Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ತಾನು ಓಡುತ್ತ ಬೇರೆಯವರ ಓಟಕ್ಕೆ ನೆರವಾಗುವ ಡಾ. ಕುಮಾರನ್‌ ಸಂಪತ್

ಸೋಮಶೇಖರ್‌ ಪಡುಕರೆ, SportsMail

ಎಗ್ಮಾ ಕ್ಯಾಪಿಟಲ್‌ ಸರ್ವಿಸಸ್‌ ಪ್ರೈ. ಲಿ. (AEGMA Capital Services Pvt.Ltd.) ಭಾರತದ ಉತ್ತಮ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದ್ದು, ಅದರ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಕುಮಾರನ್‌ ಸಂಪತ್‌ ಕ್ರಿಕೆಟಿಗ ಮತ್ತು ಹವ್ಯಾಸಿ ಓಟಗಾರರಾಗಿದ್ದ ಕಾರಣ ಕ್ರೀಡಾಪಟುಗಳ ಕಷ್ಟವನ್ನು ಚೆನ್ನಾಗಿ ಅರಿತಿದ್ದಾರೆ, ಈ ಹಿನ್ನೆಲೆಯಲ್ಲಿ ಅವರು ತಮ್ಮ ಕಂಪೆನಿ ಮೂಲಕ ಕ್ರೀಡಾಪಟುಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.

ಇತ್ತೀಚೆಗೆ ಕುಮಾರನ್‌ ಸಂಪತ್‌ ತಮ್ಮ ಎಗ್ಮಾ ಕಂಪೆನಿಯ ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾಂಸಿಬಲಿಟಿ (ಸಿಎಸಾರ್)‌ ಮೂಲಕ ಮೂವರು ಓಟಗಾರರನ್ನು ಗುರುತಿಸಿರುವುದು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

ರಾಷ್ಟ್ರೀಯ ಉದ್ಯೋಗ ಭಾರತಿ ಪ್ರಶಸ್ತಿ ಮತ್ತು ಇತ್ತೀಚಿಗೆ ದಿಲ್ಲಿಯಲ್ಲಿ ರಾಷ್ಟ್ರೀಯ ಮಟ್ಟದ ರಾಜ್ಯೋತ್ಸವ ಗೌರವಕ್ಕೆ ಪಾತ್ರರಾಗಿರುವ ಕುಮಾರನ್‌ ಸಂಪತ್‌, ಮುಂದಿನ ವರ್ಷ ಚಿಕಾಗೋ ಮ್ಯಾರಥಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ, ಕೊವಿಡ್‌ನಿಂದಾಗಿ ವಿಮಾನ ಸೌಕರ್ಯ ಇಲ್ಲದ ಕಾರಣ ಅವರು ಈ ಬಾರಿಯ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿರಲಿಲ್ಲ.

 

ಸಾಧಕರಿಗೆ ಗೌರವ:

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರನ್ನು ಸರಕಾರ ಮತ್ತು ಕ್ರೀಡಾ ಸಂಸ್ಥೆಗಳು ಗುರುತಿಸುತ್ತವೆ. ಆದರೆ ತಮ್ಮ ಬದುಕಿನ ನಡುವೆ ಹವ್ಯಾಸದ ಮೂಲಕ ಸಾಧನೆ ಮಾಡುವವರನ್ನು ಇಂದಿನ ದಿನಗಳಲ್ಲಿ ಗುರುತಿಸುವುದು ಬಹಳ ವಿರಳ. ಅಂಥ ವಿರಳ ಸಾಧಕರನ್ನು ಕುಮಾರನ್‌ ಸಂಪತ್‌ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ಧೇಶ್‌ ಹನುಂತಪ್ಪ ಅವರು ತಮ್ಮ ಕೆಲಸದ ನಡುವೆ ನಿತ್ಯವೂ ಓಟವನ್ನು ಮುಂದುವರಿಸುತ್ತ ಒಂದು ವರ್ಷದಲ್ಲಿ ಸುಮಾರು 11,000 ಕಿಮೀ ಅಂತರವನ್ನು ಪೂರ್ಣಗೊಳಿಸಿದ್ದಾರೆ. ಐಬಿಎಂ ಉದ್ಯೋಗಿ ಪ್ರವೀಣ್‌ ಶೆಟ್ಟಿ ಮತ್ತು ದೇವಿ ಶೆಟ್ಟಿ ಅವರು ಬೆಂಗಳೂರಿನಿಂದ ಉಡುಪಿಯವರೆಗೆ ಸುಮಾರು 417 ಕಿ.ಮೀ ಅಂತರವನ್ನು ಸಾಮಾಜಿಕ ಕಾಳಜಿಯ ಸಂದೇಶ ಸಾರುತ್ತ ಓಡಿ ಪೂರ್ಣಗೊಳಿಸಿದ್ದಾರೆ, ಇವರ ಸಾಧನೆಯನ್ನು ಯಾರೂ ಗುರುತಿಸಿಲ್ಲ ಆದರೆ ಇವರನ್ನು ಚೆನ್ನಾಗಿ ಬಲ್ಲ ಕುಮಾರನ್‌ ಸಂಪತ್‌ ಗುರುತಿಸಿ, ಅವರನ್ನು ಸನ್ಮಾನಿಸಿ ಅವರ ಮುಂದಿನ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ.

