Friday, November 22, 2024

ಚಿನ್ನದ ಗಣಿಯಲ್ಲಿ ಅರಳಿದ ವಜ್ರ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಕೋಲಾರದ ಚಿನ್ನದ ಗಣಿ (ಕೆಜಿಎಫ್)ನಲ್ಲಿ ಕೇವಲ ಚಿನ್ನ ಮಾತ್ರ ಸಿಗುತ್ತದೆ ಎಂದು ಎಲ್ಲರಿಗೂ ಗೊತ್ತು, ಆದರೆ ಅಲ್ಲೊಂದು ಕಠಿಣ ವಜ್ರ ಇದೆ ಎಂದು ತಿಳಿದಿರುವವರ ಸಂಖ್ಯೆ ವಿರಳ. ಅದು ಕ್ರಿಕೆಟ್ ನ ವಜ್ರ.

 

 

ಸಂಕಷ್ಟಗಳ ಸಂಕೊಲೆಯಲ್ಲಿ ಬೆಂದು ಕಠಿಣವಾದ ಆ ವಜ್ರ  ಬೇರೆ ಯಾರೂ ಅಲ್ಲ. ವೆಸ್ಟ್ ಇಂಡೀಸ್ ನ ವೇಗದ ಬೌಲರ್ ಗಳನ್ನು ನಾಚಿಸುವಂತೆ ಬೌಲಿಂಗ್ ಮಾಡುತ್ತಿದ್ದ ಯುವಕ ಸೆಂದಿಲ್ ಕುಮಾರ್. ಶಫೀ ದರಾಶಾ ಸೇರಿದಂತೆ ಹಲವಾರು ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಎಂಆರ್ಎಫ್ ಫೌಂಡೇಶನ್ ನಲ್ಲಿ ಡೆನಿಸ್ ಲಿಲ್ಲಿ ಅವರಿಂದ ಮೆಚ್ಚುಗೆಗೆ ಪಾತ್ರರಾಗಿ, ನಂತರ ಬೆನ್ನುನೋವಿನ ಕಾರಣ ವೃತ್ತಿಪರ ಕ್ರಿಕೆಟ್ ನಿಂದ ದೂರ ಸರಿದ ವೇಗದ ಬೌಲರ್ ಈಗ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಅಕಾಡೆಮಿಯಲ್ಲಿ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೆಂದಿಲ್ ಕುಮಾರ್ ಹಲವಾರು ವೇಗದ ಬೌಕರ್ ಗಳ ಪಾಲಿನ ಶ್ರೇಷ್ಠ ಗುರು. ಬಡತನದ ಬೇಗೆಯಲ್ಲಿ ಬೆಂದರೂ ಕ್ರಿಕೆಟ್ ತರಬೇತಿಯಲ್ಲಿ ಶ್ರೇಷ್ಠರೆನಿಸಿದ ಸೆಂದಿಲ್ ಕುಮಾರ್ ಅವರ ಬದುಕಿನ ಹಾದಿ ಇತರ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುವಂಥದ್ದು.

 

