ಸೋಮಶೇಖರ್ ಪಡುಕರೆ, ಬೆಂಗಳೂರು
2020ರಲ್ಲಿ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ 4 ಚಿನ್ನ ಹಾಗೂ 2 ಬೆಳ್ಳಿ ಪದಕ ಗೆದ್ದು ಮರುದಿನ ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ಪಾಸಾದ, ಈ ಬಾರಿ ಹರಿಯಾಣದಲ್ಲಿ ನಡೆದ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ 6 ಚಿನ್ನದ ಪದಕಗಳನ್ನು ಗೆದ್ದು, ಶ್ರೇಷ್ಠ ಕ್ರೀಡಾಪಟು ಗೌರವಕ್ಕೆ ಪಾತ್ರರಾದ ಮರು ದಿನವೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ …ಹೀಗೆ ಓದು ಮತ್ತು ಕ್ರೀಡೆಯನ್ನು ಸಮಾನ ರೀತಿಯಲ್ಲಿ ಕಂಡು, ಯಶಸ್ಸು ಸಾಧಿಸುತ್ತಿರುವ ದೇಶದ ಭರವಸೆಯ ಈಜುಗಾರ ಅನೀಶ್ ಗೌಡ ನಿಜವಾಗಿಯೂ ಕರುನಾಡಿನ ಚಿನ್ನದ ಮೀನು.
ಸೋಮವಾರ ಮುಕ್ತಾಯಗೊಂಡ ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದಿರುವ ಅನೀಶ್ ಅವರ ಸಾಧನೆಯನ್ನು ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ ಅವರೇ ಮುಕ್ತಕಂಠದಿಂದ ಹೊಗಳಿದ್ದಾರೆ. 200 ಮೀ. ಫ್ರೀ ಸ್ಟೈಲ್‌ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದಿರುವ ಅನೀಶ್. 400 ಮೀ. ಫ್ರೀ ಸ್ಟೈಲ್, 800 ಮೀ. ಫ್ರೀಸ್ಟೈಲ್, 1500 ಮೀ. ಫ್ರೀ ಸ್ಟೈಲ್ ಹಾಗೂ ಎರಡು ರಿಲೇಗಳಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.
ಬೇಸಿಗೆ ಶಿಬಿರದಲ್ಲಿ ಹುಟ್ಟಿದ ಆಸಕ್ತಿ:
ಕ್ರೀಡೆಗೆ ಪ್ರೋತ್ಸಾಹ ನೀಡುವ ಸುನಿಲ್ ಕುಮಾರ್ ಹಾಗೂ ಲಾವಣ್ಯ ಗೌಡ ದಂಪತಿಯ ಹಿರಿಯ ಮಗನಾಗಿರುವ ಅನೀಶ್ ಗೌಡ, ಕಳೆದ ಎಂಟು ವರ್ಷಗಳಿಂದ ಈಜಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಬಸವನಗುಡಿ ಅಕ್ವೆಟಿಕ್ ಸೆಂಟರ್‌ನಲ್ಲಿ ನಟರಾಜ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬೆಳೆವ ಸಿರಿ ಮೊಳಕೆಯಲ್ಲೇ ಎಂಬಂತೆ, 2008ರಲ್ಲಿ ಬೇಸಿಗೆ ಶಿಬಿರದಲ್ಲಿ ಈಜಿನಲ್ಲಿ ಪಾಲ್ಗೊಂಡಾಗ ಹುಟ್ಟಿದ ಆಸಕ್ತಿ ಭವಿಷ್ಯದ ಉತ್ತಮ ಈಜುಗಾರನೊಬ್ಬನನ್ನು ಹುಟ್ಟುಹಾಕಿತು.
