ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್
ಕಿರಿಯರ ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವ ಫುಟ್ಬಾಲ್ ಆಟಗಾರ ಸಂಜೀವ್ ಸ್ಟಾಲಿನ್ ಪೋರ್ಚುಗಲ್ ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ‘ಕ್ಲಬ್ ಡೆಸ್ಪೋರ್ಟಿವೋ ಡಾಸ್ ಆವೇಸ್’ ( ಸಿಡಿ ಆವೇಸ್) ಪರ ಆಡಲು ಸಹಿ ಮಾಡಿದ್ದಾರೆ. ಇದು ಭಾರತದ ಫುಟ್ಬಾಲ್ ಇತಿಹಾಸದಲ್ಲೆ ಒಂದು ಅವಿಸ್ಮರಣೀಯ ಕ್ಷಣ. ತಂದೆ ನಿವೃತ್ತ ಗುಮಾಸ್ತ. ತಾಯಿ ಪರಮೇಶ್ವರಿ ಬೆಂಗಳೂರಿನ ಐಐಟಿ ಗೇಟ್ ಬಳಿ ರಸ್ತೆ ಬದಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ತಂದೆ ಸ್ಟಾಲಿನ್ ಅವರನ್ನೇ ತನ್ನ ಬದುಕಿನ ಆದರ್ಶ ಎಂದು ತಿಳಿದಿರುವ ಸಂಜೀವ್ ಅವರಂತೆಯೇ ಫುಟ್ಬಾಲ್ ಆಟಗಾರನಾದದ್ದು ಒಂದು ರೋಚಕ ಕತೆ.
ಚಿಕ್ಕಂದಿನಲ್ಲಿ ಪ್ಲಾಸ್ಟಿಕ್ ಚೆಂಡು ಹಿಡಿದು ಡ್ರಿಬ್ಲಿಂಗ್ ಮಾಡುತ್ತಿದ್ದ ಸಂಜೀವ್ ಸ್ಟಾಲಿನ್ ಒಂದು ದಿನ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರನಾಗುತ್ತಾನೆಂದು ಯಾರೂ ಊಹಿಸಿರಲಿಲ್ಲ. ಏಕೆಂದರೆ ಅವರ ತಂದೆ ಸ್ಟಾಲಿನ್ ಗುಮಾಸ್ತ, ತಾಯಿ ಬೀದಿ ಬದಿಯ ಬಟ್ಟೆ ವ್ಯಾಪಾರಿ. ಆದರೆ ತಂದೆಯಿಂದ ಸ್ಫೂರ್ತಿ ಪಡೆದ ಸಂಜೀವ್ ಫುಟ್ಬಾಲ್ನಲ್ಲಿ ವಿದೇಶಿ ಕೋಚ್ಗಳ ಗಮನ ಸೆಳೆದು, ಎಐಎಫ್ ಎಫ್ ಅಕಾಡೆಮಿಯಲ್ಲಿ ಏರೋಸ್ ಪರ ಮಿಂಚಿ ಯೂರೋಪ್ ನ ಕ್ಲಬ್ ಪರ ಆಡುತ್ತಿದ್ದಾರೆ.
ತಂದೆ ಸ್ಟಾಲಿನ್ ರಾಜ್ಯ ತಂಡದ ಪ್ರಮುಖ ಆಟಗಾರರಾಗಿದ್ದರು. ಆದರೆ ಇತರ ಆಟಗಾರರಂತೆ ಅವರಿಗೆ ಉತ್ತಮ ಉದ್ಯೋಗ ಸಿಗಲಿಲ್ಲ. ಎಂಪಿಎಸ್ ನಲ್ಲಿ ಗುಮಾಸ್ತನಾಗಿ ನಿವೃತ್ತರಾಗಿದ್ದಾರೆ. ಆದರೂ ಫುಟ್ಬಾಲ್ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿನ ಪ್ರಮುಖ ಕ್ಲಬ್ಗಳ ಪರ ಆಡಿದ್ದರು.