ಕರ್ಟ್ಲಿ ಎಂಬ್ರೋಸ್ ಮಾದರಿ

ಬೆಮೆಲ್ ಉದ್ಯೋಗಿ ಗನಾಲನ್ ಹಾಗೂ ಕಸ್ತೂರಿ ಬಾಯಿ ಅವರ ಮಗನಾದ ಸೆಂದಿಲ್ ಗೆ ಚಿಕ್ಕಂದಿನಿಂದಲೂ ವೆಸ್ಟ್ ಇಂಡೀಸ್ ನ ವೇಗದ ಬೇಲರ್ ಗಳೇ ಸ್ಫೂರ್ತಿ. ಅದರಲ್ಲೂ ಕರ್ಟ್ಲಿ ಎಂಬ್ರೋಸ್ ಇವರ ಪಾಲಿನ ಗುರು. ಸೆಂದಿಲ್ ಮೈಕಟ್ಟು ಕೂಡ ವಿಂಡೀಸ್ ಕ್ರಿಕೆಟಿರಂತೆಯೇ ಇದೆ. ಆರಂಭದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡ ಸೆಂದಿಲ್ ವೇಗದ ಬೌಲಿಂಗ್ ನಲ್ಲಿ ಜನಪ್ರಿಯತೆ ಪಡೆದರು. ತಂದೆಯ ನಿಧನದ ನಂತರ ಸೆಂದಿಲ್ ಗೆ ಕ್ರಿಕೆಟ್ ನಿಂದ ದೂರ ಇರುವಂತೆ ಅವರ ತಾಯಿ ಸೂಚಿಸಿದರು. ಆದರೂ ಸೆಂದಿಲ್ ಕದ್ದುಮುಚ್ಚಿ ಕ್ರಿಕೆಟ್ ನಲ್ಲಿ ಪಾಲ್ಗೊಂಡು ತಾಯಿಯಿಂದ ಪೆಟ್ಟು ತಿನ್ನುತ್ತಿದ್ದರು. ಆದರೆ ಸೆಂದಿಲ್ ಅವರ ಮಾವ ರವಿ ಕುಮಾರ್ ರೇಲ್ವೆಯಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಅವರಿಂದಾಗಿ ಮತ್ತೆ ಕ್ರಿಕೆಟ್ ಅಂಗಣಕ್ಕೆ ಹೋಗುತ್ತಿದ್ದರು.

 

ಮೊದಲ ಪಂದ್ಯದಲ್ಲೇ ಮಿಂಚು

ರವಿ ಕುಮಾರ್ ಅವರ ಗೆಳೆಯ ಭಾಗೀರಥಿ ಟ್ರಾವೆಲ್ಸ್ ಮಾಲೀಕ ನೀಲ್ ಜೋಸೆಫ್ ಮೊದಲ ಬಾರಿಗೆ ಸೆಂದಿಲ್ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿದರು. ಕೆಜಿಎಫ್ ನಲ್ಲಿ ನಡೆದ ಪಂದ್ಯವೊಂದರಲ್ಲಿ ಆಡುವ ಅವಕಾಶ ಮಾಡಿಕೊಟ್ಟರು, ಆ ಪಂದ್ಯದಲ್ಲಿ ಸೆಂದಿಲ್ ಬೌಲಿಂಗ್ ನಲ್ಲಿ ಮಿಂಚಿ ಪಂದ್ಯ ಗೆದ್ದುಕೊಟ್ಟರು. ಪರಿಣಾಮ ನೀಲ್ ಅವರಿಗೆ ಹುಡುಗನ ಮೇಲೆ ಆತ್ಮವಿಶ್ವಾಸ ಹೆಚ್ಚಿಸಿತು. ತಮ್ಮ ಮನೆಗೆ ಕರೆದೊಯ್ದು ಆಗ ವೆಂಟಕೇಶ್ ಪ್ರಸಾದ್ ಅವರ ದೂರವಾಣಿ ಕ್ಲಬ್ ಎರಡನೇ ಡಿನಿಜನ್ ನಲ್ಲಿತ್ತು, ಅದಕ್ಕೆ ಸಹಿ ಮಾಡಲು ಸೆಂದಿಲ್ ಗೆ ಆಫರ್ ಬಂದಿತು. ಅಷ್ಟೇನು ಅಭ್ಯಾಸ ಇಲ್ಲದ ಸೆಂದಿಲ್ ಮೊದಲ ಪಂದ್ಯದಲ್ಲಿ 10 ಓವರ್ ಗೆ 50 ರನ್ ನೀಡಿ 5 ವಿಕೆಟ್ ಗಳಿಸಿದರು. ಅದರಲ್ಲಿ 25 ವೈಡ್ ಸೇರಿತ್ತು. ಆದರೆ ಗಳಿಸಿದ ಐದು ವಿಕೆಟ್ ಸೆಂದಿಲ್ ಗೆ ಹೊಸ ಬದುಕನ್ನೇ ನೀಡಿತು. ನೀಲ್ ಐದು ವರ್ಷಗಳ ಕಾಲ ಸೆಂದಿಲ್ ಅವರನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು ಮಗನಂತೆ ಸಾಕಿ ಕ್ರಿಕೆಟ್ ಗೆ ಪ್ರೋತ್ಸಾಹ ನೀಡಿದರು. ಜತೆಯಲ್ಲಿ ಡಿಟಿಡಿಸಿ ಕ್ಲಬ್ ನಲ್ಲಿ ಅಭ್ಯಾಸ ಮಾಡುವ ಅವಕಾಶ ಕಲ್ಪಿಸಿದರು.