ಅಲ್ಲದೆ ವಿಶೇ಼ಷ ಚೇತನ ಕ್ರೀಡಾಪಟುಗಳಿಗೆ ಅಗತ್ಯವಿರುವ ಶೂ ಮತ್ತು ಕಿಟ್‌ಗಳನ್ನು ನೀಡಿ ಅವರ ಕ್ರೀಡಾ ಸಾಧನೆಯನ್ನು ಗುರುತಿಸಿರುತ್ತಾರೆ.

ವಾರ್ಷಿಕ ಪ್ರಶಸ್ತಿ:

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಐವರು ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ವಾರ್ಷಿಕ ಪ್ರಶಸ್ತಿ ಮತ್ತು ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ಮಾಡಲಾಗುವುದು ಎಂದು ಡಾ. ಕುಮಾರನ್‌ ಸಂಪತ್‌ ತಿಳಿಸಿದ್ದಾರೆ. “ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಲು ಕ್ರೀಡಾ ಇಲಾಖೆ ಮತ್ತು ಸಂಬಂಧಪಟ್ಟ ಕ್ರೀಡಾ ಸಂಸ್ಥೆಗಳಿರುತ್ತವೆ, ಆದರೆ ಕೆಲವೊಂದು ಕ್ರೀಡೆಗಳಲ್ಲಿ ಸಾಧನೆ ಮಾಡಿದವರನ್ನು ಯಾರೂ ಗುರುತಿಸಿರುವುದಿಲ್ಲ, ಅಂಥ ಐವರು ಕ್ರೀಡಾಪಟುಗಳನ್ನು ಪ್ರತಿ ವರ್ಷ ಗುರುತಿಸಿ ಅವರಿಗೆ ಪ್ರಶಸ್ತಿ ಹಾಗೂ ಪ್ರೋತ್ಸಾಹ ನೀಡುವ ಕೆಲಸವನ್ನು ನಮ್ಮ ಸಂಸ್ಥೆಯ ಮೂಲಕ ನಡೆಸಲಾಗುವುದು,” ಎಂದು ಕುಮಾರನ್‌ ಸಂಪತ್‌ ಹೇಳಿದ್ದಾರೆ.

ಉದ್ಯೋಗದಲ್ಲಿ ಪ್ರಾಶಸ್ತ್ಯ:

ಅನೇಕ ಸಂಸ್ಥೆಗಳು ಉದ್ಯೋಗ ನೀಡುವಾಗ ಆಕಾಂಕ್ಷಿಯ ಕ್ರೀಡಾ ಸಾಧನೆಯನ್ನು ಗಮನಿಸುವುದೇ ಇಲ್ಲ. ಕ್ರೀಡಾ ಸಾಧನೆಗಾಗಿ ಆ ಕ್ರೀಡಾಪಟು ತನ್ನ ನಿತ್ಯ ಬದುಕಿನಲ್ಲಿ ಎಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯ ಮಾಡಿರುತ್ತಾನೆ, ಉದ್ಯೋಗ ನೀಡುವಾಗ ಇದನ್ನೂ ಗಮನಿಸಬೇಕು ಎನ್ನುತ್ತಾರೆ ಸಂಪತ್‌ ಕುಮಾರನ್‌. ತಮ್ಮ ಕಂಪೆನಿಯಲ್ಲಿ ಕೆಲಸ ನೀಡುವಾಗ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಒಂದು ಹುದ್ದೆಯನ್ನು ಕಾಯ್ದಿರಿಸುತ್ತೇವೆ, ಈಗಾಗಲೇ ವಿನ್ಸೆಂಟ್‌ ಎಂಬ ಬೈಕ್‌ ರೈಡರ್‌ಗೆ ತಮ್ಮ ಎಗ್ಮಾ ಕಂಪೆನಿಯಲ್ಲಿ ಉದ್ಯೋಗ ನೀಡಿರುವುದನ್ನು ಕುಮಾರನ್‌ ಸಂಪತ್‌ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಮುಂದಿನ ದಿನಗಳಲ್ಲೂ ಈ ಕಾರ್ಯ ಮುಂದುವರಿಯಲಿದೆ ಎಂದಿದ್ದಾರೆ. ಎಲ್ಲಾ ಕ್ರೀಡಾಪಟುಗಳಿಗೂ ಸರಕಾರಿ ಉದ್ಯೋಗ ಸಿಗುವುದು ಕಷ್ಟ. ಇದನ್ನು ಗಮನಿಸಿ ರಾಜ್ಯದಲ್ಲಿರುವ ಕಾರ್ಪೋರೇಟ್‌ ವಲಯ ಅದಷ್ಟು ಪ್ರಮಾಣದಲ್ಲಿ ಕ್ರೀಡಾ ಸಾಧಕರಿಗೆ ಉದ್ಯೋಗ ನೀಡಿದರೆ ಕ್ರೀಡಯಲ್ಲಿ ಮತ್ತಷ್ಟು ಸಾಧಕರನ್ನು ನಾವು ಕಾಣಬಹುದು ಎಂದಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.