sportsmail
ಉಳ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಹಾಗೂ ಮಹಾಲಿಂಗೇಶ್ವರನ ಹೆಸರಿನಲ್ಲೇ ನಡೆಯುವ ಎರಡನೇ ವರ್ವಷದ ವಾಲಿಬಾಲ್ ಹಬ್ಬ ಮಹಾಲಿಂಗೇಶ್ವರ ಟ್ರೋಫಿ ಚಾಂಪಿಯನ್ಷಿಪ್‌ಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಉಳ್ತೂರು ಸಜ್ಜಾಗಿ ನಿಂತಿದೆ.
ಹೊಸ ವರುಷದ ಮೊದಲ ದಿನ ಅಂದರೆ 1-1-2022ರ ಶನಿವಾರದಂದು ಅಪರಾಹ್ನ 2 ಗಂಟೆಗೆ ಕುಂದಾಪುರ, ಬ್ರಹ್ಮಾವರ ಮತ್ತು ಬೈಂದೂರು ತಾಲೂಕಿನ 16 ತಂಡಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿ ಎರಡನೇ ಬಾರಿಗೆ ಉಳ್ತೂರಿನಲ್ಲಿ ನಡೆಯುತ್ತಿದೆ.
ತನಗೆ ಬದುಕು ನೀಡಿದ ಕ್ರೀಡೆಯನ್ನು ತನ್ನ ಊರಿನಲ್ಲಿ ಯಾವ ರೀತಿಯಲ್ಲಿ ಬೆಳೆಸಬಹುದು ಎಂಬುದನ್ನು ತೋರಿಸಿಕೊಟ್ಟ ರಾಜ್ಯದ ಶ್ರೇಷ್ಠ ವಾಲಿಬಾಲ್ ಆಟಗಾರರಲ್ಲಿ ಒಬ್ಬರಾದ ಸುದೀಪ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಈ ಟೂರ್ನಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶವಾದ ಮಲ್ಯಾಡಿಯಲ್ಲಿ ವಾಲಿಬಾಲ್ ಮೂಲಕವೇ ಬೆಳೆದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿ ಈಗ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಸುದೀಪ್ ಶೆಟ್ಟಿ ಉಳ್ತೂರು ಮಾತ್ರವಲ್ಲ ಈ ಭಾಗದ ಯುವಕರಿಗೆ ಮಾದರಿ ಇದ್ದಂತೆ.
16 ತಂಡಗಳು:
ಪ್ರತಿಷ್ಠಿತ ಮಹಾಲಿಂಗೇಶ್ವರ ಟ್ರೋಫಿಗಾಗಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ತಾಲೂಕಿನ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ವಿಜೇತ ತಂಡಕ್ಕೆ 30,000 ರೂ ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು, ರನ್ನರ್ ಅಪ್ ತಂಡಕ್ಕೆ 20,000 ರೂ, ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಮೂರನೇ ಸ್ಥಾನ ಪಡೆದ ತಂಡಕ್ಕೆ 10,000 ರೂ, ನಗದು ಮತ್ತು ಟ್ರೋಫಿ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 5,000 ರೂ ಹಾಗೂ ಶಾಶ್ವತ ಫಲಕ ನೀಡಲಾಗುವುದು.
ಹುಣ್ಸೆಮಕ್ಕಿ ಫ್ರೆಂಡ್ಸ್, ಪ್ರಥ್ವಿ ಸ್ಪೋರ್ಟ್ಸ್ ಕ್ಲಬ್ ಬೈಂದೂರು, ಆದರ್ಶ ಬ್ರಹ್ಮಾವರ, ವೈಸಿಎಫ್ ಮುದ್ದುಮನೆ, ಎಬಿ ಚಾಲೆಂಜರ್ಸ್ ಹಲ್ತೂರು, ಮಧುವನ ಎ, ಮಧುವನ ಬಿ, ಕಟ್ಕೆರೆ ಫ್ರೆಂಡ್ಸ್ ಕಟ್ಕೆರೆ, ವಕ್ವಾಡಿ ಫ್ರೆಂಡ್ಸ್ ವಕ್ವಾಡಿ, ಬ್ರಹ್ಮಾವರ ಫ್ರೆಂಡ್ಸ್ ಬ್ರಹ್ಮಾವರ, ಮಲ್ಯಾಡಿ ಫ್ರೆಂಡ್ಸ್ ಮಲ್ಯಾಡಿ, ಬೀಜಾಡಿ ಫ್ರೆಂಡ್ಸ್, ಬೀಜಾಡಿ, ಗೋಲ್ಡನ್ ಮಿಲ್ಲರ್ ಕುಂದಾಪುರ, ಗುಲ್ವಾಡಿ ಫ್ರೆಂಡ್ಸ್ ಗುಲ್ವಾಡಿ, ಶಾನಾಡಿ ಫ್ರೆಂಡ್ಸ್ ಶಾನಾಡಿ, ಕುಂದಾಪುರ ಫ್ರೆಂಡ್ಸ್, ಕುಂದಾಪುರ ಹೀಗೆ ಪ್ರದೇಶ ಆಧಾರಿತ ತಂಡಗಳು ಚಾಂಪಿಯನ್ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಪ್ರಮುಖ ತಂಡಗಳು.