ಆಪೋಗ್ರಾಫ್ ಗಾಗಿ ಕಾರ್ ಹಿಂದೆ ಓಟ

ಒಮ್ಮೆ ವೇಗದ ಬೌಲರ್ ಡೇವಿಡ್ ಜಾನ್ಸನ್ ಕೋಲಾರಕ್ಕೆ ಆಗಮಿಸಿದ್ದರು, ಸೆಂದಿಲ್ ಅವರ ಆಟೋಗ್ರಾಫ್ ಪಡೆಯಲಿ ಕಾರ್ ಹಿಂದೆ ಓಡಿದ್ದು, ಕೆಲವು ಸಮಯದ ನಂತರ ಡೇವಿಡ್ ಜಾನ್ಸನ್ ಅವರ ತಂಡದಲ್ಲೇ ಆಡಿದ್ದನ್ನು ಮರೆಯುವಂತಿಲ್ಲ. ಎರಡು ವರ್ಷಗಳ ನಂತರ ಡಿಟಿಡಿಸಿ ಪರ ಇಬ್ಬರೂ ಆಡಿದರು. ಸೆಂದಿಲ್ 7 ವಿಕೆಟ್ ಗಳಿಸಿದರೆ, ಡೇವಿಡ್ ಜಾನ್ಸನ್ 78 ರನ್ ಗಳಿಸಿ ಪಂದ್ಯ ಜಯಿಸಿಕೊಟ್ಟರು, ಮರುದಿನ ಪತ್ರಿಕೆಯಲ್ಲಿ ಇಬ್ಬರ ಹೆಸರು ಬಂದ ಆ ಸಂಭ್ರಮವನ್ನು ಸೆಂದಿಲ್ ಈಗಲೂ ಸ್ಮರಿಸುತ್ತಾರೆ. ನಂತರ ಸೆಂದಿಲ್ ರಾಜಾಜಿನಗರ ಕೋಲ್ಟ್ಸ್ ತಂಡಕ್ಕೆ ಸಹಿ ಮಾಡಿದರು. ಆಗ ಬಿ. ಅಖಿಲ್ ತಂಡದ ನಾಯಕರಾಗಿದ್ದು. ಪಂದ್ಯಗಳಲ್ಲಿ ಮಿಂಚಿದ ಕಾರಣ ಸೆಂದಿಲ್ ಗೆ ರಾಜ್ಯ 19 ವರ್ಷ ವಯೋಮಿತಿಯ ಸಂಭಾವ್ಯರ ಪಟ್ಟಿಯಲ್ಲಿ ಅವಕಾಶ ಸಿಕ್ಕಿತು. ಅದೇ ವರ್ಷ ಜೋನಲ್ ಆಡಿದರು. 23 ವಿಕೆಟ್ ಗಳಿಸಿ ಭರವಸೆಯ ವೇಗದ ಬೌಲರ್ ಎನಿಸಿದರು. ಅಂಡರ್ 19 ದಕ್ಷಿಣ ವಲಯದಲ್ಲಿ ಮಿಂಚಿದ ಸೆಂದಿಲ್ ಗೆ ಆ ವರ್ಷ ರಾಜ್ಯದ ಕಿರಿಯರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು.

 

