Sunday, September 8, 2024

ಮೇ ತಿಂಗಳಲ್ಲಿ ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್, ಸ್ಪೋರ್ಟ್ಸ್ ಕಾರ್ನಿವಲ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಹಲವು ವರ್ಷಗಳಿಂದ ಕರ್ನಾಟಕದ ಕ್ರೀಡಾ ಇತಿಹಾದಲ್ಲಿ ವಿಭಿನ್ನ ಕ್ರೀಡಾಕೂಟಗಳನ್ನು ಆಯೋಜಿಸಿ ಹೊಸ ಅಧ್ಯಾಯಗಳನ್ನು ಬರೆದಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ (ರಿ) ಹಳೆಯಂಗಡಿ ಈ ಬಾರಿ ಹಿಂದೆಂದೂ ನೋಡಿರದ ಮತ್ತು ಕೇಳಿರದ ಕ್ರೀಡಾಕೂಟವೊಂದನ್ನು ಆಯೋಜಿಸುತ್ತಿದೆ. ಸ್ವತಃ ಕ್ರೀಡಾಪಟು, ಕ್ರೀಡಾ ಪ್ರೋತ್ಸಾಹಕ ಮತ್ತು ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿಯವರ ಈ ಹೊಸ ಯೋಜನೆಯೇ ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್ 2021, “ಸ್ಪೋರ್ಟ್ಸ್ ಕಾರ್ನಿವಲ್”.

ಮೇ 1 ರಿಂದ ಆರಂಭಗೊಂಡು ಮೇ 10ರವರೆಗೆ ನಡೆಯಲಿರುವ ಈ ಕ್ರೀಡಾ ಹಬ್ಬ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಐದು ಕಡೆಗಳಲ್ಲಿ ನಡೆಯಲಿದೆ. ಕುಂದಾಪುರದ ಗಾಂಧೀ ಮೈದಾನ, ಕೋಟೇಶ್ವರದ ಯುವ ಮೆರಿಡಿಯನ್, ಸುರತ್ಕಲ್ ನ ಹಳೆಯಂಗಡಿಯಲ್ಲಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಕಾಡೆಮಿ, ಎನ್ ಎಂಪಿಟಿ ಕ್ರೀಡಾಂಗಣ ಹಾಗೂ ಎನ್ಐಟಿಕೆ ಅಂಗಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಚೆಸ್ ಮತ್ತು ಫುಟ್ಬಾಲ್ ಪಂದ್ಯಗಳು ಐದು ಸ್ಥಗಳಲ್ಲಿ ನಡೆಯಲಿದೆ. ಕ್ರೀಡೆಯ ನಿಯಮ ಮತ್ತು ನಡೆಯುವ ಸ್ಥಳಗಳ ವಿವರ ಹೆಚ್ಚಿನ ವಿವರಗಳನ್ನು ಸದ್ಯದಲ್ಲೇ ವಿವರವಾಗಿ ತಿಳಿಸಲಾಗುವುದು ಎಂದು ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದ್ದಾರೆ.

ಎಲ್ಲರೂ ಆಡಬೇಕು..ಎಲ್ಲರೂ ಗೆಲ್ಲಬೇಕು!

