Friday, November 22, 2024

ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ಗೆ 4700 ಕ್ರೀಡಾಪಟುಗಳು

ಪಂಚಕುಲ, ಜೂ. 2:

ಜೂನ್‌ 4 ರಿಂದ ಆರಂಭಗೊಳ್ಳಲಿರುವ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ಗೆ ಪಂಚಕುಲದಲ್ಲಿರುವ ತಾವ್‌ ದೇವಿ ಲಾಲ್‌ ಕ್ರೀಡಾಂಗಣ ಮದುಮಗಳಂತೆ ಶ್ರಂಗಾರಗೊಂಡಿದ್ದು ಈ ಬಾರಿ ಅಧಿಕ ಸಂಖ್ಯೆಯಲ್ಲಿ ಅಂದರೆ 2262 ಮಹಿಳಾ ಕ್ರೀಡಾಪಟುಗಳು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 4700 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ನೂತನವಾಗಿ ನಿರ್ಮಾಣಗೊಂಡಿರುವ ಬಹುಪಯೋಗಿ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ 25 ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಅಥ್ಲೆಟಿಕ್ಸ್‌, ಫುಟ್ಬಾಲ್‌, ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಕಬಡ್ಡಿ, ಹ್ಯಾಂಡ್‌ಬಾಲ್‌, ಕುಸ್ತಿ, ವಾಲಿಬಾಲ್‌, ಬಾಕ್ಸಿಂಗ್‌ ಮತ್ತು ಐದು ದೇಶೀಯ ಕ್ರೀಡೆಗಳು ಈ ಬಾರಿಯ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿದೆ.

ಇತರ ನಾಲ್ಕು ನಗರಗಳಾದ ಅಂಬಾಲ (ಜಿಮ್ನಾಸ್ಟಿಕ್‌, ಈಜು), ಶಹಬಾದ್‌ (ಹಾಕಿ), ಚಂಡೀಗಢ (ಆರ್ಚರಿ, ಫುಟ್ಬಾಲ್‌) ಹೊಸದಿಲ್ಲಿ (ಸೈಕ್ಲಿಂಗ್‌ ಮತ್ತು ಶೂಟಿಂಗ್‌) ವಿವಿಧ ಕ್ರೀಡೆಗಳಿಗೆ ಆತಿಥ್ಯ ನೀಡಲಿವೆ.

36 ರಾಜ್ಯಗಳು: ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲ್ಗೊಳ್ಳುತ್ತಿವೆ. ಆತಿಥೇಯ ಹರಿಯಾಣ ರಾಜ್ಯವು ಅತಿ ಹೆಚ್ಚು ಅಂದರೆ 398 ಕ್ರೀಡಾಪಟುಗಳನ್ನು ವಿವಿಧ ವಿಭಾಗಗಳಲ್ಲಿ ಅಂಗಣಕ್ಕಿಳಿಸಲಿದೆ.

ಹಾಲಿ ಚಾಂಪಿಯನ್‌ ಮಹಾರಾಷ್ಟ್ರ 357 ಕ್ರೀಡಾಪಟುಗಳನ್ನು ಅಂಗಣಕ್ಕಿಳಿಸುತ್ತಿದ್ದು, ಅತಿ ಹೆಚ್ಚು ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಂಡಮಾನ್‌ ನಿಕೋಬಾರ್‌ ಅತಿ ಕಡಿಮೆ ಅಂದರೆ ಆರು ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸುತ್ತಿದ್ದು, ಎಲ್ಲರೂ ಸೈಕ್ಲಿಂಗ್‌ ಸ್ಪರ್ಧಿಗಳು, ಲಡಾಕ್‌ ಏಳು ಕ್ರೀಡಾಪಟುಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದೆ.

ಅಥ್ಲೆಟಿಕ್ಸ್‌ನಲ್ಲಿ ಅತಿ ಹೆಚ್ಚು ಸ್ಪರ್ಧಿಗಳು: ಕ್ರೀಡಾಕೂಟದ ಅತ್ಯಂತ ಆಕರ್ಷಣೀಯ ವಿಭಾಗವಾಗಿರುವ ಅಥ್ಲೆಟಿಕ್ಸ್‌ನಲ್ಲಿ ಅತಿ ಹೆಚ್ಚು ಅಂದರೆ 392 ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಕುಸ್ತಿಯಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಯಶಸ್ಸು ಕಾಣುತ್ತಿದ್ದು, ಈ ಕ್ರೀಡೆಯಲ್ಲಿ 323 ಸ್ಪರ್ಧಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ಭಾರತದ ಪ್ರಮುಖ ಯುವ ಅಂತಾರಾಷ್ಟ್ರೀಯ ಈಜುಗಾರರು ಈ ಬಾರಿ ಪಾಲ್ಗೊಳ್ಳುತ್ತಿದ್ದು, ಒಟ್ಟು 251 ಸ್ಪರ್ಧಿಗಳು ಈಜುಕೊಳದಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಬಾಕ್ಸಿಂಗ್‌ನಲ್ಲಿ 236 ಸ್ಪರ್ಧಿಗಳು ರಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಒಲಿಂಪಿಕ್ಸ್‌ ಕ್ರೀಡೆಯಾಗಿರುವ ಹಾಕಿಯಲ್ಲಿ 288 ಆಟಗಾರರು ಅಂಗಣಲ್ಲಿ ವಿವಿಧ ತಂಡಗಳ ಮೂಲಕ ಸ್ಪರ್ಧಿಸಲಿದ್ದಾರೆ.

ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿ ಮತ್ತು  ಖೋ ಖೋದಲ್ಲಿ ತಲಾ 192 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ನಾಲ್ಕು ದೇಶೀಯ ಕ್ರೀಡೆಗಳಾದ ಗಾತಕ್‌ನಲ್ಲಿ 227, ಮಲ್ಲಕಂಬದಲ್ಲಿ 218,ಕಲರಿಪಯಟ್‌ನಲ್ಲಿ 187 ಮತ್ತು ತಾಂಗ್‌ ತಾದಲ್ಲಿ 140 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಯೋಗಾಸನದಲ್ಲಿ 87 ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದು, ಪಂಚಕುಲ ಕ್ರಿಕೆಟ್‌ ಅಂಗಣಲ್ಲಿ ಖೋ ಖೋ ಸೇರಿದಂತೆ ಈ ಎಲ್ಲ ದೇಶೀಯ ಕ್ರೀಡೆಗಳ ಸ್ಪರ್ಧೆಗಳು ನಡೆಯಲಿವೆ.

ಅಥ್ಲೆಟಿಕ್ಸ್‌ ಮತ್ತು ಈಜಿನಲ್ಲಿ ಒಟ್ಟು 210 ಪದಕಗಳಿಗಾಗಿ ವೈಯಕ್ತಿಕ ಸ್ಪರ್ಧೆ ಹೆಚ್ಚಿನ ಕುತೂಹಲಗಳಿಗೆ ಸಾಕ್ಷಿಯಾಗಲಿದೆ. ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ದಿಲ್ಲಿ ಸ್ಪರ್ಧಿಗಳು ತಮ್ಮ ಪ್ರಭುತ್ವಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಕೇರಳ ಪ್ರಭುತ್ವ ಸಾಧಿಸುವ ಗುರಿಹೊಂದಿದೆ.

Related Articles