Friday, November 22, 2024

ವೀಲ್ ಚೇರ್ ಟೆನಿಸ್: ಪ್ರತಿಮಾ, ಕಾರ್ತಿಕ್ ಗೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಇಂಡಿಯನ್ ವೀಲ್ ಚೇರ್ ಟೆನಿಸ್ ಟೂರ್ (ಐಡಬ್ಲ್ಯುಟಿಟಿ) ಆಯೋಜಿಸಿದ್ದ ನಾಲ್ಕು ದಿನಗಳ ಅವಧಿಯ Tabebuia ಓಪನ್ ವೀಲ್ ಚೇರ್ ಟೆನಿಸ್ ಚಾಂಪಿಯನ್ಷಿಪ್ ನಲ್ಲಿ ಬೆಂಗಳೂರಿನ ಪ್ರತಿಮಾ ಎನ್. ರಾವ್ ವನಿತೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರೆ ಪುರುಷರ  ವಿಭಾಗದಲ್ಲಿ ಕಾರ್ತಿಕ್ ಕರುಣಾಕರನ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಫೆಬ್ರವರಿ 27ರಂದು ಆರಂಭಗೊಂಡ ಟೂರ್ನಿ ಮಾರ್ಚ್ 2ರವರೆಗೆ ನಡೆಯಿತು. ಡಿ –ಕ್ಯೂಬ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಈ ಚಾಂಪಿಯನ್ಷಿಪ್, ಐಡಬ್ಲ್ಯುಟಿಟಿ ಆಯೋಜಿಸಿದ 10ನೇ ಎಐಟಿಎ ರಾಂಕಿಂಗ್ ನ ಟೆನಿಸ್ ಟೂರ್ನಿಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಐದನೇ ಚಾಂಪಿಯನ್ಷಿಪ್ ಆಗಿದೆ.

ನಾಲ್ಕು ದಿನಗಳ ಈ ಟೂರ್ನಿಯಲ್ಲಿ 35 ಆಟಗಾರರು ಪಾಲ್ಗೊಂಡಿದ್ದರು. ಐದು ವಿಭಿನ್ನ ರಾಜ್ಯಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕೆಲವು ಹೊಸ ಆಟಗಾರರು ಸೇರಿಕೊಂಡು ವೀಲ್ ಚೇರ್ ಟೆನಿಸ್ ಗೆ ಪದಾರ್ಪಣೆ ಮಾಡಿದರು. ಕಬ್ಬನ್ ಪಾರ್ಕ್ ನಲ್ಲಿ ಬೃಹತ್ ಆಕಾರದಲ್ಲಿ ಸುಂದರವಾಗಿ ಅರಳುತ್ತಿರುವ ತಬೆಬ್ಯುಯಾ ಹೂವಿನ ಹೆಸರನ್ನು ಟೂರ್ನಿಗೆ ಇಟ್ಟಿರುವುದು ವಿಶೇಷ.

ಸೆಮಿಫೈನಲ್ ಪಂದ್ಯಗಳು ಸಾಕಷ್ಟು ಕುತೂಹಲದಿಂದ ಕೂಡಿತ್ತು. ನಾಲ್ಕು ಫೈನಲ್ ಪಂದ್ಯಗಳಲ್ಲಿ ಮೂರು ಪಂದ್ಯಗಳು ಟೈಬ್ರೇಕರ್ ಹಂತ ತಲುಪಿತ್ತು. ನಟ ವಶಿಷ್ಠ ಸಿಂಹ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದು ಚಾಂಪಿಯನ್ನರಿಗೆ ಬಹುಮಾನ ವಿತರಿಸಿದರು. ಐಡಬ್ಲ್ಯುಟಿಟಿಯ ಅಧ್ಯಕ್ಷ ಸುನಿಲ್ ಜೈನ್ ಈ ಸಂದರ್ಭದಲ್ಲಿ ಹಾಜರಿದ್ದರು.

ಚಾಂಪಿಯನ್ನರು: ಪ್ರತಿಮಾ ಎನ್. ರಾವ್ (ವನಿತೆಯರ ಸಿಂಗಲ್ಸ್ ವಿಭಾಗ), ಕಾರ್ತಿಕ್ ಕರುಣಾಕರನ್ (ಪುರುಷರ ಸಿಂಗಲ್ಸ್ ವಿಭಾಗ), ಪ್ರತಿಮಾ ಎನ್, ರಾವ್ ಮತ್ತು ಮುಬೀನಾ (ವನಿತೆಯರ ಡಬಲ್ಸ್ ವಿಭಾಗ),

ಶೇಖರ್ ವೀರ ಸ್ವಾಮಿ ಮತ್ತು ಬಾಲಚಂದ್ರ ಸುಬ್ರಹ್ಮಣ್ಯನ್ (ಪುರುಷರ ಡಬಲ್ಸ್ ವಿಭಾಗ).

ಆಗಮಿಸಿದ ಸ್ಪರ್ಧಿಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಶಸ್ತಿ ಗೆಲ್ಲುವಂತಾಗಲಿ ಎಂದು ಮುಖ್ಯ ಅತಿಥಿ ವಸಿಷ್ಠ ಸಿಂಹ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಐಡಬ್ಲ್ಯುಟಿಟಿ ಅಧ್ಯಕ್ಷ ಸುನಿಲ್ ಜೈನ್, ವೀಲ್ ಚೇರ್ ಟೆನಿಸ್ ನ ಅಭಿವೃದ್ಧಿಗಾಗಿ ಎಲ್ಲರೂ ಶ್ರಮವಹಿಸುವಂತೆ ಆಟಗಾರರನ್ನ ಕೇಳಿಕೊಂಡರು. ಆಟಗಾರರು ಕ್ರೀಡೆ ಅಭಿವೃದ್ಧಿಗಾಗಿ ಎಐಟಿಎ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ತಮ್ಮ ಧ್ವನಿ ಎತ್ತದಿದ್ದರೆ ಅಭಿವೃದ್ಧಿ ಮಂದಗತಿಯಲ್ಲಿ ಸಾಗುವುದು. ಭಾರತದ ಆಟಗಾರರ ಮುಂದಿನ ಗುರಿ ವಿಶ್ವ ಟೀಮ್ ಕಪ್ ಗಾಗಿ ಏಷ್ಯಾ ಓಶಿಯಾನ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುವುದು ಎಂದರು.

Related Articles