ನಮ್ಮಲ್ಲಿ ಕ್ರಿಕೆಟ್, ವಾಲಿಬಾಲ್ ಮತ್ತು ಕಬಡ್ಡಿ ಸೇರಿದಂತೆ ಯಾವುದೇ ಟೂರ್ನಿ ನಡೆದರೂ ಪ್ರಶಸ್ತಿ ಗೆಲ್ಲುವುದೇ ಗುರಿಯಾಗಿರುತ್ತದೆ. ಅದು ಸಹಜವೇ. ಆದರೆ ತಂಡವನ್ನು ಬಲಿಷ್ಠಗೊಳಿಸಲು ಉತ್ತಮ ಆಟಗಾರರನ್ನೇ ಅಯ್ಕೆ ಮಾಡಿ ಆಡಿಸುವುದಿದೆ. ಆ ಆಟಗಾರರೇ ಪ್ರಭುತ್ವವನ್ನು ಸಾಧಿಸಿ ಇತರ ಆಟಗಾರರು ಗೌಣವಾಗುತ್ತಾರೆ. 10 ಓವರ್ ಗಳ ಕ್ರಿಕೆಟ್ ಇದ್ದರೆ ಇಬ್ಬರು ಅಥವಾ ಮೂವರು ಬ್ಯಾಟ್ಸ್ ಮನ್ ಗಳೇ ಆಡಿ ಪೂರ್ಣಗೊಳಿಸುವುದಿದೆ. ಇದು ಸಾಮಾನ್ಯ. ಆದರೆ ತಂಡದಲ್ಲಿರುವ ಇತರ ಆಟಗಾರರು ಅವಕಾಶದಿಂದ ವಂಚಿತರಾಗುತ್ತಾರೆ. ಎಲ್ಲರೂ ಆಡಬೇಕು…..ಎಲ್ಲರೂ ಗೆಲ್ಲಬೇಕೆಂದರೆ? ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್ ನಲ್ಲಿ ಇದು ಸಾಧ್ಯ. ಅದಕ್ಕೆ ಪೂರಕವಾದ, ವಿಶಿಷ್ಠ ಹಾಗೂ ವಿಭಿನ್ನವಾದ ನಿಯಮಗಳನ್ನು ರೂಪಿಸಲಾಗುವುದು ಎಂದು ಗೌತಮ್ ಶೆಟ್ಟಿ ಹೇಳಿದ್ದಾರೆ.

ಟಾರ್ಪೆಡೊಸ್ ಐತಿಹಾಸಿಕ ಕ್ಲಬ್: ಟೆನಿಸ್ ಬಾಲ್ ಕ್ರಿಕೆಟ್ ತಂಡದ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದ್ದ ಟಾರ್ಪೆಡೊಸ್ ಇಂದು ಒಂದು ಉತ್ತಮ ಕ್ರೀಡಾ ಬ್ರಾಂಡ್ ಆಗಿ ರೂಪುಗೊಳ್ಳಲು ಗೌತಮ್ ಶೆಟ್ಟಿ ಅವರು ಕಾರಣರು. ಟಾರ್ಪೆಡೊಸ್ ತಂಡದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಗಳನ್ನು ಆಡಿ, ಕ್ರೀಡೆಯ ಮೂಲಕವೇ ತಮ್ಮ ಬದುಕನ್ನು ರೂಪಿಸಿಕೊಂಡ ಗೌತಮ್ ಶೆಟ್ಟಿ, ತಮ್ಮ ವೃತ್ತಿಯ ನಡುವೆ ಪ್ರವೃತ್ತಿಗೆ ವೃತ್ತಿಪರ ಸ್ಪರ್ಷ ನೀಡಿದರು. ಹಳೆಯಂಗಡಿಯಲ್ಲಿ ಟಾರ್ಪೆಡೊಸ್ ಅಕಾಡೆಮಿಯನ್ನು ಸ್ಥಾಪಿಸಿ ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ತರಬೇತಿಯನ್ನು ನೀಡಿ ಹಲವಾರು ಪ್ರತಿಭೆಗಳನ್ನು ಪೋಷಿಸಿದರು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸಿ ಯಶಸ್ಸು ಕಂಡರು. ಈಗ ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್ –ಸ್ಪೋರ್ಟ್ಸ್ ಕಾರ್ನಿವಲ್ ಗೌತಮ್ ಶೆಟ್ಟಿ ಅವರ ಕ್ರೀಡಾ ಬದುಕಿನ ಹೊಸ ಇನ್ನಿಂಗ್ಸ್. ಇದು ರಾಜ್ಯದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವುದು ಸ್ಪಷ್ಟ.

ಟಾರ್ಪೆಡೊಸ್ ಚಾಂಪಿಯನ್ಸ್ ಲೀಗ್ –ಸ್ಪೋರ್ಟ್ಸ್ ಕಾರ್ನಿವಲ್ 2021 ಕುರಿತ ಮತ್ತಷ್ಟು ಮಾಹಿತಿ ಸದ್ಯದಲ್ಲೇ ನಿಮ್ಮ ಮುಂದೆ..

 

Related Articles