Friday, November 22, 2024

ಏಷ್ಯಾಕಪ್‌, ವಿಶ್ವಕಪ್‌, ರಣಜಿ, ಐಪಿಎಲ್‌…ಇದು ಅನೀಶ್ವರ್‌!!

ಸೋಮಶೇಖರ್‌ ಪಡುಕರೆ, sportsmail

U19 ಏಷ್ಯಾಕಪ್‌ ಚಾಂಪಿಯನ್‌, U19 ವಿಶ್ವಕಪ್‌ ಚಾಂಪಿಯನ್‌, ರಣಜಿಗೆ ಆಯ್ಕೆ, ಐಪಿಎಲ್‌ಗೆ ಆಯ್ಕೆ…ಇವೆಲ್ಲವೂ ಒಬ್ಬ ಕ್ರಿಕೆಟಿಗನ ಬದುಕಿನಲ್ಲಿ ಒಂದೇ ಋತುವಿನಲ್ಲಿ ಸಂಭವಿಸಿದರೆ ಆತನೊಬ್ಬ ಅದೃಷ್ಟವಂಥ, ಸಮರ್ಥ ಆಟಗಾರನೆನಿಸಿಕೊಳ್ಳುವುದು ಸಹಜ. ಆ ಅದೃಷ್ಟವಂತ ಹಾಗೂ ಸಮರ್ಥ ಆಟಗಾರ ಬೇರೆ ಯಾರೂ ಅಲ್ಲ, ಬೆಂಗಳೂರಿನಲ್ಲಿ ನೆಲೆಸಿರುವ ಚಿಕ್ಕಮಗಳೂರಿನ ಯುವ ಆಲ್ರೌಂಡರ್‌ ಕನ್ನಡಿಗ ಅನೀಶ್ವರ್‌ ಗೌತಮ್‌.

ಚಿಕ್ಕಂದಿನಿಂದಲೂ ಆರ್‌ಸಿಬಿ ತಂಡದ ಅಭಿಮಾನಿಯಾಗಿ, ಎಲ್ಲ ಪಂದ್ಯಗಳನ್ನೂ ವೀಕ್ಷಿಸಿ ಒಂದು ದಿನ ಆ ತಂಡದ ಆಟಗಾರನಾಗಬೇಕೆಂದು ಕನಸು ಕಂಡಿದ್ದ ಅನೀಶ್ವರ್‌ ಈಗ ಅದೇ ತಂಡಕ್ಕೆ ಸೇರಿಕೊಂಡಿದ್ದು, ಜಗತ್ತಿನ ಶ್ರೇಷ್ಠ ಆಟಗಾರರೊಂದಿಗೆ ಆಡುವ ಅವಕಾಶ ಪಡೆದಿದ್ದಾರೆ.

ಆರ್‌ಸಿಬಿಗೆ ಆಯ್ಕೆಯಾದ ನಂತರ ಅನೀಶ್ವರ್‌ sportsmail ಜತೆ ಮಾತನಾಡಿ, ಇದುವರೆಗಿನ ತಮ್ಮ ಕ್ರಿಕೆಟ್‌ ಬದುಕಿನ ಅಪೂರ್ವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಫ್ಯಾನ್:‌ “ಚಿಕ್ಕಂದಿನಿಂದಲೂ ನಾನು ಆರ್‌ಸಿಬಿ ಫ್ಯಾನ್‌. ಸೋಲಲಿ, ಗೆಲ್ಲಲಿ ನಮ್ಮ ಬೆಂಬಲ ಮಾತ್ರ ಆರ್‌ಸಿಬಿಗೆ ಇದ್ದೇ ಇರುತ್ತಿತ್ತು. ಏಕೆಂದರೆ ಸೋಲು, ಗೆಲುವು ಆಟದಲ್ಲಿ ಇದ್ದುದ್ದೇ, ಹಲವು ವರ್ಷಗಳಿಂದ ಆರ್‌ಸಿಬಿಗೆ ಬೆಂಬಲ ನೀಡುತ್ತಿದ್ದೆ. ಈಗ ಅದೇ ತಂಡಕ್ಕೆ ಆಡಲು ಆಯ್ಕೆಯಾದಾಗ ನನ್ನ ಖುಷಿಗೆ ಪಾರವೇ ಇಲ್ಲ. ತಂಡದಲ್ಲಿ ಬಹಳ ಅನುಭವಿ ಆಟಗಾರರಿದ್ದಾರೆ, ಅವರಿಂದ ಬಹಳಷ್ಟು ಕಲಿಯುವುದಿದೆ, ಈ ಋತುವಿನ ಆರಂಭಕ್ಕಾಗಿ ಉತ್ಸುಕನಾಗಿರುವೆ,” ಎಂದು ಹೇಳಿದರು.

ರಣಜಿಯಲ್ಲಿ ಉತ್ತಮವಾಗಿ ಆಡುವಾಸೆ: “ಕರ್ನಾಟಕ ರಣಜಿಗೆ ಅದರದ್ದೇ ಆದ ಪರಂಪರೆ ಇದೆ. ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡು ಕರ್ನಾಟಕ ತಂಡ ಈ ಬಾರಿ ರಣಜಿ ಚಾಂಪೊಯನ್‌ ಪಟ್ಟ ಗೆಲ್ಲಲು ತಂಡದೊಂದಿಗೆ ಶ್ರಮಿಸುವೆ. ಹಿರಿಯರ ಮಾರ್ಗದರ್ಶನದಲ್ಲಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವೆ. ಹಿರಿಯ ಆಟಗಾರರ ಆಟವನ್ನು ನೋಡಿ ನನ್ನ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಉತ್ತಮಪಡಿಸಿಕೊಳ್ಳುವೆ,” ಎಂದರು.