ಅಶೋಕನಗರ ಫುಟ್ಬಾಲ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವಾಗ ತಂದೆಯ ಜತೆ ಸಂಜೀವ್ ಇರುತ್ತಿದ್ದ. ಪ್ಲಾಸ್ಟಿಕ್ ಚೆಂಡನ್ನು ಹಿಡಿದು ಅಪ್ಪನ ಆಟ ನೋಡಲು ಹೋಗುತ್ತಿದ್ದ. ಹೀಗೆ ಸಂಜೀವ್ ಅವರ ಫುಟ್ಬಾಲ್ ಯಶಸ್ಸಿಗೆ ತಂದೆಯೇ ಸ್ಫೂರ್ತಿಯಾದರು. ಜೂನಿಯರ್ ತಂಡದಲ್ಲಿ ಮಿಂಚುತ್ತಿದ್ದ ಸಂಜೀವ್ ಅವರ ಕಾಲ್ಚಳಕ ಹಿರಿಯ ಆಟಗಾರರನ್ನು ಆಕರ್ಷಿಸಿತು. ಜೂನಿಯರ್ ವಿಶ್ವಕಪ್ನಲ್ಲಿ ಇರಾನ್ ತಂಡವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಆಟಗಾರ ಹಾಗೂ ಕೋಚ್ ಜೆಮ್ಶೆಡ್ ನಾಸೀರ್ ಯುವ ಆಟಗಾರ ಸಂಜೀವ್ ಅವರನ್ನು ಗುರುತಿಸಿ ಚಂಡೀಗಢದಲ್ಲಿ ತರಬೇತಿಗೆ ಸೂಚಿಸಿದರು. ಸಂಜೀವ್ ಮತ್ತೆ ಹಿಂದಿರುಗಿ ನೋಡಲಿಲ್ಲ.
ಡ್ರಿಬ್ಲಿಂಗ್ ಕಿಂಗ್
ತಂದೆಯನ್ನೇ ಆದರ್ಶ ಫುಟ್ಬಾಲ್ ಆಟಗಾರರನ್ನಾಗಿಸಿಕೊಂಡಿರುವ ಸಂಜೀವ್ ಸ್ಟಾಲಿನ್ ಅವರನ್ನು ಭಾರತ ತಂಡದ ಕೋಚ್ ಗುರುತಿಸಲು ಮುಖ್ಯ ಕಾರಣ ಅವರ ಕಾಲ್ಚಳಕ. ಡ್ರಿಬ್ಲಿಂಗ್ನಲ್ಲಿ ನೈಪುಣ್ಯತೆ ಹೊಂದಿರುವ ಕಾರಣ 10ನೇ ವರ್ಷದಲ್ಲೇ ಚಂಡೀಗಢದಲ್ಲಿ ತರಬೇತಿಗೆ ಅವಕಾಶ ಸಿಕ್ಕಿತು. ಚಂಡೀಗಢ ಅಕಾಡೆಮಿಯಲ್ಲಿ ಉತ್ತಮ ರೀತಿಯಲ್ಲಿ ಪಳಗಿದ ಸಂಜೀವ್ ಗೋವಾ ವಿರುದ್ಧದ ಪಂದ್ಯದಲ್ಲಿ ನೀಡಿದ ಪ್ರದರ್ಶನ ನೋಡಿ ರಾಷ್ಟ್ರೀಯ ಕಿರಿಯರ ತಂಡದಲ್ಲಿ ಅವಕಾಶ ಕಲ್ಪಿಸಲಾಯಿತು. ಯುಎಇ ವಿರುದ್ಧ ನಡೆದ 16 ವರ್ಷದೊಳಗಿನವರ ಎಎಫ್ಸಿ ಕಪ್ನಲ್ಲಿ ಮಿಂಚಿನ ಆಟ ಪ್ರದರ್ಶಿಸಿ ಗೋಲು ಗಳಿಸಿದ ಸಂಜೀವ್ ಸ್ಟಾಲಿನ್ ಪಂದ್ಯ ಡ್ರಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಾಧನೆಯೇ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿತು.