ದಾಖಲೆಗಳ ಸರದಾರ:
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೋಂಡ ಅನೀಶ್, ಇದುವರೆಗೂ ರಾಜ್ಯಮಟ್ಟದಲ್ಲಿ 200 ಹಾಗೂ ರಾಷ್ಟ್ರಮಟ್ಟದಲ್ಲಿ 60 ಪದಕಗಳ ಸಾಧನೆ ಮಾಡಿದ್ದಾರೆ. ಇದರಲ್ಲಿ ಚಿನ್ನದ ಪದಕಗಳೇ ಹೆಚ್ಚು. ದಕ್ಷಿಣ ಆಫ್ರಿಕಾದಲ್ಲಿ ನಡೆದ ರಾಷ್ಟ್ರೀಯ ಈಜಿನಲ್ಲಿ 800 ಮೀ. ಫ್ರೀ ಸ್ಟೈಲ್‌ನಲ್ಲಿ ಚಿನ್ನ ಹಾಗೂ 1500 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಕರ್ನಾಟಕ ರಾಜ್ಯ ಮಟ್ಟದ ಈಜಿನಲ್ಲಿ ಮೂರು ದಾಖಲೆಗಳನ್ನು ಬರೆದಿರುವ ಅನೀಶ್, 400 ಮೀ. ಫ್ರೀ ಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ರಾಜ್ಯದಲ್ಲಿ 400, 800 ಹಾಗೂ 1500 ಮೀ. ಫ್ರೀಸ್ಟೈಲ್‌ನಲ್ಲಿ ತಮ್ಮ ಹೆಸರಿನಲ್ಲಿ ದಾಖಲೆ ಬರೆದಿದ್ದಾರೆ.
ಟಾಪ್ ಯೋಜನೆಯಲ್ಲಿ ಅನೀಶ್: ಅನೀಶ್ ಅವರ ಸಾಧನೆಯನ್ನು ಗಮನಿಸಿರುವ ಕೇಂದ್ರ ಕ್ರೀಡಾ ಇಲಾಖೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS) ಯೋಜನೆಯಲ್ಲಿ ಅವಕಾಶ ಕಲ್ಪಿಸಿದೆ. ಇದು ಭವಿಷ್ಯದಲ್ಲಿ ಭಾರತವನ್ನು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿ ಪದಕ ಗೆಲ್ಲುವ ಸಾಮರ್ಥ್ಯ ಇರುವ ಕ್ರೀಡಾಪಟುಗಳಿಗೆ ನೆರವಾಗುವ ಯೋಜನೆ. ಅಲ್ಲದೆ ಅಮೃತಮಹೋತ್ಸವ ಯೋಜನೆಯಲ್ಲಿಯೂ ಅನೀಶ್‌ಗೆ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ.
ಮನೆಯಲ್ಲಿ ಮನೆಮಾಡಿದ ಸಂಭ್ರಮ: ಸುನಿಲ್ ಹಾಗೂ ಲಾವಣ್ಯ ದಂಪತಿ ಬನಶಂಕರಿಯಲ್ಲಿ ಶಿಕ್ಷಣ ಸಂಸ್ಥೆಯೊಂದು ನಡೆಸುತ್ತಿದ್ದಾರೆ. ಸುನಿಲ್ ಕ್ರೀಡೆಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುವವರು. ಅವರ ಶಾಲೆಯಲ್ಲೇ 50ಮೀ. ವಿಸ್ತೀರ್ಣದ ಈಜುಕೊಳವಿದೆ. ಅಂತಾರಾಷ್ಟ್ರೀಯ ಈಜುಗಾರ ಶರತ್ ಗಾಯಕ್ವಾಡ್ ಇಲ್ಲಿ ಪ್ರಧಾನ ಕೋಚ್ ಆಗಿದ್ದಾರೆ. ಜೊತೆಯಲ್ಲಿ ಅನೇಕ ವಿಶೇಷ ಚೇತನ ಈಜುಗಾರರೂ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. 