಕೂಡ ಬಿಡ್ ಸಲ್ಲಿಸಿದೆ. ಬಿಡ್ ಸಲ್ಲಿಸಲು ಮೇ 31 ಕೊನೆಯ ದಿನಾಂಕವಾಗಿತ್ತು ಎಂದು ಎಎಫ್‌ಸಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
2022ರ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಸೇರಿದಂತೆ ಮೂರು ರಾಷ್ಟ್ರಗಳು ನಾಮಪತ್ರ ಸಲ್ಲಿಸಿವೆ. 2020 ವರ್ಷದಲ್ಲಿ ಆತಿಥ್ಯ ತಂಡವನ್ನು ಏಷ್ಯನ್ ಫುಟ್ಬಾಲ್ ಒಕ್ಕೂಟ ಅಂತಿಮಗೊಳಿಸಲಿದೆ.
ಎಎಫ್‌ಸಿ ಮಹಿಳಾ ಏಷ್ಯಾ ಕಪ್ ವಿಶ್ವದ ಅತ್ಯಂತ ಹಳೆಯ ಟೂರ್ನಿಯಾಗಿದೆ. 2022ರಲ್ಲಿ ನಡೆಯುವ ಟೂರ್ನಿ 20ನೇ ಆವೃತ್ತಿಯಾಗಿದ್ದು, 1975ರಲ್ಲಿ ಮೊದಲನೇ ಆವೃತ್ತಿ ನಡೆದಿತ್ತು.