U19 ವಿಶ್ವಕಪ್‌ ಅದ್ಭುತ ಅನುಭವ: “ಭಾರತದ ಪರ U19 ವಿಶ್ವಕಪ್‌ ಆಡಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಅದರಲ್ಲೂ ನಾವು ಚಾಂಪಿಯನ್ನರಾಗಿರುವುದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಈ ಟೂರ್ನಿಯಿಂದ ನಾನು ಸಾಕಷ್ಟು ಅನುಭವ ಪಡೆದಿರುವೆ, ಅದನ್ನು ನನ್ನ ಮುಂದಿನ ಕ್ರಿಕೆಟ್‌ ಬದುಕಿನಲ್ಲಿ ಅಳವಡಿಸಿಕೊಳ್ಳುವೆ. ವಿವಿಎಸ್‌ ಲಕ್ಷ್ಮಣ್‌ ಸರ್‌ ನಮಗೆ ಸಲಹೆಗಾರರಾಗಿ ಸಿಕ್ಕಿದ್ದು ನನಗೆ ಬಹಳ ವೈಯಕ್ತಿಕವಾಗಿ ಬಹಳ ಪ್ರಯೋಜವಾಗಿದೆ. ಅವರು ನೀಡಿದ ಸಲಹೆಗಳು ಕ್ರಿಕೆಟ್‌ ಬದುಕಿನುದ್ದಕ್ಕೂ ಪ್ರಯೋಜನಕ್ಕೆ ಬರುವಂಥದ್ದು, ಹಿರಿಯರ ಕ್ರಿಕೆಟ್‌ ಕಾಲಿಡಲು U19 ಕ್ರಿಕೆಟ್‌ ಮೊದಲ ಹೆಜ್ಜೆಯಾಗಿದೆ. ಇದು ಕಲಿಕೆಯ ಮೊದಲ ಪಾಠ ಎಂದು ನಾನು ತಿಳಿದಿರುವೆ, ನಾವು ಸಾಗಬೇಕಾದ ಹಾದಿ ಇನ್ನೂ ಇದೆ,” ಎಂದು ಹೇಳಿದರು.

 

 

 

ಅದ್ಭುತ ಆಟಗಾರರು: U19 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಪಟ್ಟಗೆದ್ದುಕೊಂಡಿತು. ಭಾರತದ ಆಟಗಾರರ ಬಗ್ಗೆ ಎಂದಿನಂತೆ ಗೌರವ, ಹೆಮ್ಮೆ ಇರುವುದು ಸಹಜ, ಅದೇ ರೀತಿ ಇತರ ತಂಡಗಳಲ್ಲಿ ಉತ್ತಮವಾಗಿ ಆಡಿದ ಆಟಗಾರರ ಬಗ್ಗೆಯೂ ಗೌರವ ಇರುತ್ತದೆ. ಹಾಗೇ ಅನೀಶ್ವರ್‌ ವಿಶ್ವಕಪ್‌ನಲ್ಲಿ ಗಮನ ಸೆಳೆದ ಇಬ್ಬರು ಆಟಗಾರರ ಬಗ್ಗೆ ಮಾತನಾಡಿದ್ದಾರೆ. “ಕಿರಿಯರ ವಿಶ್ವಕಪ್‌ನಲ್ಲಿ ಅನೇಕ ಪ್ರತಿಭಾವಂತರು ಆಡಿದ್ದಾರೆ. ಅವರಲ್ಲಿ ನನಗೆ ಖುಷಿ ಕೊಟ್ಟಿದ್ದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಡೆವಾಲ್ಡ್‌ ಬ್ರೆವಿಸ್‌. 506 ರನ್‌ ಗಳಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರು ಪ್ರತಿಯೊಂದು ಪಂದ್ಯದಲ್ಲೂ ಆಡಿದ್ದಾರೆ.  ಬೌಲಿಂಗ್‌ನಲ್ಲಿ ಅಫಘಾನಿಸ್ತಾನದ ಚೈನಾಮನ್‌ ಬೌಲರ್‌ ನೂರ್‌ ಅಹಮ್ಮದ್‌. ಅವರು ತಾವಾಡಿದ ಎಲ್ಲ ಪಂದ್ಯಗಳಲ್ಲೂ ವಿಕೆಟ್‌ ಗಳಿಸಿರುತ್ತಾರೆ,” ಎಂದು ಎದುರಾಳಿ ತಂಡದ ಸಾಧನೆಯ ಬಗ್ಗೆಯೂ ಅನೀಶ್ವರ್‌ ಮೆಚ್ಚುಗೆಯ ಮಾತನಾಡಿದರು.

ತಮ್ಮ ಯಶಸ್ಸಿನಲ್ಲಿ ಹೆತ್ತವರ ಪಾತ್ರ ಪ್ರಮುಖವಾಗಿದೆ ಎಂಬುದನ್ನು ಚಾಂಪಿಯನ್‌ ಆಟಗಾರ ಅನೀಶ್ವರ್‌ ಹೇಳಲು ಮರೆತಿಲ್ಲ. ಮುಂದಿನ ದಿನಗಳಲ್ಲಿ ಭಾರತ ಹಿರಿಯರ ತಂಡವನ್ನು ಪ್ರತಿನಿಧಿಸುವ ಕ್ರಿಕೆಟ್‌ ಸಾಮರ್ಥ್ಯ, ಅನುಭವ ಕರ್ನಾಟಕದ ಈ ಆಟಗಾರನಿಗೆ ಸಿಗಲಿ ಎಂಬುದೇ ಹಾರೈಕೆ.

Related Articles