ಕೆನರಾ ಬ್ಯಾಂಕ್ ಗೆ ಸೋಲುಣಿಸಿ ಡಿಟಿಡಿಸಿ

ಕೊಕಾ ಕೋಲಾ ಕಪ್ ಟೂರ್ನಿ. ಡಿಟಿಡಿಸಿ ಎದುರಾಳಿ ಬಲಿಷ್ಠ ಕೆನರಾ ಬ್ಯಾಂಕ್. ಸುನಲ್ ಜೋಶಿ, ವೆಂಟೇಶ್ ಪ್ರಸಾದ್, ರೊಲ್ಯಾಂಡ್ ಬ್ಯಾರಿಂಗ್ಟನ್, ಮನ್ಸೂರ್ ಅಲಿ ಖಾನ್, ಶ್ರೀರಾಮ್ ಮತ್ತು ಬಾಲಾಜಿ ಅವರಿಂದ ಕೂಡಿದ ತಂಡ ಕೆನರಾ ಬ್ಯಾಂಕ್. ಎರಡು ದಿನಗಳ ಪಂದ್ಯದಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡ ಡಿಟಿಡಿಸಿಯ ಬೌಲಿಂಗ್ ದಾಳಿಗೆ ತತ್ತರಿಸಿ ಕೆನರಾ ಬ್ಯಾಂಕ್ 96ಕ್ಕೆ ಆಲೌಟ್ ಆಯಿತು, ಸೆಂದಿಲ್ ಹ್ಯಾಟ್ರಿಕ್ ಸೇರಿದಂತೆ 5 ವಿಕೆಟ್ ಗಳಿಸಿದರೆ ನಾಯಕ ಡೇವಿಡ್ ಜಾನ್ಸನ್ 5 ವಿಕೆಟ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಡಿಟಿಡಿಸಿ 120 ರನ್ ಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ಸೆಂದಿಲ್ 3, ಡೇವಿಡ್ 5 ವಿಕೆಟ್ ಗಳಿಸುವ ಮೂಲಕ ಡಿಟಿಡಿಸಿ ಪಂದ್ಯ ಗೆದ್ದುಕೊಂಡಿತು.

 

ಎನ್ಸಿಎ ಗೆ ಆಯ್ಕೆ

ರಾಜ್ಯದ ವಿವಿಧ ಪಂದ್ಯಗಳಲ್ಲಿ ಮಿಂಚಿದ 17 ವರ್ಷದ ಸೆಂದಿಲ್ ಕುಮಾರ್ ಅವರು ರಾಜ್ಯದಿಂದ ಎನ್ಸಿಎ ನಲ್ಲಿ ತರಬೇತಿ ಪಡೆಯಲು ಆಯ್ಕೆಯಾದರು. ಡೆನಿಸ್ ಲಿಲ್ಲಿ ಅವರಿಂದ ತರಬೇತಿ ಪಡೆಯುತ್ತಿರುವಾಗ ಬೆನ್ನುನೋವಿಗೆ ತುತ್ತಾದರು. ಚೇತರಿಸಿಕೊಳ್ಳಲಾಗಲಿಲ್ಲ. ಆದರೂ ರಾಜ್ಯ ರಣಜಿ ತಂಡದ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿತ್ತು, ಶಫಿ ದರಾಶ ಮತ್ತು ಕೆಎಸ್ ಸಿಎ ಡೈಮಂಡ್ ಜ್ಯುಬಿಲಿ ತಂಡದಲ್ಲೂ ಸ್ಥಾನ ಪಡೆದರು. ಈ ನಡುವೆ ಬೆನ್ನುನೋವು ಸದಾ ಕಾಡುತ್ತಿತ್ತು. ಹಾಸ್ಮಠ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಎನ್ಸಿಎ ನೆರವಾಗುತ್ತಿತ್ತು. ಆದರೆ ಚೇತರಿಕೆ ಕಾಣಲಿಲ್ಲ. ಬಲ್ವಂತ್ ಸಿಂಗ್ ಸಂಧೂ ಅವರು ಈ ಸಂದರ್ಭದಲ್ಲಿ ಸೆಂದಿಲ್ ಗೆ ತಮ್ಮಿಂದಾದ ಎಲ್ಲ ರೀತಿಯ ನೆರವು ನೀಡಿರುವುದನ್ನು ಈ ವೇಗದ ಬೌಲರ್ ಸ್ಮರಿಸುತ್ತಾರೆ.

