ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್
ಇದು ಬೆಂಗಳೂರಿನ ಸಾಮಾನ್ಯ ಪೇಂಟರ್ ಒಬ್ಬರ ಮಕ್ಕಳು ಜಾಗತಿಕ ಮಟ್ಟದಲ್ಲಿ ಮಿಂಚಿದ ಕತೆ. ಮಾರತಹಳ್ಳಿಯ ನಾಗಭೂಷಣ ರೆಡ್ಡಿ ಕೇವಲ ಮನೆಗಳಿಗೆ ಬಣ್ಣ ತುಂಬಿದ್ದು ಮಾತ್ರವಲ್ಲ ತನ್ನಿಬ್ಬರು ಮಕ್ಕಳಿಗೆ ಕಿಕ್ ಬಾಕ್ಸಿಂಗ್ ನ ರಂಗು ನೀಡಿ ಬೆಳಗಿದ್ದಾರೆ.
ನಾಗಭೂಷಣ ರೆಡ್ಡಿ ಹಾಗೂ ನಾಗವೇಣಿ ದಂಪತಿಯ ಮಕ್ಕಳಾದ ಪುನೀತ್ ರೆಡ್ಡಿ ಹಾಗೂ ವಿನೋದ್ ರೆಡ್ಡಿ ವಿಶ್ವ ಕಿಕ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಸಹೋದರರು.
ಈ ಸಹೋದರರು ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿರುವುದು ಮಾತ್ರವಲ್ಲದೆ ಈ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಅನುಭವವನ್ನು ದಾರೆ ಎರೆದಿದ್ದಾರೆ. ತಮ್ಮ ಮೊದಲ ಬಾರಿಗೆ ರಿಂಗ್ ನಲ್ಲಿ ಕಾಣಿಸಕೊಂಡರೆ ಅಣ್ಣ ಆರು ತಿಂಗಳು ತಡವಾಗಿ ಈ ಸಾಹಸ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ರಾಜ್ಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದ ಈ ಸಹೋದರರರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಗೆದ್ದ ಪದಕಗಳಿಗೆ ಲೆಕ್ಕವೇ ಇಲ್ಲ. ತಮ್ಮ ಪುನೀತ್ ರೆಡ್ಡಿ ಪಾಲ್ಗೊಂಡ 9 ರಾಷ್ಟ್ರೀಯ ಚಾಂಪಿಯನ್ಷಿಪ್ ಗಳಲ್ಲಿ 8 ಚಿನ್ನದ ಪದಕ ಗೆದ್ದರೆ ಒಂದು ಚಾಂಪಿಯನ್ಷಿಪ್ ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು. ಕಾಂಬೋಡಿಯಾದಲ್ಲಿ ನಡೆದ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಪುನೀತ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು. 54 ರಾಷ್ಟ್ರಗಳು ಪಾಲ್ಗೊಂಡಿದ್ದ ಈ ಚಾಂಪಿಯನ್ಷಿಪ್ ನಲ್ಲಿ ಪುನೀತ್ ಹಿರಿಯರ ಹೆವಿವೇಟ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.
ಅಣ್ಣ ವಿನೋದ್ ರೆಡ್ಡಿ ಕೂಡ ಕಿಕ್ ಬಾಕ್ಸಿಂಗ್ ಮುಯ್ತಾಯ್ ನಲ್ಲಿ ಎತ್ತಿದ ಕೈ. ರಾಷ್ಟ್ರಮಟ್ಟದಲ್ಲಿ 7 ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ವಿನೋದ್ ರೆಡ್ಡಿ ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಕಂಚಿನ ಸಾಧನೆ ಮಾಡಿದ್ದಾರೆ, ರಷ್ಯಾದಲ್ಲಿ ನಡೆದ ಕಿಕ್ ಬಾಕ್ಸಿಂಗ್ ವಿಶ್ವಚಾಂಪಿಯನ್ಷಿಪ್ ನಲ್ಲಿ ವಿನೋದ್ ಕಂಚಿನ ಪದಕ ಗೆದ್ದರೆ, ಕಾಂಬೋಡಿಯಾದಲ್ಲಿ ನಡೆದ ಮುಯ್ತಾಯ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದದರು.
ತರಬೇತುದಾರರಾದ ಸಹೋದರರು!
