Friday, November 22, 2024

ಇಂದಿನ ಶಿಕ್ಷಣ ಪದ್ಧತಿ ಕ್ರೀಡಾ ಅಭಿವೃದ್ಧಿಗೆ ಪೂರಕವಾಗಿಲ್ಲ: ವಿನಯ್‌ ಹೆಗ್ಡೆ

Sportsmail ವರದಿ

ಇಂದಿನ ಶಿಕ್ಷಣ ಪದ್ಧತಿ ಕ್ರೀಡಾ ಅಭಿವೃದ್ಧಿಗೆ ಪೂರಕವಾಗಿಲ್ಲ, ಮಕ್ಕಳು ಕೇವಲ ಅಂಕಗಳನ್ನು ಪಡೆಯುವುದರಲ್ಲೇ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ಪರೀಕ್ಷೆಗಳನ್ನು ಎದುರಿಸುವುದೇ ಅವರಿಗೆ ಸಾಧನೆಯಾಗಿಬಿಟ್ಟಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.‌ ವಿನಯ್‌ ಹೆಗ್ಡೆ ಅವರು ಬೇಸರ ವ್ಯಕ್ತಪಡಿಸಿದರು.

ಅವರು ನಿಟ್ಟೆ ಕ್ಯಾಂಪಸ್‌ನಲ್ಲಿರುವ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಮತ್ತು ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಆಯೋಜಿಸಿದ್ದ ಮೂರು ದಿನಗಳ ಕ್ರಿಕೆಟ್‌ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಕ್ರಿಕೆಟ್‌ಗೆ ಆಳ್ವಾಸ್‌ ಸಹೋದರರ ಕೊಡುಗೆ ಅಪಾರವಾದುದು. ಬಿ.ಸಿ. ಆಳ್ವಾ, ಯಶವಂತ್‌ ಆಳ್ವಾ, ಶ್ರೀಧರ್‌ ಆಳ್ವಾ, ಯಶವಂತ್‌ ಆಳ್ವಾ ಮತ್ತು ಹೇಮಚಂದ್ರ ಆಳ್ವಾ ಅವರ ಕೊಡುಗೆಯಿಂದಾಗಿ ಇಂದು ಕರಾವಳಿಯಲ್ಲಿ ಕ್ರಿಕೆಟ್‌ ಜೀವಂತವಾಗಿ ಉಳಿದಿದೆ. ಈ ಕಾರಣಕ್ಕಾಗಿಯೇ ಅವರ ನೆವಪಿಗಾಗಿ ನಾವು ಈ ಕ್ರೀಡಾಂಗಣಕ್ಕೆ ಬಿ.ಸಿ. ಆಳ್ವಾ ಅವರ ಹೆಸರನ್ನಿಟ್ಟಿದ್ದೇವೆ ಎಂದರು.

 

ಇಲ್ಲಿಯೂ ಪ್ರಮುಖ ಪಂದ್ಯಗಳು ನಡೆಯಲಿ:

ಸುಮಾರು 7 ಕೋಟಿ ರೂ. ವ್ಯಯಮಾಡಿ ನಾವು ಈ ಕ್ರೀಡಾಂಗಣವನ್ನು ನಿರ್ಮಿಸಿದ್ದೇವೆ. ಆದರೆ ನಾವು ಯಾವ ಉದ್ದೇಶಕ್ಕಾಗಿ ನಿರ್ಮಿಸಿದ್ದೇವೋ ಆ ಉದ್ದೇಶ ಇನ್ನೂ ಈಡೇರಲಿಲ್ಲ. ಇಲ್ಲಿಯೂ ರಾಜ್ಯದ ಪ್ರಮುಖ ಪಂದ್ಯಗಳು ನಡೆಯುವಂತಾಗಬೇಕು. ಇಲ್ಲಿ ಸಹಸ್ರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೂ ಅವರಿಗೆ ಶೈಕ್ಷಣಿಕ ಒತ್ತಡದ ಕಾರಣ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲು ಕ್ರಿಕೆಟಿಗರು ಅಥವಾ ಕ್ರೀಡಾಪಟುಗಳು ಶಾಲೆಗಳಿಂದ ಹುಟ್ಟಿಕೊಳ್ಳುತ್ತಿದ್ದರು. ಆದರೆ ಈಗ ಅವರು ಅಕಾಡೆಮಿಗಳಿಂದ ಬರುತ್ತಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಈ ಅಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಬೇಕು ಎಂದು ವಿನಯ್‌ ಹೆಗ್ಡೆ ಹೇಳಿದರು.

ವಿಜಯ್‌ ಆಳ್ವಾ ಕಾರ್ಯ ಶ್ಲಾಘನೀಯ:

ತಂದೆಯ ಹಾದಿಯಲ್ಲೇ ಸಾಗುತ್ತಿರುವ ವಿಜಯ್‌ ಆಳ್ವಾ ಬೆಳ್ಳಿಪ್ಪಾಡಿ ಆಳ್ವಾ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಿಕೊಂಡು ಯುವಕರಿಗೆ ತರಬೇತಿ ನೀಡುತ್ತಿದ್ದಾರೆ, ಅದರಲ್ಲೂ ಯುವತಿಯರಿಗೆ ಕ್ರಿಕೆಟ್‌ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ಇಂಥ ಕೆಲಸ ಮಾಡುತ್ತಿರುವ ಅವರ ಶ್ರಮಕ್ಕೆ ನಮ್ಮಿಂದ ಎಲ್ಲ ರೀತಿಯ ಪ್ರೋತ್ಸಾಹ ಇದೆ, ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಬಿಗ್‌ ಬ್ಯಾಶ್‌ನಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಭಾರತ ಮಹಿಳಾ ಕ್ರಿಕೆಟ್‌ ತಂಡ ಪುರುಷರ ತಂಡದಂತೆ ಯಶಸ್ಸು ಸಾಧಿಸುತ್ತಿದೆ. ಮಹಿಳಾ ಕ್ರಿಕೆಟ್‌ಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯ ಇದೆ ಎಂದರು.

ಸನ್ಮಾನ:

ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದ ವೈ.ಎಸ್.‌ ರಾವ್‌ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಎನ್‌ಇಟಿ ಕ್ಯಾಂಪಸ್‌ನ ರಿಜಿಸ್ಟ್ರಾರ್‌ ಯೋಗೇಶ್‌ ಹೆಗ್ಡೆ, ಎನ್ಎಂಎಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ, ನಿರಂಜನ್‌ ಎನ್.‌ ಚಿಪಳೂಣ್ಕರ್‌, ಉಡುಪಿ ಜಿಲ್ಲಾ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಅಧ್ಯಕ್ಷ ಅಶೋಕ್‌ ಅಡ್ಯಂತಾಯ ಪಾಲ್ಗೊಂಡಿದ್ದರು.

ಕುಮುದಾವತಿ ಉಮಾಶಂಕರ್‌ ಟೀಚರ್‌ ಟ್ರೈನಿಂಗ್‌ ಕಾಲೇಜಜು ಕೊಕ್ಕರ್ಣೆ ಇದರ ಪ್ರಾಂಶುಪಾಲ ಸುರೇಶ್‌ ಕುಮಾರ್‌ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿದರು.

Related Articles