ಮನೆ ಬೆಳಗಿದ ಮಗ
ತಮ್ಮ ಮಗ ಯೂರೋಪ್ ನ ಕ್ಲಬ್ ಪರ ಆಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಂದೆ ಸ್ಟಾಲಿನ್, ”ನನ್ನ ವೃತ್ತಿ ಬದುಕಿನಲ್ಲಿ ದೇಶದ ಪರ ಆಡಲು ಸಾಧ್ಯವಾಗಲಿಲ್ಲ. ನನ್ನ ಆಟ ಕೇವಲ ಕ್ಲಬ್ಗಳಿಗೆ ಮೀಸಲಾಯಿತು. ಆದರೆ ಮಗ ನನ್ನ ಕನಸನ್ನು ನನಸು ಮಾಡಿದ್ದಾನೆ. . ನಮ್ಮದು ಬಡ ಕುಟುಂಬ. ಬೆಂಗಳೂರಿನ ಮಾರ್ಫಿ ಟೌನ್ನಲ್ಲಿ ಬಾಡಿಗೆ ಮನೆಯಲ್ಲಿದ್ದೇವೆ. ಪತ್ನಿ ಪರಮೇಶ್ವರಿ, ಅವರ ಅಣ್ಣನ ಬೀದಿ ಬದಿಯ ಬಟ್ಟೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಾಳೆ. ಕಾರ್ಪೊರೇಷನ್ ಅಧಿಕಾರಿಗಳು ಬೀದಿ ಬದಿಯ ಅಂಗಡಿಗಳನ್ನು ಆಗಾಗ ತೆರವುಗೊಳಿಸುತ್ತಿರುತ್ತಾರೆ. ಆಗ ಬಟ್ಟೆಗಳನ್ನು ಹೊತ್ತು ಓಡಬೇಕಾಗುತ್ತದೆ. ಗುಮಾಸ್ತನಾಗಿದ್ದ ನನಗೆ ಫುಟ್ಬಾಲ್ ಆಡಿದ್ದಕ್ಕೆ ಉದ್ಯೋಗದಲ್ಲಿ ಬಡ್ತಿ ಸಿಗಲಿಲ್ಲ. ನಮ್ಮ ಮಗ ನಮ್ಮೆಲ್ಲ ಕಷ್ಟಗಳನ್ನು ದೂರ ಮಾಡಲು ದೇವರು ಕಳುಹಿಸಿದ ಉಡುಗೊರೆ ಎಂದು ನಂಬಿದ್ದೇನೆ,” ಎಂದು ಸ್ಟಾಲಿನ್ ಹೇಳುವ ಮಾತಿನಲ್ಲಿ ಅವರ ಕಷ್ಟದ ಬದುಕು ಸ್ಪಷ್ಟವಾಗುತ್ತದೆ.
