Friday, November 22, 2024

ಸೀಶೆಲ್ಸ್‌ ಕ್ರಿಕೆಟ್‌ ಗೆ ಸಂತಸ ತುಂಬಿದ ಸಂತೋಷ್‌ ಕುಂದರ್

ಸೋಮಶೇಖರ್‌ ಪಡುಕರೆ, ಬೆಂಗಳೂರು

ಎಲ್ಲಿಯ ಸೀಶೆಲ್ಸ್‌, ಎಲ್ಲಿಯ ಕೋಟ ಪಡುಕರೆ? ಆದರೆ ಕ್ರಿಕೆಟ್‌ ಈ ಊರು ಮತ್ತು ಆ ಪುಟ್ಟ ದೇಶಗಳ ನಡುವೆ ಸಂತೋಷದ ನಂಟನ್ನು ಬೆಳೆಸಿದೆ. ಅಲ್ಲಿಯ ತಂಡದ ಪರ ಆಡುತ್ತಿದ್ದ ಸಂತೋಷ್‌ ಕುಂದರ್‌ ಈಗ ಸೀಶೆಲ್ಸ್‌ ರಾಷ್ಟ್ರೀಯ ತಂಡದ ಫಿಟ್ನೆಸ್‌ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ.

ಸೀಶೆಲ್ಸ್‌ ಈಗ ಭಾರತದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ ನಲ್ಲಿ ಆಡುವ ಅರ್ಹತೆಯನ್ನು ಪಡೆಯಲು ಐಸಿಸಿ ಲೀಗ್‌ ಹಂತದ ಪಂದ್ಯಗಳನ್ನು ಇಂದಿನಿಂದ ಆಡುತ್ತಿದೆ.

115 ದ್ವೀಪಗಳನ್ನೊಳಗೊಂಡ ಪೂರ್ವ ಆಫ್ರಿಕಾದ ಶ್ರೀಮಂತ ದ್ವೀಪರಾಷ್ಟ್ರ ಸೀಶೆಲ್ಸ್.‌ ಜಗತ್ತಿನ ಶ್ರೀಮಂತರೇ ಪ್ರವಾಸ ಕೈಗೊಳ್ಳುವ ಈ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಗೆ ಅಷ್ಟು ಪ್ರೋತ್ಸಾಹ ಇರಲಿಲ್ಲ. ಅದೊಂದು ಟೈಮ್‌ ಪಾಸ್‌ ಕ್ರೀಡೆಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬದುಕನರಸಿ ಹೋದ ಭಾರತದ ಯುವಕರು ಅಲ್ಲಿ ಕ್ರಿಕೆಟ್‌ ಗೆ ಒಂದು ಘನತೆಯನ್ನು ತಂದಿದ್ದಾರೆ. ಅಲ್ಲಿ ನಿರಂತರ ಕ್ರಿಕೆಟ್‌ ಚಟುವಟಿಕೆಯಿಂದಾಗಿ ಈಗ ಸೀಶೆಲ್ಸ್‌ ಐಸಿಸಿ ವಿಶ್ವಟಿ20 ಕ್ರಿಕೆಟ್‌ ನ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುವ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದಿದೆ.

ಇದರ ಹಿಂದೆ ಕನ್ನಡಿಗರ ಶ್ರಮ ಅಪಾರ ಇದೆ. ಎರಡು ದಶಕಗಳ ಹಿಂದೆ ಪಡುಕರೆಯ ಸಹೋದರರಾದ ಸಂತೋಷ್‌ ಕುಂದರ್‌, ಸಂಜಯ್‌ ಕುಂದರ್ ಮತ್ತು ಸಂದೇಶ್‌ ಕುಂದರ್‌ ಉದ್ಯೋಗಕ್ಕಾಗಿ ಸೀಶೆಲ್ಸ್‌ ಸೇರಿಕೊಂಡರು. ಪಡುಕರೆಯಲ್ಲಿ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಿಕೊಂಡಿದ್ದ ಈ ಯುವಕರು ಅಲ್ಲಿ 777 ಎಂಬ ಕ್ರಿಕೆಟ್‌ ಕ್ಲಬ್‌ ರಚಿಸಿ ಲೆದರ್‌ ಬಾಲ್‌ ಕ್ರಿಕೆಟ್‌ ಆಡಲಾರಂಭಿಸಿದರು, ಅಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಇತರ ಭಾಗಗಳಿಂದ ಬಂದ ಹುಡುಗರೂ ಇವರೊಂದಿಗೆ ಸೇರಿದರು. ಅಲ್ಲಿ ನಡೆದ ಲೀಗ್‌ ಪಂದ್ಯಗಳಲ್ಲಿ 777 ತಂಡವನ್ನು ಸೋಲಿಸಲು ಸಾಧ್ಯವಾಗಲೇ ಇಲ್ಲ. ನಂತರ ಈ ಕ್ಲಬ್‌ ನ ಆಟಗಾರರೇ ಸೀಶೆಲ್ಸ್‌ ರಾಷ್ಟ್ರೀಯ ತಂಡದಲ್ಲಿ ಸೇರ್ಪಡೆಗೊಂಡರು. ಐಸಿಸಿ ಲೀಗ್‌ ಹಂತದ ಪಂದ್ಯಗಳಲ್ಲಿ ಆಡಿ ಮೆಚ್ಚುಗೆ ಪಡೆದರು. ಸಂದೇಶ್‌ ಕುಂದರ್‌ ಉತ್ತಮ ಆಲ್ರೌಂಡರ್‌ ಆಗಿ ಮಿಂಚಿದ್ದರು.