ಗಾಡ್ ಫಾದರ್ ಅಭಿರಾಮ್

ಸೆಂದಿಲ್ ತಮ್ಮ ಬದುಕಿನಲ್ಲಿ ನೆರವಾದವರನ್ನು ಸದಾ ಸ್ಮರಿಸುತ್ತಾರೆ. ನೋವಿನ ನಡುವೆ ಆತ್ಮವಿಶ್ವಾಸವನ್ನು ತುಂಬಿ ತನ್ನಿಂದಾದ ಎಲ್ಲ ಸಹಾಯ ನೀಡಿದ ಜೆ. ಆಭಿರಾಮ್ ಸರ್ ಅವರನ್ನು ಸೆಂದಿಲ್ ತಮ್ಮ ಪಾಲಿನ ಗಾಡ್ ಫಾದರ್ ಎಂದು ಗೌರವಿಸುತ್ತಾರೆ. ತಮ್ಮ ಅಕಾಡೆಮಿಗೆ ಕರೆದು ಉಚಿತ ತರಬೇತಿ ನೀಡಿದ ಅಂತಾರಾಷ್ಟ್ರೀಯ ಅಂಪೈರ್ ಜಯಪ್ರಕಾಶ್, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರವೇಶ ಒದಗಿಸಿ, ಸ್ಕಾಲರ್ಷಿಪ್ ನೀಡಲು ಸಹಕರಿಸಿದ ರಘುರಾಮ್ ಭಟ್, ತನ್ನ ಕೋಟಾದ ಶೂಗಳನ್ನು ಕೊಟ್ಟು ಪ್ರೋತ್ಸಾಹ ನೀಡಿದ ಜಾವಗಲ್ ಶ್ರೀನಾಥ್ ಅವರನ್ನು ಸೆಂದಿಲ್ ಎಂದೂ ಮರೆಯಲಾರೆ ಎನ್ನುತ್ತಾರೆ.

ಕರ್ನಾಟಕದ ಸ್ಕಾರ್ಪಿಯೋ ಸ್ಪೀಡ್ ಸ್ಟರ್

ಸೆಂದಿಲ್ ಗೆ ಅವಕಾಶಗಳು ಉತ್ತಮವಾಗಿತ್ತು. ಆದರೆ ಅದೃಷ್ಟ ಇರಲಿಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಆಗ ಬೆಂಗಳೂರಿನಲ್ಲಿ ಸ್ಕಾರ್ಪಿಯೋ ಸ್ಪೀಡ್ ಸ್ಟರ್ ಎಂಬ ವೇಗದ ಬೌಲರ್ ಗಳ ಪ್ರತಿಭಾನ್ವೇಷಣಾ ಕಾರ್ಯಕ್ರಮ ನಡೆಯಿತು. ಬೆನ್ನು ನೋವಿನಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಸೆಂದಿಲ್, ಆ ಸ್ಪರ್ಧೆಯಲ್ಲಿ ಪಾಲ್ಗೊಂಡು. ಗಂಟೆಗೆ 140 ಕಿ.ಮೀ.ಗು ಹೆಚ್ಚು ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದ ಸೆಂದಿಲ್ ಅಂದು 131 ಕಿ.ಮೀ. ವೇಗದಲ್ಲಿ ಚೆಂಡನ್ನು ಎಸೆದು ಎನ್ ಸಿ ಅಯ್ಯಪ್ಪ ಅವರೊಂದಿಗೆ ಮುಂಬೈಯಲ್ಲಿ ನಡೆಯಲಿರುವ ಫೈನಲ್ ಸುತ್ತಿಗೆ ಆಯ್ಕೆಯಾದರು. ಮುಂಬೈಗೆ ಹೊರಟಾಗ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿತು. ಮುಂಬೈಯಲ್ಲಿ ಚೆಂಡನ್ನು ಎಸೆಯಲಾಗಲಿಲ್ಲ. ಅಯ್ಯಪ್ಪ ಅವರು ಫೈನಲ್ ನಲ್ಲಿ ಜಯ ಗಳಿಸಿದರು. ಇದು ಸೆಂದಿಲ್ ಅವರ ಪಾಲಿನ ಮತ್ತೊಂದು ದುರಾದೃಷ್ಟವಾಯಿತು.

ಬದುಕು ನೀಡಿದ ರಾಹುಲ್ ದ್ರಾವಿಡ್!

