Friday, November 22, 2024

ಕಿಕ್ ಬಾಕ್ಸಿಂಗ್ ಗೆ ಸಜ್ಜಾದ ಸಾಫ್ಟ್ ವೇರ್ ಎಂಜಿನಿಯರ್ ಹರಿಕೃಷ್ಣ

ಸ್ಪೋರ್ಟ್ಸ್ ಮೇಲ್ ವರದಿ

ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್, ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಕಾಲೇಜು ದಿನಗಳಿಂದ ಕ್ರೀಡೆಯನ್ನು ಉಸಿರಾಗಿಸಕೊಂಡವ. ಉತ್ತಮ ದೇಹದಾರ್ಢ್ಯ ಪಟುವಾಗಿರುವ ಹರಿಕೃಷ್ಣನ್ ಶ್ರೀರಾಮನ್ ಈಗ ಬೆಂಗಳೂರಿನಲ್ಲಿ ಎಲ್ಲರ ನೆಚ್ಚಿನ ಮುವಾಥಾಯ್ ಕಿಕ್ ಬಾಕ್ಸರ್.

ಕಾಲೇಜು ಮುಗಿದ ನಂತರ ಈ ಬಾಡಿಬಿಲ್ಡಿಂಗ್ ಕೆಲಸಕ್ಕೆ ಬರೊಲ್ಲ ಎಂದು ಗೆಳೆಯರು ತಮಾಷೆ ಮಾಡುತ್ತಿದ್ದರು. ಆದರೆ ಕಾಲೇಜು ತೊರೆದು ಉದ್ಯೋಗ ಸೇರಿ ಮದುವೆಯಾದರೂ ಹರಿಕೃಷ್ಣ ವಾರದಲ್ಲಿ ಆರು ದಿನಗಳ ಕಾಲ ಎರಡೂ ಹೊತ್ತು ಜಿಮ್ ನಲ್ಲಿ ಅಭ್ಯಾಸ ನಡೆಸುವುದನ್ನು ನಿಲ್ಲಿಸಲಿಲ್ಲ. ಆದರೆ ದೇಹದಾರ್ಢ್ಯದಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದ ಹರಿಕೃಷ್ಣನ್ ಗೆ ಮಿಕ್ಸೆಡ್ ಮಾರ್ಷಲ್ ಆಟ್ಸ್ ಕಡೆಗೆ ಒಲವು ಬೆಳೆಯಿತು. ವಿಶ್ವ ಮಟ್ಟದಲ್ಲಿ ಮಿಂಚಿದ್ದ ವಿನೂತ್ ರೆಡ್ಡಿ ಹಾಗೂ ಪುನೀತ್ ರೆಡ್ಡಿ ಸಹೋದರರ Institute of Eight limbs ನಲ್ಲಿ ಹೊಸ ಕ್ರೀಡಾ ಬದುಕು ಆರಂಭಿಸಿದರು. ಕೊರೋನಾದಿಂದಾಗಿ ಎಲ್ಲ ಕ್ರೀಡಾ ಚಟುವಟಕೆಗಳು ನಿಂತುಹೋದ ಕಾರಣ ಹರಿಕೃಷ್ಣನ್ ಸದ್ಯ ಸ್ಪರ್ಧೆಗಳಿಂದ ಹೊರಗುಳಿಯಬೇಕಾಗಿದೆ.

ಮಾರ್ಷಲ್ ಆಟ್ಸ್ ಈಗ ಭಾರತದಲ್ಲಿ ಉತ್ತಮ ರೀತಿಯಲ್ಲಿ ಜನಪ್ರೀಯತೆ ಪಡೆಯುತ್ತಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸ್ಪರ್ಧಿಗಳು ಉತ್ತಮ ಫಲಿತಾಂಶವನ್ನು ಕಾಣುತ್ತಿದ್ದಾರೆ, ನಿರಂತರ ಒತ್ತಡದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಕ್ರೀಡೆ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಈ ಕಾರಣಕ್ಕಾಗಿ ಕೆಲಸದ ನಡುವೆಯೂ ಕಿಕ್ ಬಾಕ್ಸಿಂಗ್ ನಲ್ಲಿ ತೊಡಗಿಸಿಕೊಂಡಿರುವೆ ಎಂದು ಹರಿಕೃಷ್ಣನ್ ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದ್ದಾರೆ.

ವಿನೋದ್ ರೆಡ್ಡಿ ಹಾಗೂ ಪುನೀತ್ ರೆಡ್ಡಿ ಸಹೋದರರು ಐದು ವರ್ಷಗಳ ಹಿಂದೆ Institute of Eight limbs ಸ್ಥಾಪಿಸಿದರು. ಇಲ್ಲಿ ತರಬೇತಿ ಪಡೆದವರು ಇದುವರೆಗೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಸೇರಿದ ಮೂರೇ ತಿಂಗಳಲ್ಲಿ ನಾನು ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಬದಲಾವಣೆ ಕಂಡಿರುವೆ. ಈಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕೆಲವೊಂದು ಸ್ಪರ್ಧೆಗಳಲ್ಲಿ ಪಾಲ್ಗೊಂಡ ನಂತರ ಈ ಕ್ರೀಡೆಯನ್ನು ಇತರರಿಗೆ ಪರಿಚಯಿಸಬೇಕೆಂಬ ಹಂಬಲ ಎಂದು ಹರಿಕೃಷ್ಣನ್ ತಿಳಿಸಿದರು.

ಮನಸ್ಸಿನ ಏಕಾಗ್ರತೆ, ದೈಹಿಕ ಕ್ಷಮತೆ ಜತೆಗೆ ಕಿಕ್ ಬಾಕ್ಸಿಂಗ್ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ನೆರವಾಗುತ್ತದೆ. ದೇಹದಲ್ಲಿರುವ ಕೊಬ್ಬಿನ ಅಂಶ ಹಾಗೂ ಕ್ಯಾಲರಿಯನ್ನು ಕಡಿಮೆ ಮಾಡುವಲ್ಲಿಯೂ ಕಿಕ್ ಬಾಕ್ಸಿಂಗ್ ಪ್ರಮುಖ ಪಾತ್ರವಹಿಸುತ್ತದೆ ಎಂದು ಹರಿಕೃಷ್ಣನ್ ಕಿಕ್ ಬಾಕ್ಸಿಂಗ್ ನ ಪ್ರಯೋಜಗಳ ಬಗ್ಗೆಯೂ ತಿಳಿಸಿದ್ದಾರೆ.

Related Articles