ಉದ್ಘಾಟನಾ ಸಮಾರಂಭ:
ಶನಿವಾರ ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೆದೂರು ಮಾಳವಿಕ ಕನ್‌ಸ್ಟ್ರಕ್ಷನ್‌ನ ಮಾಲೀಕರಾದ ಸದಾನಂದ ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಉದ್ಘಾಟಕರಾಗಿ ಬೈಕಾಡಿಯ ಕ್ಲಾಸ್ ಒನ್ ಗುತ್ತಿಗೆದಾರರಾದ ಜೀವನ್ ಶೆಟ್ಟಿ, ಮೊಳಹಳ್ಳಿಯ ಕ್ಲಾಸ್ ಒನ್ ಗುತ್ತಿಗೆದಾರರಾದ ದಿನೇಶ್ ಹೆಗ್ಡೆ ಹಾಗೂ ಕುಂದಾಪುರದ ಕ್ಲಾಸ್ ಒನ್ ಗುತ್ತಿಗೆದಾರರಾದ ರಾಜೇಶ್ ಕಾರಂತ್ ಅವರು ಪಾಲ್ಗೊಳ್ಳುವರು.
ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಅರಣ್ಯ ಅಧಿಕಾರಿ ಪ್ರಭಾಕರನ್ (ಐಎಫ್‌ಎಸ್) ಹಾಗೂ ಆಶೀಶ್ ರೆಡ್ಡಿ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಾನಾಡಿಯ ಕ್ಲಾಸ್ ಒನ್ ಗುತ್ತಿಗೆದಾರರಾದ ಸಂಪತ್ ಶೆಟ್ಟಿ, ಉಳ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಎಸ್‌ಎಸ್‌ವಿ ತೆಕ್ಕಟ್ಟೆ, ಶಿವರಾಮ್ ಶೆಟ್ಟಿ, ಮಹಾದೇವಿ ಪ್ರಸಾದ್ ಮಲ್ಯಾಡಿ, ಸುರೇಶ್ ಮೊಗವೀರ ಬೇಳೂರು, ರೋಟರಿ ಕ್ಲಬ್ ತೆಕ್ಕಟ್ಟೆ, ನವೀನ್ ಹೆಗ್ಡೆ ಶಾನಾಡಿ, ನಿರ್ದೇಶಕರು ಕೋಟ ಸಿ.ಎ. ಬ್ಯಾಂಕ್, ಗೌರೀಶ್ ಹೆಗ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೊರ್ಗಿ, ಅರುಣ್ ಕುಮಾರ್ ಶೆಟ್ಟಿ, ಮಹಾಲಿಂಗೇಶ್ವರ ಅರ್ಥ್ ಮೂವರ್ಸ್ ಉಳ್ತೂರು ಮೊದಲಾದ ಅತಿಥಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಯುವ ಪ್ರತಿಭೆಗಳಿಗೆ ಮಾದರಿ:
ವಾಲಿಬಾಲ್ ಚಾಂಪಿಯನ್ಷಿಪ್ ಬಗ್ಗೆ ಮಾತನಾಡಿದ ಉದ್ಯಮಿ ಸದಾನಂದ ಶೆಟ್ಟಿ, “ಸುದೀಪ್ ಶೆಟ್ಟಿ ಒಬ್ಬ ವಾಲಿಬಾಲ್ ಆಟಗಾರನಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿದವರು. ಅವರಂಥ ಪ್ರತಿಭಾವಂಥ ಆಟಗಾರರು ನಮ್ಮೂರಿನ ಯುವ ಆಟಗಾರರಿಗೆ ಮಾದರಿ ಎನಿಸಿದ್ದಾರೆ. ಊರಿನಲ್ಲಿ ಇಂಥ ಟೂರ್ನಿಗಳನ್ನು ನಡೆಸುವುದರಿಂದ ಇಲ್ಲಿನ ಯುವಕರು ಪ್ರಭಾವಿತರಾಗಿ ಈ ಕ್ರೀಡೆಯಲ್ಲಿ ತೊಡಗಿಕೊಂಡು ಮತ್ತಷ್ಟು ಪ್ರತಿಭಾವಂತ ಆಟಗಾರರು ಮೂಡಿ ಬರಲು ಸಹಾಯವಾಗುತ್ತದೆ. ಮಹಾಲಿಂಗೇಶ್ವರ ಟ್ರೋಫಿಗೆ ಯಾವಾಗಲೂ ನಾವು ಪ್ರೋತ್ಸಾಹ ನೀಡುತ್ತೇವೆ,” ಎಂದು ಹೇಳಿದರು.