ಈಗ ಏಕೈಕ ಕನ್ನಡಿಗ!

ಕುಂದರ್‌ ಸಹೋದರರಲ್ಲಿ ಇಬ್ಬರು ಈಗ ಸೀಶೆಲ್ಸ್‌ ತಂಡದಲ್ಲಿ ಆಡುತ್ತಿಲ್ಲ. ಹಿರಿಯನಾದ ಸಂತೋಷ್‌ ಕುಂದರ್‌ ಈಗ ಫಿಟ್ನೆಸ್‌ ಕೋಚ್‌ ಆಗಿದ್ದು ತಂಡದಲ್ಲಿರುವ ಏಕೈಕ ಕನ್ನಡಿಗರೆನಿಸಿದ್ದಾರೆ. ಸೀಶೆಲ್ಸ್‌ ತಂಡ ಸದ್ಯ ವ್ರಾಂಡಾದಲ್ಲಿದ್ದು ಇಂದಿನಿಂದ 23 ರವರೆಗೆ ಒಟ್ಟು ಆರು ಟಿ20 ಪಂದ್ಯಗಳನ್ನಾಡಲಿದೆ, ಒಂದು ಕಾಲದಲ್ಲಿ ಕನ್ನಡಿಗರೇ ತುಂಬಿಕೊಂಡಿದ್ದ ಸೀಶೆಲ್ಸ್‌ ಕ್ರಿಕೆಟ್‌ ತಂಡ ಈಗ ತಮಿಳುನಾಡಿನ ಆಟಗಾರರಿಂದ ಕೂಡಿದೆ. ಗುಜರಾತ್‌ ನ ಕೌಶಲ್‌ ಪಟೇಲ್‌ ತಂಡದ ನಾಯಕನಾಗಿದ್ದು, ಬಾಂಗ್ಲಾದೇಶ ಹಾಗೂ ಶ್ರೀಲಂಕಾದ ತಲಾ ಇಬ್ಬರು ಆಟಗಾರರು, ಗುಜರಾತ್‌ ನ ಆರು ಆಟಗಾರರು ಮತ್ತು ತಮಿಳುನಾಡಿನ ಏಳು ಆಟಗಾರರು ತಂಡದಲ್ಲಿದ್ದಾರೆ. ಕೋಲ್ಕೊತಾದ ಪ್ಯಾಟ್ರಿಕ್‌ ಥಾಮಸ್‌ ತಂಡದ ಪ್ರಧಾನ ಕೋಚ್‌ ಆಗಿದ್ದಾರೆ.

“ನಾವೆಲ್ಲ ಇಲ್ಲಿಗೆ ಬಂದಿರುವುದು ಕ್ರಿಕೆಟ್‌ ಆಡಲಲ್ಲ, ಬದಲಾಗಿ ದುಡಿದು ನಮ್ಮ ಬದುಕನ್ನು ರೂಪಿಸಿಕೊಳ್ಳಲು, ಆದರೆ 777 ಕ್ರಿಕೆಟ್‌ ಕ್ಲಬ್‌ ಮೂಲಕ ಇಲ್ಲಿ ಮರೆಯಾಗುತ್ತಿದ್ದ ಕ್ರಿಕೆಟ್‌ ಗೆ ಹೊಸ ರೂಪ ನೀಡಿದೆವು. ಆ ಬಳಿಕ ಅನೇಕ ಕ್ರಿಕೆಟ್‌ ಕ್ಲಬ್‌ ಗಳು ಹುಟ್ಟಿಕೊಂಡವು. ಸೀಶೆಲ್ಸ್‌ ಕ್ರಿಕೆಟ್‌ ನಾವು ಬರುವುದಕ್ಕೆ ಮೊದಲೇ ಇದ್ದಿತ್ತು. ಆದರೆ ಅಷ್ಟು ಚಟುವಟಿಕೆಯಿಂದ ಕೂಡಿರಲಿಲ್ಲ. ಈಗ ವಿಶ್ವಕಪ್‌ ಲೀಗ್‌ ನಲ್ಲಿ ಆಡುತ್ತಿದೆ ಅನ್ನುವುದೇ ಹೆಮ್ಮೆ. ಸಂದೇಶ್‌ ಮತ್ತು ಸಂಜಯ್‌ ನನ್ನ ಸಹೋದರರಿಬ್ಬರೂ ಇಲ್ಲಿಯ ತಂಡದ ಪರ ಆಡಿದ್ದರು. ಈಗ ನನಗೆ ಕೋಚಿಂಗ್‌ ತಂಡದ ಜತೆ ಕೆಲಸಮಾಡುವ ಅವಕಾಶ ಸಿಕ್ಕಿದೆ. ಚಿಕ್ಕ ಊರಿನಿಂದ ಬಂದು ಇಲ್ಲಿ ಪರಿಚಯ ಇಲ್ಲದವರೊಂದಿಗೆ ಬೆರೆತು ಕ್ರಿಕೆಟ್‌ ಮೂಲಕ ಗುರುತಿಸಿಕೊಂಡಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ,” ಎಂದು ಸಂತೋಷ್‌ ಕುಂದರ್‌ ಹೇಳಿದ್ದಾರೆ.

Related Articles