ಸ್ಪೋರ್ಟ್ಸ್ ಮೇಲ್ ವರದಿ
ಕೇರಳದ ವಯನಾಡಿನಲ್ಲಿ ನಡೆದ ಅಂತರ್ ರಾಜ್ಯ ವಿಶೇಷ ಚೇತನರ ಕ್ರಿಕೆಟ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದಲ್ಲಿ ಕೇರಳ ವಿರುದ್ಧ 148 ರನ್ ಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೇರಳ ತಂಡ 14.2 ಓವರ್ ಗಳಲ್ಲಿ ಕೇವಲ 97 ರನ್ ಗಳಿಸಿ ಆಲೌಟ್ ಆಯಿತು, ಕರ್ನಾಟಕದ ಪರ ಮಂಜುನಾಥ್ ಜಲಗಾರ್ ಅಜೇಯ 94 ರನ್ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು. 61 ಎಸೆತಗಳನ್ನು ಎದುರಿಸಿದ ಮಂಜುನಾಥ್ ಅವರ ಇನ್ನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ರಾಜೇಶ್ ಕನ್ನೂರ್ ಕೇವಲ 33 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 83 ರನ್ ಗಳಿಸಿ ಮಿಂಚಿದರು. ಬೌಲಿಂಗ್ ವಿಭಾಗದಲ್ಲಿ ಶಂಕರ್ ಸಜ್ಜನ್ 3 ಓವರ್ ಗಳಲ್ಲಿ 12 ರನ್ ನೀಡಿ 4 ವಿಕೆಟ್ ಗಳಿಸಿದರು. ಜಿತೇಂದ್ರ ವಿ,ಎನ್. 3 ಓವರ್ ಗಳಲ್ಲಿ 6 ರನ್ ನೀಡಿ 1 ವಿಕೆಟ್ ಸಾಧನೆ ಮಾಡಿದರು. ರಾಜೇಶ್ ಕನ್ನೂರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಟೂರ್ನಿಯ ಯಶಸ್ಸಿನಲ್ಲಿ ವಿಶೇಷಚೇತನರ ಕ್ರಿಕೆಟ್ ನ ದಕ್ಷಿಣ ವಲಯದ ಪ್ರತಿನಿಧಿ ಶಿವಾನಂದ ಗುಂಜಾಲ್ ಅವರ ಪಾತ್ರ ಪ್ರಮುಖವಾಗಿತ್ತು.
ತಂಡದ ವಿವರ
ಪ್ರಕಾಶ್ ಹೊನ್ನವಾಡ (ನಾಯಕ), ಶಿವಾನಂದ ಗುಂಜಾಲ್ (ದಕ್ಷಿಣ ವಲಯ ಪ್ರತಿನಿಧಿ), ಅನಿಲ್ ಹರುಗೇರಿ, ಜಿತೇಂದ್ರ ವಿ.ಎನ್., ಶಿವಕುಮಾರ್ ರಾಯನಗೌಡರ್, ಮಲ್ಲೇಶಿ ವಾಲಿಕರ್, ರಾಜೇಶ್ ಕನ್ನೂರ್, ಮಂಜುನಾಥ್ ಜಲಗಾರ್, ಶಿವಶಂಕರ್, ಅಶೋಕ್ ಯಾದವ್, ಕೃಷ್ಣ ಬಗಾಡೆ, ಶಂಕರ್ ಸಜ್ಜನ್.