ಪ್ರಕಾಶ್ ಪಡುಕೋಣೆ ಮತ್ತು ರಾಹುಲ್ ದ್ರಾವಿಡ್ ಅವರ ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಸೆಂಟರ್ ನಲ್ಲಿ ದ್ರಾವಿಡ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಇದೆ. ಈಗ ಸೆಂದಿಲ್ ಅಲ್ಲಿ ವೇಗದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ದೇಶದ ವಿವಿಧ ಭಾಗಗಳಿಂದ ಬಂದ 70ಕ್ಕೂ ಹೆಚ್ಚು ವೇಗದ ಬೌಲರ್ ಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸೆಂದಿಲ್ ಅವರ ತರಬೇತಿಗೆ ರಾಹುಲ್ ದ್ರಾವಿಡ್ ಮತ್ತು ಆಗಾಗ ಆಗಮಿಸಿ ಹೆಚ್ಚಿನ ತರಬೇತಿ ನೀಡುತ್ತಿರುವ ಇಂಗ್ಲೆಂಡ್ ನ ಸ್ಟೀಫನ್ ಜೋನ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘’ನನ್ನ ಸಾಧನೆಗೆ ಅಡ್ಡಿಯಾದ ನೋವು ನನ್ನ ವಿದ್ಯಾರ್ಥಿಗಳಿಗೆ ಆಗದೆ, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರೆ ಬದುಕು ಸಾರ್ಥಕ, ರಾಹುಲ್ ದ್ರಾವಿಡ್ ನನ್ನ ಸಾಮರ್ಥ್ಯವನ್ನು ಗುರುತಿಸಿ ಆಕಾಡೆಮಿಯಲ್ಲಿ ಅವಕಾಶ ಕೊಟ್ಟಿದ್ದಾರೆ, ಅವರ ನೆರಳಿನಲ್ಲಿ ಕೆಲಸ ಮಾಡುವುದೆಂದರೆ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿದಂತೆ,’’ ಎನ್ನುತ್ತಾರೆ ಸೆಂಥಿಲ್. ಅಕಾಡೆಮಿಯ ಪ್ರಧಾನ ಕೋಚ್ ಜಸ್ವಂತ್ ಕೂಡ ಸೆಂಥಿಲ್ ಅವರ ಯಶಸ್ಸಿನ ಹಾದಿಯಲ್ಲಿ ಬೆಳಕಾಗಿ ನಿಂತಿದ್ದಾರೆ.

ಕೋಲಾರದಲ್ಲಿ ಸೆಂದಿಲ್ ಕುಮಾರ್ ಕ್ರಿಕೆಟ್ ಅಕಾಡೆಮಿ

ವೇಗದ ಬೌಲರ್ ಗಳನ್ನು ಗ್ರಾಮೀಣ ಪ್ರದೇಶದಿಂದ ಆಯ್ಜೆ ಮಾಡಬೇಕು. ಅಲ್ಲಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಸೆಂದಿಲ್ ಕುಮಾರ್ ಕೆಜಿಎಫ್ ನಲ್ಲಿ ಸೆಂದಿಲ್ ಕುಮಾರ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಇದಕ್ಕೆ ನೆರವಾದವರು ನೀಲ್ ಜೋಸ್. ಇಲ್ಲಿಯ ಆರು ಮಂದಿ ಯುವ ವೇಗದ ಬೌಲರ್ ಗಳಿಗೆ ರಾಹುಲ್ ದ್ರಾವಿಡ್ ಅಕಾಡೆಮಿಯು ವಿದ್ಯಾರ್ಥಿ ವೇತನ ನೀಡುತ್ತಿದೆ. 38 ವರ್ಷದ ಸೆಂದಿಲ್ ಕುಮಾರ್ ಅವರ ಪತ್ನಿ ಸುನೀತಾ ಕಾಲೇಜಿನಲ್ಲಿ ಉಪನ್ಯಾಸಕಿ ದಿಯಾ ಸೆನ್ ಮತ್ತು ದಿಶಾ ಸೆನ್ ಎಂಬ ಇಬ್ಬರು ಹೆಣ್ಣು ಮಕ್ಕಳಿಂದ ಕೂಡಿದ ಸೆಂದಿಲ್ ಅವರದ್ದು ಚಿಕ್ಕ ಚೊಕ್ಕ ಸಂಸಾರ.

Related Articles