ಜರ್ಸಿಯಲ್ಲಿ ತಂದೆಯ ಹೆಸರು: ಪೂರ್ಚುಗಲ್ ನ ಕ್ಲಬ್ ಸಂಜೀವ್ ಸ್ಟಾಲಿನ್ ಅವರ ಜೆರ್ಸಿಯನ್ನು ಅನಾವರಣ ಮಾಡಿದೆ. ಅದರಲ್ಲಿ ನಂಬರ್ 5, ಸ್ಟಾಲಿನ್ ಎಂದಿದೆ, ಈ ಕುರಿತು ತಂದೆ ಸ್ಟಾಲಿನ್ ಅವರನ್ನು ವಿಚಾರಿಸಿದಾಗ, ‘’ಭುವನೇಶ್ವರದಲ್ಲಿ ರಾಷ್ಟ್ರೀಯ ಜೂನಿಯರ್ ತಂಡದ ತರಬೇತಿ ಶಿಬಿರ ನಡೆಯುತ್ತಿತ್ತು. ಅಲ್ಲಿ ಜರ್ಸಿಗೆ ಹೆಸರು ಹಾಗೂ ನಂಬರ್ ಹಾಕುವಾಗ ಸಂಜೀವ್ ತನ್ನ ಹೆಸರಾದ ಸಂಜೀವ್ ಬದಲಿಗೆ ತಂದೆಯ ಹೆಸರಾದ ಸ್ಟಾಲಿನ್ ಹೆಸರು ಹಾಕಿ ಎಂದು ಕೇಳಿಕೊಂಡಿದ್ದಾನೆ. ಅಕಕ್ಕೆ ಕಾರಣ ಕೇಳಿದರೆ, ಇಂದು ನಾನಿಲ್ಲಿ ಆಡುತ್ತಿರುವುದಕ್ಕೆ ತಂದೆಯೇ ಕಾರಣ, ಅವರ ಹೆಸರೇ ನನ್ನ ಜೆರ್ಸಿಯಲ್ಲಿ ಇರಬೇಕು ಎಂದಿದ್ದಾನೆ, ಈಗ ಆತ ಆಡಿದ ಮತ್ತು ಆಡುವ ಪ್ರತಿಯೊಂದು ಟೂರ್ನಿಯಲ್ಲೂ ನನ್ನ ಹೆಸರಿದೆ,’’ ಎಂದು ಹೇಳಿದ ಸ್ಟಾಲಿನ್ ಕೆಲ ಹೊತ್ತು ಮೌನಕ್ಕೆ ಸರಿದರು.
ಗುರುತಿಸದ ರಾಜ್ಯ ಫುಟ್ಬಾಲ್ ಸಂಸ್ಥೆ
ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕೂಡ ಕೆಲವು ಕಾಲ ಯೂರೋಪ್ ನಲ್ಲಿರುವ ಕ್ಲಬ್ ಪರ ಆಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ವಿದೇಶದ ಆಟಗಾರರು ಈಗ ಇಂಡಿಯನ್ ಸೂಪರ್ ಲೀಗ್ ನಲ್ಲಿ ಆಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಆಟಗಾರನೊಬ್ಬನನ್ನು ವಿದೇಶಿ ವಿದೇಶಿ ಕ್ಲಬ್ ನವರು ಆಯ್ಕೆ ಮಾಡುತ್ತಾರೆಂದರೆ ಅದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ. ಆದರೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಗೆ ಇದು ವಿಷಯವೇ ಅಲ್ಲ. ಭಾರತದಲ್ಲೇ ನಡೆದ ಫಿಫಾ ಕಿರಿಯರ ವಿಶ್ವಕಪ್ ನಲ್ಲಿ ಕೊಲಂಬಿಯಾ ವಿರುದ್ಧ ಗೋಲು ಗಳಿಸುವಲ್ಲಿ ಸಂಜೀವ್ ಸ್ಟಾಲಿನ್ ಅವರ ಪಾತ್ರ ಪ್ರಮುಖವಾಗಿತ್ತು. ಎಎಫ್ ಸಿ ಕಪ್ ನಲ್ಲೂ ಯುಎಇ ವಿರುದ್ಧ ಗೋಲು ಗಳಿಸಿ ತಂಡದ ಗೌರವ ಕಾಪಾಡಿದ್ದು ಈ ಕನ್ನಡಿಗ. ಇಂಥ ಆಟಗಾರನನ್ನು ರಾಜ್ಯ ಫುಟ್ಬಾಲ್ ಸಂಸ್ಥೆಯವರು ತಮ್ಮ ಕಚೇರಿಗೆ ಕರೆದು ಗೌರವಿಸುವ ಕೆಲಸ ಮಾಡದಿರುವುದು ನಮ್ಮ ರಾಜ್ಯದಲ್ಲಿ ಫುಟ್ಬಾಲ್ ಕ್ರೀಡೆಗೆ ಸಿಗುತ್ತಿರುವ ಬೆಲೆ ಎಷ್ಟೆಂಬುದು ಸ್ಪಷ್ಟವಾಗುತ್ತದೆ.