1991ರ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಸುನಿಲ್ ಮಗನ ಸಾಧನೆಯ ಬಗ್ಗೆ ಅತೀವ ಆನಂದ ವ್ಯಕ್ತಪಡಿಸಿದ್ದಾರೆ. “ನಮ್ಮ ಮನೆಯಲ್ಲಿ ಡಾಕ್ಟರ್ ಹಾಗೂ ಎಂಜಿನಿಯರಿಂದ ತುಂಬಿಕೊಂಡಿದೆ. ಆದರೆ ನನ್ನ ಮಗ ಕ್ರೀಡೆಯಲ್ಲಿ ಇರುವುದು ನನಗೆ ಹೆಮ್ಮೆ. ಎಂಜಿನಿಯರ್ ಅಥವಾ ಡಾಕ್ಟರ್ ಆದವರು ಉತ್ತಮ ಸ್ಥಿತಿಯಲ್ಲಿ ಇರಬಹುದು. ಆದರೆ ದೇಶಕ್ಕಾಗಿ ಆಡುವುದು, ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಖೇಲೋ ಇಂಡಿಯಾ ಯೂಥ್ ಗೇಮ್ಸ್‌ನಲ್ಲಿ ನನ್ನ ಮಗ ಆರು ಚಿನ್ನವನ್ನು ಗೆದ್ದು, ಉತ್ತಮ ಕ್ರೀಡಾಪಟುವೆಂದು ಘೋಷಿಸಿದಾಗ ಅದು ನನ್ನ ಪಾಲಿಗೆ ಸ್ವರ್ಗವೇ ಭೂಮಿಗೆ ಬಂದಂತಾಗಿತ್ತು. ಈಗ ನನ್ನನ್ನು ಎಲ್ಲರೂ ಅನೀಶ್ ಗೌಡ ಅವರ ತಂದೆ ಎಂದು ಗುರುತಿಸುತ್ತಾರೆ. ಇದಕ್ಕಿಂತ ಬೇರೇನು ಬೇಕು?,” ಎಂದು ಹೇಳುವ ಸುನಿಲ್ ಅವರ ಕಣ್ಣಲ್ಲಿ ಅನಂದ ಭಾಷ್ಪ.
ಅಣ್ಣನ ಹಾದಿಯಲ್ಲೇ ತಮ್ಮ ಆಕರ್ಷ್: ಒಂದು ಮನೆಯಲ್ಲಿ ಅಥವಾ ಶಾಲೆಯಲ್ಲಿ ಸಾಧಕರು ಇದ್ದಾರೆಂದರೆ ಅಲ್ಲಿಯ ವಾತಾವರಣವೇ ಬದಲಾಗುತ್ತದೆ. ಅವರಂತೆ ಸಾಧನೆ ಮಾಡಲು ಕಿರಿಯರು ಕೂಡ ಮನಸ್ಸು ಮಾಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಅನೀಶ್ ಅವರ ತಮ್ಮ ಆಕರ್ಷ್ ಗೌಡ. ಅಣ್ಣನಂತೆ ಈಜಿನಲ್ಲಿ ತರಬೇತಿ ಪಡೆಯುತ್ತಿರುವ ಆಕರ್ಷ್ ಈ ವರ್ಷದಿಂದ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
“ಓದು ಇದ್ದೇ ಇರುತ್ತದೆ. ಮಕ್ಕಳು ಓದಿನ ಜೊತೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ದೈಹಿಕ ಕ್ಷಮತೆಯ ಜೊತೆಯಲ್ಲಿ ಮಕ್ಕಳು ಮಾನಸಿಕವಾಗಿಯೂ ಸದೃಢರಾಗುತ್ತಾರೆ. ಇದು ಓದಿಗೂ ನೆರವಾಗುತ್ತದೆ. ನಾವು ಪರ್ಸೆಂಟೇಜ್ ಕಡೆಗೆ ಗಮನ ಹರಿಸುವುದಿಲ್ಲ. ಪಠ್ಯೇತರ ಚಟುವಟಿಕೆಯಿಂದಲೂ ಸಾಧನೆ ಮಾಡಬಹುದು ಎಂಬುದನ್ನು ತೋರಿಬೇಕು,” ಎಂದು ಹೇಳುವ ಸುನಿಲ್ ಅವರ ಮಾತು, ಪರ್ಸೆಂಟೇಜ್ ಹಿಂದೆ ಬಿದ್ದಿರುವ ಹೆತ್ತವರಿಗೆ ಅರ್ಥವಾದೀತು.