Sportsmail
ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್)ನ ಪ್ರಸಕ್ತ ಅವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ತಂಡ ಹೈದರಾಬಾದ್ ಎಫ್ಸಿ ವಿರುದ್ಧ 1-0 ಗೋಲಿನಿಂದ ಪ್ರಯಾಸದ ಜಯ ದಾಖಲಿಸಿದೆ.
ಗೋವಾದ ಬ್ಯಾಂಬೊಲಿಮ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಡೆದ ಪಂದ್ಯದಲ್ಲಿ ವ್ಲಾಗಿಮಿರ್ ಕೊಮನ್ (66 ನೇ ನಿಮಿಷ) ಗಳಿಸಿದ ಏಕೈಕ ಗೋಲು ಚೆನ್ನೈಯಿನ್ ತಂಡ ಋತುವಿನಲ್ಲಿ ಜಯದ ಆರಂಭ ಕಾಣನಲು ನೆರವಾಯಿತು.
ಭಾರತದ ಯುವ ಆಟಗಾರರಿಂದ ಕೂಡಿದ್ದ ಹೈದರಾಬಾದ್ ತಂಡದ ಹಾಲಿಚರಣ್ ನಾರ್ಜರಿ ಪಂದ್ಯದ ಹತ್ತನೇ ನಿಮಿಷದಲ್ಲಿ ಗಾಯಗೊಂಡು ಅಂಗಣದಿಂದ ಹೊರನಡೆದಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಚೆನ್ನೈಯಿನ್ ತಂಡದ ಗೋಲ್ಕೀಪರ್ ವಿಷಾಲ್ ಕೈಥ್ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ ಕಾರಣ ಹೈದರಾಬಾದ್ಗೆ ಗೋಲು ದಾಖಲಿಸಲಾಗಲಿಲ್ಲ.
ಹೈದರಾಬಾದ್ ತಂಡದ ಬಾರ್ಥಲೋಮ್ಯೊ ಒಗ್ಬಚೆ ಸಿಕ್ಕ ಸುಲಭ ಅವಕಾಶಗಳನ್ನು ಕೈ ಚೆಲ್ಲಿದ್ದು ತಂಡದ ಸೋಲಿಗೆ ಮತ್ತೊಂದು ಕಾರಣವಾಯಿತು. ಚೆನ್ನೈಯಿನ್ ತಂಡದ ಮಿರ್ಲಾನ್ ಮುರ್ಜೇವ್ ಮತ್ತು ಲಾಲ್ರಿಯಾಂಜುವಾಲಾ ಚಾಂಗ್ಟೆಗೆ ಕೂಡ ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿದರು. ಇದರಿಂದ ಪ್ರಥಮಾರ್ಧದಲ್ಲಿ ಗೋಲು ದಾಖಲಾಗಲಿಲ್ಲ.
ದ್ವಿತಿಯಾರ್ಧದ 66ನೇ ನಿಮಿಷದಲ್ಲಿ ಹೈದರಾಬಾದ್ ಆಟಗಾರರು ಮಾಡಿದ ಪ್ರಮಾದಕ್ಕಾಗಿ ಬೆಲೆ ತೆರಬೇಕಾಯಿತು. ಚೆನ್ನೈಯಿನ್ ತಂಡದ ನೂತನ ನಾಯಕ ಅನಿರುದ್ಧ್ ತಾಪಾ ಅವರನ್ನು ಹಿತೇಶ್ ಶರ್ಮಾ ಅವರು ಪೆನಾಲ್ಟಿ ವಲಯದಲ್ಲಿ ಕೆಡಹಿದ ಕಾರಣ ಚೆನ್ನೈಯಿನ್ಗೆ ಪೆನಾಲ್ಟಿ ಅವಕಾಶವನ್ನು ಕಲ್ಪಿಸಲಾಯಿತು. ಎಎಸ್ ಮೊನಾಕೊದ ಮಾಜಿ ಆಟಗಾರ ವ್ಲಾಗಿಮಿರ್ ಕೊಮನ್ ಯಾವುದೇ ಪ್ರಮಾದ ಎಸಗದೆ ಚೆಂಡನ್ನು ಗೋಲ್ ಬಾಕ್ಸ್ಗೆ ಸೇರಿಸಿದರು. ಚೆನ್ನೈಯಿನ್ ಜಯದ ಆರಂಭ ಕಂಡಿತು.