Thursday, November 21, 2024

ಈಜಿನಲ್ಲಿ ಪ್ರಭುತ್ವ ಸಾಧಿಸಿದ ಕರ್ನಾಟಕ, ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಭದ್ರ

ಪಂಚಕುಲ, ಜೂ. 11

ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಕಳೆದ ಮೂರು ಆವೃತ್ತಿಗಳಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟುತ್ತಿದ್ದ ಕರ್ನಾಟಕ ಈಜುಗಾರರ ಅದ್ಭುತ ಸಾಧನೆಯ ನೆರವಿನಿಂದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಎರಡು ದಿನಗಳ ಸ್ಪರ್ಧೆ ಬಾಕಿ ಇರುವಂತೆ ಕರ್ನಾಟಕ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಈಜಿನಲ್ಲಿ ಕರ್ನಾಟಕದ ಈಜುಗಾರರು ದಿನದ ಆರು ಚಿನ್ನದ ಪದಕಗಳಲ್ಲಿ ನಾಲ್ಕನ್ನು ತಮ್ಮದಾಗಿಸಿಕೊಂಡರು. ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್‌ ಪಟೇಲ್‌ ಚಿನ್ನ ಗೆದ್ದರೆ. ಪುರುಷರ 800 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಗೌಡ, ವನಿತೆಯರ 200 ಮೀ. ಬ್ಯಾಕ್‌ ಸ್ಟ್ರೋಕ್‌ನಲ್ಲಿ ರಿದೀಮಾ ವೀರೇಂದ್ರ ಕುಮಾರ್‌ ಮತ್ತು ರಿಲೇ 4×100 ರಲ್ಲಿ ಕರ್ನಾಟಕ ಚಿನ್ನದ ಸಾಧನೆ ಮಾಡಿದೆ.

ಕರ್ನಾಟಕ ಒಟ್ಟು 21 ಚಿನ್ನ, 13 ಬೆಳ್ಳಿ ಹಾಗೂ 18 ಕಂಚಿನ ಪದಕಗಳು ಸೇರಿ ಒಟ್ಟು 52 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 37 ಚಿನ್ನ, 34 ಬೆಳ್ಳಿ ಹಾಗೂ 29 ಕಂಚಿನ ಪದಕಳೊಂದಿಗೆ ಒಟ್ಟು 100 ಪದಕಗಳನ್ನು ಗೆದ್ದ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದ್ದು, 36 ಚಿನ್ನ, 33 ಬೆಳ್ಳಿ ಹಾಗೂ 39 ಕಂಚಿನ ಪದಕಗಳೊಂದಿಗೆ 108 ಪದಕಗಳನ್ನು ಗೆದ್ದಿರುವ ಆತಿಥೇಯ ಹರಿಯಾಣ ಎರಡನೇ ಸ್ಥಾನದಲ್ಲಿದೆ.

ವನಿತೆಯರ ಟೆನಿಸ್‌ ಸಿಂಗಲ್ಸ್‌ ಫೈನಲ್‌ನಲ್ಲಿ ಮಹಾರಾಷ್ಟ್ರದ ಆಕಾಂಕ್ಷ ನಿಟ್ಟೂರ್‌ ಅವರ ವಿರುದ್ಧ ಉತ್ತಮ ಪೈಪೋಟಿ ನೀಡಿ ಸೋಲುಂಡ ಕರ್ನಾಟಕದ ಸನೀತಾ ಮರೂರಿ ಬೆಳ್ಳಿಗೆ ತೃಪ್ತಿಪಟ್ಟರು.

ನಿರೀಕ್ಷೆಯಂತೆ ಕೇರಳ ಕಳರಿಪಯಟ್‌ನಲ್ಲಿ 11 ಚಿನ್ನ, 10ಬೆಳ್ಳಿ ಹಾಗೂ 10ಕಂಚಿನ ಪದಕಗಳೊಂದಿಗೆ ಪ್ರಭುತ್ವ ಸಾಧಿಸಿದೆ. ಈ ಸಾಧನೆಯೊಂದಿಗೆ ಕೇರಳ ಪದಕಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.

ಟೆನಿಸ್‌ನಲ್ಲಿ ದ್ರವ ಹಿರ್ಪರಾ ಮತ್ತು ಸೈಕ್ಲಿಂಗ್‌ನಲ್ಲಿ ಮುಸ್ಕಾನ್‌ ಚಿನ್ನದ ಪದಕ ಗೆಲ್ಲುವುದರೊಂದಿಗೆ ಎಂಟನೇ ದಿನದಲ್ಲಿ ಗುಜರಾತ್‌ ಎಲ್ಲ ಗಮನ ಸೆಳೆಯಿತು.

ಫುಟ್ಬಾಲ್‌ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ 0-4 ಗೋಲುಗಳ ಅಂತರದಲ್ಲಿ ಮಿಜೋರಾಂಗೆ ಶರಣಾಗಿ ಫೈನಲ್‌ ತಲಪುವಲ್ಲಿ ವಿಫಲವಾಯಿತು.

ಈಜಿನಲ್ಲಿ ಪುರುಷರ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಕರ್ನಾಟಕದ ನಯನ್‌ ವಿಘ್ನೇಷ್‌ ಕಂಚಿನ ಪದಕ ಗೆದ್ದರು. ವನಿತೆಯರ ವಿಭಾಗದಲ್ಲಿ ರಾಜ್ಯದ ಮಾನವಿ ವರ್ಮಾ ಮೂರನೇ ಸ್ಥಾನ ಗಳಿಸಿ ಕಂಚು ಗೆದ್ದರು.

Related Articles