Sunday, December 22, 2024

ನಾಳೆಯಿಂದ ಇರಾನಿ ಕಪ್: ಕರುಣ್ ನಾಯಕತ್ವದ ಶೇಷ ಭಾರತಕ್ಕೆ ವಿದರ್ಭ ಸವಾಲು

ನಾಗ್ಪುರ: ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್‌ನ ಕೊನೆಯ ಟೂರ್ನಿಯಾಗಿರುವ ಪ್ರತಿಷ್ಠಿತ ಇರಾನಿ ಕಪ್ ಪಂದ್ಯ ನಾಳೆ ಆರಂಭವಾಗಲಿದ್ದು, ಶೇಷ ಭಾರತ ಮತ್ತು ರಣಜಿ ಚಾಂಪಿಯನ್ ವಿದರ್ಭ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
PC: Twitter/Karun Nair/Mayank Agarwal/R Ashwin
ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿರುವ 5 ದಿನಗಳ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಪ್ರಬರ ಹೋರಾಟವನ್ನು ನಿರೀಕ್ಷಿಸಲಾಗಿದೆ.
ಕರ್ನಾಟಕದ ಸ್ಟಾರ್ ಬ್ಯಾಟ್ಸ್‌ಮನ್ ಕರುಣ್ ನಾಯರ್ ಶೇಷ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ 8 ಶತಕಗಳ ಸಹಿತ 2000ಕ್ಕೂ ಹೆಚ್ಚು ರನ್ ಕಲೆ ಹಾಕಿರುವ ಮಯಾಂಕ್ ಅಗರ್ವಾಲ್, ಭರವಸೆಯ ಬ್ಯಾಟ್ಸ್‌ಮನ್ ಆರ್.ಸಮರ್ಥ್ ಶೇಷ ಭಾರತ ತಂಡಲ್ಲಿರುವ ಕರ್ನಾಟಕದ ಮತ್ತಿಬ್ಬರು ಆಟಗಾರರಾಗಿದ್ದಾರೆ. ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್, ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಪೃಥ್ವಿ ಶಾ, ಆಂಧ್ರದ ಹನುಮ ವಿಹಾರಿ, ಪಂಜಾಬ್ ವೇಗಿ ಸಿದ್ದಾರ್ಥ್ ಕೌಲ್, ದಿಲ್ಲಿ ವೇಗಿ ನವ್‌ದೀಪ್ ಅಮರ್‌ಜೀತ್ ಸೈನಿ ಶೇಷ ಭಾರತ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ.
ಚೊಚ್ಚಲ ಬಾರಿ ರಣಜಿ ಚಾಂಪಿಯನ್ ಪಟ್ಟಕ್ಕೇರಿರುವ ವಿದರ್ಭ ತಂಡ ನಾಯಕ ಫಯಾಜ್ ಫಜಲ್, ಕರ್ನಾಟಕದ ಆಟಗಾರ ಗಣೇಶ್ ಸತೀಶ್, ಮುಂಬೈನ ಹಿರಿಯಣ್ಣ ವಾಸಿಂ ಜಾಫರ್ ಮತ್ತು ವೇಗಿ ಉಮೇಶ್ ಯಾದವ್ ಅವರನ್ನು ನೆಚ್ಚಿಕೊಂಡಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಎಲ್ಲಿ: ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನ, ನಾಗ್ಪುರ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ತಂಡಗಳು ಹೀಗಿವೆ
ಶೇಷ ಭಾರತ: ಕರುಣ್ ನಾಯರ್(ನಾಯಕ), ಮಯಾಂಕ್ ಅಗರ್ವಾಲ್, ಆರ್.ಸಮರ್ಥ್,ಅಭಿಮನ್ಯು ಈಶ್ವರನ್, ಹನುಮ ವಿಹಾರಿ, ಶಹಬಾಜ್ ನದೀಮ್, ಪೃಥ್ವಿ ಶಾ, ಕೆ.ಎಸ್ ಭರತ್, ಆರ್.ಅಶ್ವಿನ್, ಅಂಕಿತ್ ರಜಪೂತ್, ಜಯಂತ್ ಯಾದವ್,ಅತೀತ್ ಶೇಠ್, ಸಿದ್ದಾರ್ಥ್ ಕೌಲ್, ನವ್‌ದೀಪ್ ಸೈನಿ, ಅನ್ಮೋಲ್‌ಪ್ರೀತ್ ಸಿಂಗ್.
ವಿದರ್ಭ: ಫಯಾಜ್ ಫಜಲ್(ನಾಯಕ), ಗಣೇಶ್ ಸತೀಶ್,  ವಾಸಿಂ ಜಾಫರ್, ಅಕ್ಷಯ್ ಕರ್ನೇವರ್, ಲಲಿತ್ ಯಾದವ್, ಎಸ್. ರಾಮಸ್ವಾಮಿ, ಶಲಭ್ ಶ್ರೀವಾಸ್ತವ, ಆದಿತ್ಯ ಠಾಕ್ರೆಘಿ, ಅಕ್ಷಯ್ ವಾಡ್ಕರ್, ಅಕ್ಷಯ್ ವಾಖರೆ,  ಸಿದ್ದೇಶ್ ನೇರಲ್, ಆದಿತ್ಯ ಸರ್ವಾಠೆ, ಕರಣ್ ಶರ್ಮಾ, ಅಪೂರ್ವ ವಾಂಖೆಡೆ, ಸಿದ್ದೇಶ್ ವಾಥ್, ಉಮೇಶ್ ಯಾದವ್, ರಜನೀಶ್ ಗುರ್ಬಾನಿ.

Related Articles