Friday, November 22, 2024

ಜ. 4-7: ಆಳ್ವಾಸ್‌ನಲ್ಲಿ ಅಖಿಲ ಭಾರತ ಅಂತರ್‌ ವಿವಿ ಕ್ರೀಡಾಕೂಟ

sportsmail

ಜನವರಿ 4 ರಿಂದ 7ರವರೆಗೆ ಮೂಡಬಿದಿರೆಯ ಸ್ವರಾಜ್‌ ಮೈದಾನದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಅಥ್ಲೆಟಿಕ್‌ ಚಾಂಪಿಯನ್ಷಿಪ್‌ಗೆ ಕೇಂದ್ರ ಕ್ರೀಡಾ ಸಚಿನ ಅನುರಾಗ್‌ ಠಾಕೂರ್‌ ಚಾಲನೆ ನೀಡಲಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್‌ ಡಾ. ಕಿಶೋರ್‌ ಕುಮಾರ್‌ ಸಿ.ಕೆ, “400 ವಿಶ್ವವಿದ್ಯಾನಿಲಯಗಳಿಂದ 2,000ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ 1000 ಕ್ಕೂ ಹೆಚ್ಚು ಕ್ರೀಡಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ,” ಎಂದು ಹೇಳಿದರು.  ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್‌ ಶಿಕ್ಷಣ ಸಂಸ್ಥೆ ಮೂಡಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾಕೂಟ ನಡೆಯಲಿದೆ.

ರಾಜ್ಯ ಕ್ರೀಡಾ ಸಚಿನ ನಾರಾಯಣ ಗೌಡ, ಮಂಗಳೂರು ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಕನ್ನಡ ಸಂಸ್ಕೃತಿ ಸಚಿನ ವಿ. ಸುನಿಲ್‌ ಕುಮಾರ್‌, ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಉಮಾನಾಥ್‌ ಕೋಟ್ಯಾನ್‌, ಮಾಜಿ ಸಚಿನ ಅಭಯಚಂದ್ರ ಜೈನ್‌, ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘಟನೆಯ ಜಂಟಿ ಕಾರ್ಯದರ್ಶಿ, ಡಾ. ಬಲ್ಜಿತ್‌ ಸಿಂಗ್‌ ಸೆಖೋನ್‌, ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಪಿ.ಎಸ್.‌ ಯಡಪಡಿತ್ತಾಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

 

23 ಸ್ಪರ್ಧೆಗಳು ನಡೆಯುತ್ತಿದ್ದು, ಕ್ರೀಡಾಪಟುಗಳು ಆನ್‌ಲೈನ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು, ನಾಲ್ಕು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಯ ಗಳಿಸುವ ವಿದ್ಯಾರ್ಥಿಗಳು ಖೇಲೋ ಇಂಡಿಯಾ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಮೆರವಣಿಗೆ:

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಸುಮಾರು 100 ತಂಡಗಳ ಸಾಂಸ್ಕೃತಿಕ ಮೆರವಣಿಗೆ ಮೂಡಬಿದಿರೆಯ ಹನುಮಾನ್‌ ಮಂದಿರದಿಂದ ಆರಂಭಗೊಳ್ಳಲಿದೆ. ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಸೊಬಗು ಮೂಡಬಿದಿರೆಯಲ್ಲಿ ಅನಾವರಣಗೊಳ್ಳಲಿದೆ.

ಆಳ್ವಾಸ್‌ನಿಂದ ನಗದು ಬಹುಮಾನ:

ಮೂಡಬಿದಿರೆಯಲ್ಲಿ ಐದನೇ ಬಾರಿಗೆ ಅಖಿಲ ಭಾರತ ವಿವಿ ಕ್ರೀಡಾಕೂಟ ನಡೆಯುತ್ತಿದೆ, ಆಳ್ವಾಸ್‌ ಶಿಕ್ಷಣ ಸಂಸ್ಥೆಯು ನಗದು ಬಹುಮಾನ ನೀಡಿ ಕ್ರೀಡಾಪಟುಗಳನ್ನು ;ಪ್ರೋತ್ಸಾಹಿಸಲಿದೆ ಎಂದು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್‌ ಆಳ್ವಾ ಅವರು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪಟ್ಟ ಗೆಲ್ಲುವವರಿಗೆ 50,000 ರೂ, ನಗದು ಬಹುಮಾನ ನೀಡಲಾಗುವುದು. ಮೊದಲ ಹಾಗೂ ದ್ವಿತೀಯ ರನ್ನರ್‌ ಅಪ್‌ ಸ್ಥಾನ ಗಳಿಸಿದವರಿಗೆ  ಅನುಕ್ರಮವಾಗಿ 30,000 ಮತ್ತು 20,000 ರೂ. ನಗದು ಬಹುಮಾನ ನೀಡಲಾಗುವುದು. ನೂತನ ದಾಖಲೆ ಬರೆದ ಕ್ರೀಡಾಪಟುಗಳಿಗೆ 25,000 ರೂ,ಗಳ ನಗದು ಬಹುಮಾನವಿರುತ್ತದೆ.

ಪ್ರತಿಯೊಂದು ವಿಭಾಗದಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ಕ್ರೀಡಾಪಟುಗಳಿಗೆ ಅನುಕ್ರಮವಾಗಿ 25,000, 15,000 ಮತ್ತು 10,000 ರೂ. ನಗದು ಬಹುಮಾನ ನೀಡಲಾಗುವುದು ಎಂದು ಡಾ, ಮೋಹನ್‌ ಆಳ್ವಾ ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ಉಚಿತ ಊಟ, ವಸತಿ ಮತ್ತು ಸಾರಿಗೆ ಸೌಲಭ್ಯ ಇರುತ್ತದೆ.

Related Articles