Friday, January 3, 2025

ಅಹಮದಾಬಾದ್‌ಗೆ ಜಯ ತಂದ ಅಂಗಮುತ್ತು

sportsmail:

ರೂಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ನ ಐದನೇ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಆಹಮದಾಬಾದ್‌ ಡಿಫೆಂಡರ್ಸ್‌ ತಂಡ ಕ್ಯಾಲಿಕಟ್‌ ಹೀರೋಸ್‌ ವಿರುದ್ಧ 3-2 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.

ಇಲ್ಲಿನ ಗಾಚಿ ಬೌಲಿ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದ ಸೆಟ್‌ನಲ್ಲಿ ಸೋಲನುಭವಿಸಿದರೂ ನಂತರ ಚೇತರಿಸಿಕೊಂಡ ಅಹಮದಾಬಾದ್‌ ಡಿಫೆಂಡರ್ಸ್‌ 12-15, 15-11, 10-15, 15-12, 15-11 ಅಂತರದಲ್ಲಿ ಜಯ ಗಳಿಸಿತು. ತಂಡದ ಡಿಫೆಂಡರ್‌ ಅಂಗಮುತ್ತು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

 

ಎರಡೂ ತಂಡಗಳು ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದವು, ಪರಿಣಾಮ ಪಂದ್ಯ ಒಂದು ಹಂತದಲ್ಲಿ 6-6ರ ಸಮಬಲದಲ್ಲಿ ಸಾಗಿತ್ತು. ಡಿಫೆಂಡರ್ಸ್‌ ಪರ  ರೆಯಾನ್‌ ಮೀಹಾನ್‌ ಮತ್ತು ಹೀರೋಸ್‌ ಪರ ಅಜಿತ್‌ ಸಿ. ದಿಟ್ಟ ಹೋರಾಟ ನೀಡಿದರು. ಆದರೆ ಕ್ಯಾಲಿಕಟ್‌ ಸೂಪರ್‌ ಪಾಯಿಂಟ್‌ ಗಳಿಸಿ 13-10 ಅಂತರದಲ್ಲಿ ಮೇಲುಗೈ ಸಾಧಿಸಿತು. ಮತ್ತೆ ಹಿಂದಿರುಗಿ ನೋಡದ ಕ್ಯಾಲಿಕಟ್‌ 15-12 ಅಂತರದಲ್ಲಿ ಮೊದಲ ಸೆಟ್‌ ಗೆದ್ದುಕೊಂಡಿತು.

ಎರಡನೇ ಸೆಟ್‌ನಲ್ಲಿ ಮುಜೀಬ್‌ ಎಂಸಿ ಉತ್ತಮ ರೀತಿಯಲ್ಲಿ ಬ್ಲಾಕ್‌ ಮಾಡುವುದರೊಂದಿಗೆ ಕ್ಯಾಲಿಕಟ್‌ ಹೀರೋಸ್‌ 5-2 ಅಂತರದಲ್ಲಿ ಮುನ್ನಡೆ ಕಂಡಿತ್ತು. ಡಿಫೆಂಡರ್ಸ್‌ ಪರ ನಾಯಕ ಮುತ್ತುಸ್ವಾಮಿ ಉತ್ತಮ ಬ್ಲಾಕ್‌ ಪ್ರದರ್ಶಿಸಿ ತಂಡಕ್ಕೆ 7-7ರಲ್ಲಿ ಸಮಬಲಗೊಳ್ಳುವಂತೆ ಮಾಡಿದರು. ನಂತರ ಅಂಗಮುತ್ತು ಬ್ಲಾಕ್‌ ಮತ್ತು ಸ್ಪೈಕ್‌ ಮೂಲಕ ಉತ್ತಮ ಆಟ ಪ್ರದರ್ಶಿಸಿ ಅಂಗಮುತ್ತು ತಂಡ ಎರಡನೇ ಸೆಟ್‌ ಗೆಲ್ಲುವಂತೆ ಮಾಡಿದರು.

ಹೀರೋಸ್‌ ಈ ಬಾರಿಯೂ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿ ಮೇಲುಗೈ ಕಂಡಿತು. 12-8 ರಲ್ಲಿ ಮುನ್ನಡೆ ಕಾಯ್ದುಕೊಂಡು ಸೆಟ್‌ ಗೆಲ್ಲಲು ವೇದಿಕೆ ನಿರ್ಮಿಸಿಕೊಂಡಿತು. ಅಜಿತ್‌ ಲಾಲ್‌ ಅವರ ಬ್ಲಾಕ್‌ ಮತ್ತು ಸ್ಪೈಕ್‌ ನೆರವಿನಿಂದ ಹೀರೋಸ್‌ ಮೂರನೇ ಸೆಟ್‌ ಗೆದ್ದು 2-1ರಲ್ಲಿ ಮುನ್ನಡೆ ಕಂಡುಕೊಂಡಿತು.

ನಾಲ್ಕನೇ ಸೆಟ್‌ನಲ್ಲಿ ಶೊನ್‌ ಜಾನ್‌ ಅವರ ಸ್ಪೈಕ್‌ ನೆರವಿನಿಂದ ಡಿಫೆಂಡರ್ಸ್‌ 7-4 ಅಂತರದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂತಿಮ ಹಂತದವರೆಗೂ ಮುನ್ನಡೆಯನ್ನು ಕಾಯ್ದುಕೊಂಡು 15-12 ಅಂತರದಲ್ಲಿ ನಾಲ್ಕನೇ ಸೆಟ್‌ ಡಿಫೆಂಡರ್ಸ್‌ ಪಾಲಾಯಿತು. ಪರಿಣಾಮ ಪಂದ್ಯ 2-2ರಲ್ಲಿ ಸಮಬಲಗೊಂಡಿತು.

ಅಂತಿಮ ಸೆಟ್‌ನಲ್ಲಿ ಅಹಮದಾಬಾದ್‌ ಡಿಫೆಂಡರ್ಸ್‌ ಆರಂಭದಲ್ಲೇ 6-2 ಅಂತರದಲ್ಲಿ ಮುನ್ನಡೆ ಕಂಡು ಜಯಕ್ಕೆ ವೇದಿಕೆ ನಿರ್ಮಿಸಿಕೊಂಡಿತು. ಅಂಗಮುತ್ತು ಅವರ ಸ್ಪೈಕ್‌ ಮತ್ತು ರೆಯಾನ್‌ ಮಿಹಾನ್‌ ಅವರ ಬ್ಲಾಕ್‌ ನೆರವಿನಿಂದ ಅಹಮದಾಬಾದ್‌ 15-11 ಅಂತರದಲ್ಲಿ ಸೆಟ್‌ ಗೆದ್ದು ಪಂದ್ಯ ವಿಜಯಿಯಾಯಿತು.

Related Articles