ಮೊಯ್ತಾಯ್ ಕಿಕ್ ಬಾಕ್ಸಿಂಗ್ ಇದು ಮಾರ್ಷಲ್ ಆರ್ಟ್ಸ್ ಗಳಿಗೆ ರಾಜ ಇದ್ದಂತೆ. ಅದು ಕಿಂಗ್ ಆಫ್ ಮಾರ್ಷಲ್ ಆರ್ಟ್ಸ್, ಇದರಲ್ಲೇ ತಮ್ಮ ಬದುಕನ್ನುಕಂಡುಕೊಳ್ಳಬೇಕೆಂದು ಬಯಸಿದ ರೆಡ್ಡಿ ಸಹೋದರರಾದ ಪುನೀತ್ ಹಾಗೂ ವಿನೋದ್ ಇನ್ಸ್ಟಿಟ್ಯೂಟ್ ಆಫ್ 8 ಲಿಂಬ್ಸ್ ಆ್ಯಂಡ್ ಫಿಟ್ನೆಸ್ ಸೆಂಟರ್ ಕೇಂದ್ರವನ್ನು ಸ್ಥಾಪಿಸಿದರು. ಆರು ವರ್ಷಗಳಲ್ಲಿ ಈ ಕೇಂದ್ರ ಬೆಂಗಳೂರಿನಲ್ಲಿ ಜನಪ್ರೀಯ ಕಿಕ್ ಬಾಕ್ಸಿಂಗ್ ತರಬೇತಿ ಕೇಂದ್ರವಾಗಿ ರೂಪುಗೊಂಡಿದೆ. ಈಗ ಮರಾತಹಳ್ಳಿ, ವರ್ತೂರು ಮತ್ತು ಮುನ್ನೆಕೊಲಾಲ್ ಗಳಲ್ಲಿ ಕೇಂದ್ರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಬ್ಬರೂ ಸಹೋದರರು ತರಬೇತಿ ನೀಡಿ ಸಾವಿರಾರು ಯುವಕರಿಗೆ ಕಿಕ್ ಬಾಕ್ಸಿಂಗ್ ನಲ್ಲಿ ಯಶಸ್ಸು ಕಾಣುವಂತೆ ಮಾಡಿದ್ದಾರೆ. 200ಕ್ಕೂ ಹೆಚ್ಚು ರಾಷ್ಟ್ರೀಯ ಚಾಂಪಿಯನ್ನರು ಇಲ್ಲಿ ಬೆಳಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ 8 ಲಿಂಬ್ಸ್ ನ 24 ಸ್ಪರ್ಧಿಗಳು ಪಾಲ್ಗೊಂಡಿದ್ದು ಅದರಲ್ಲಿ 14 ಸ್ಪರ್ಧಿಗಳು 11 ಚಿನ್ನದ ಪದಕ ಗೆದ್ದಿರುವುದು ಈ ಸಹೋದರರ ತರಬೇತಿಯ ಸಾಮರ್ಥ್ಯ ಮತ್ತು ಬದ್ಧತೆಗೆ ಹಿಡಿದ ಕನ್ನಡಿ.
ಹೆತ್ತವರ ಪ್ರೋತ್ಸಾಹ…
ನಾಗಭೂಷಣ ರೆಡ್ಡಿ ವೃತ್ತಿಯಲ್ಲಿ ಪೇಂಟರ್. ಆದರೆ ತಮ್ಮ ಮಕ್ಕಳ ಕ್ರೀಡಾ ಸ್ಫೂರ್ತಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡಿದವರಲ್ಲ. ‘’ನಾವು ಬಡತನದಲ್ಲಿ ಬೆಳೆದವರು. ನಮ್ಮ ತಂದೆ ತಮ್ಮ ಕಷ್ಟಗಳ ನಡುವೆಯೂ ನಮ್ಮ ಕ್ರೀಡಾ ಆಸಕ್ತಿಗೆ ಬೆಂಬಲವಾಗಿ ನಿಂತರು. ನಮ್ಮಮ್ಮ ಕೂಡ ಪ್ರೋತ್ಸಾಹಿಸಿದರು. ಇದರಿಂದ ಅಣ್ಣ ಮತ್ತು ನಾನು ಈ ಕ್ರೀಡೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು. ಕೊರೋನಾದ ಕಾರಣ ಹಿನ್ನಡೆಯಾಗಿದೆ, ಆದರೆ ಈಗ ಚೇತರಿಕೆ ಇದೆ,’’ ಎಂದು ಚಾಂಪಿಯನ್ ಪುನೀತ್ ರೆಡ್ಡಿ ಸ್ಪೋರ್ಟ್ಸ್ ಮೇಲ್ ಗೆ ತಿಳಿಸಿದರು.