Friday, November 22, 2024

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ತನ್ನದೇ ತಂಡ ಹೊಂದಲಿರುವ ಶಿವಮೊಗ್ಗ

ಶಿವಮೊಗ್ಗ: ಕಳೆದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿಯ ಚಾಲನೆ ಕಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ಸ್ಪರ್ಧಿಸಲಿರುವ ಶಿವಮೊಗ್ಗವು ತನ್ನದೇ ಆದ ತಂಡವನ್ನು ಹೊಂದಲಿದೆ. ಮೈಸೂರಿನ ಮಹಾರಾಜರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಘನತೆವೆತ್ತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಮರಣಾರ್ಥ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಪ್ರತಿಷ್ಠಿತ ಟೂರ್ನಿಯನ್ನು ಆಯೋಜಿಸಿದೆ. ಟೂರ್ನಿಯು ಆಗಸ್ಟ್‌ 7 ರಂದು ಆರಂಭಗೊಂಡು ಆಗಸ್ಟ್‌ 22ರವರೆಗೆ ನಡೆಯಲಿದೆ.

ಶಿವಮೊಗ್ಗದ ರಾಯಲ್‌ ಆರ್ಕಿಡ್‌  ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡದಿ ಅಂತಾರಾಷ್ಟ್ರೀಯ ಮಾಜಿ ಅಂಪೈರ್‌ ಹಾಗೂ ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ  ಶವೀರ್‌ ತಾರಾಪೂರ್‌, “ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸಲು ಅವಕಾಶ ನೀಡುವಲ್ಲಿ ಕೆಎಸ್‌ಸಿಎ ಯಾವಾಗಲೂ ಮೊದಲ ಆದ್ಯತೆಯನ್ನು ನೀಡುತ್ತದೆ. ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯಲ್ಲಿ ಶಿವಮೊಗ್ಗ ಜಿಲ್ಲೆಯು ತನ್ನದೇ ಆದ ತಂಡವನ್ನು ಹೊಂದಲಿದೆ ಎಂಬುದನ್ನು ಪ್ರಕಟಿಸಲು ನನಗೆ ಅತೀವ ಸಂತಸವಾಗುತ್ತದೆ, ಈ ಮೂಲಕ ಈ ವಲಯದ ಆಟಗಾರರಿಗೆ ನೇರಪ್ರಸಾರ ಗೊಳ್ಳುವ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದಂತಾಗಿದೆ,” ಎಂದರು.

ಟೂರ್ನಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಹೋರಾಟ ನಡೆಸಲಿವೆ. ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಆಗಸ್ಟ್‌7 ರಂದು ಮೈಸೂರಿನಲ್ಲಿ ಆರಂಭಗೊಳ್ಳಲಿದೆ. ಮೊದಲ ಹಂತದ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅಂಗಣದಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಫೈನಲ್‌ ಸೇರಿಂದತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.

“ಪ್ರತಿಯೊಂದು ತಂಡವು ಆಯಾ ಪ್ರದೇಶದ ಇಬ್ಬರು ಆಟಗಾರರನ್ನು ಒಳಗೊಂಡಿರಬೇಕಾಗಿರುವುದರಿಂದ ಶಿವಮೊಗ್ಗದ ಆಟಗಾರರಿಗೆ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಇಲ್ಲಿಯ ತಂಡದಲ್ಲಿ ಸ್ಥಾನ ಪಡೆಯುಲು ಉತ್ತಮ ಅವಕಾಶ,” ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಶಿವಮೊಗ್ಗ ವಲಯದ ಸಮನ್ವಯಕಾರ ಡಿಎಸ್‌ ಅರುಣ್‌ ಹೇಳಿದರು.

ಪ್ರತಿಯೊಂದು ಪಂದ್ಯವು ಸ್ಟಾರ್‌ ಸ್ಪೋರ್ಟ್ಸ್‌2 ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡದಲ್ಲಿ ನೇರ ಪ್ರಸಾರವಾಗೊಳ್ಳಲಿದೆ. ಫ್ಯಾನ್‌ಕೋಡ್‌ ಆಪ್‌ನಲ್ಲಿಯೂ ನೇರಪ್ರಸಾರವಾಗಲಿದೆ. ಸೈಕಲ್‌ ಅಗರ್‌ಬತ್ತಿಸ್‌, ಕಲ್ಯಾಣಿ ಮೋಟಾರ್ಸ್‌, ಜಿಂದಾಲ್‌ ಸ್ಟೀಲ್ಸ್‌, ಫಿಜಾ ಡೆವಲಪ್ಪರ್ಸ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಪ್ರೈ. ಲಿ., ಗುಲ್ಬರ್ಗಾ ಮೆಗಾಸ್ಪೀಡ್‌ ಮತ್ತು ಮೈಕಾನ್‌ ಎಂಜಿನಿಯರ್ಸ್‌ (ಹುಬ್ಬಳ್ಳಿ) ಇವರು ಅನುಕ್ರಮವಾಗಿ, ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಮತ್ತು ರಾಯಚೂರು ತಂಡಗಳ ಪ್ರಾಯೋಜಕರಾಗಿರುತ್ತಾರೆ.

ತಂಡದ ಆಟಗಾರರನ್ನು ಪ್ಲೇಯರ್ಸ್‌ ಡ್ರಾಫ್ಟ್‌ ಮೂಲಕ ಆಯ್ಕೆ ಮಾಡಲಾಗುವುದು. ಇದಕ್ಕೆ ಕೃತಕ ಬುದ್ಧಿಮತ್ತೆಯ ಕ್ರಮವನ್ನು (artificial intelligence system) ಅನುಸರಿಸಲಾಗುವುದು. ಅಟಗಾರರ ಹಿಂದಿನ ಸಾಧನೆಗಳನ್ನು ಆಧರಿಸಿ ಅವರನ್ನು ಬೇರೆ ಬೇರೆ ವರ್ಗಗಳನ್ನಾಗಿ ವಿಂಗಡಿಸಿ ಬೆಲೆ ನಿಗದಿಪಡಿಸಲಾಗುವುದು. ಕೆಎಸ್‌ಸಿಎಯು ನಿಯೋಜಿಸಿರುವ ಸಮಿತಿಯು ಪ್ರತಿಯೊಂದು ತಂಡಕ್ಕೂ ತರಬೇತಿ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಿದೆ,” ಎಂದು ಅರುಣ್‌ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಮಹಾರಾಜ ಟ್ರೋಫಿಯನ್ನು ಪ್ರದರ್ಶನ ಮಾಡಲಾಯಿತು. ಕೆಎಸ್‌ಸಿಎ ಅಧ್ಯಕ್ಷರು, ವಿಶ್ವಕಪ್‌ ವಿಜೇತ ತಂಡದ ಆಟಗಾರ ರೋಜರ್‌ ಬಿನ್ನಿ ಅವರು ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೋಫಿಯನ್ನು ಅನಾವರಣಗೊಳಿಸಿದ್ದರು. ಲಾಂಚನ ಮತ್ತು ಮಹಾರಾಜ ವಿಷಯಾಧಾರಿತ ಟ್ರೋಫಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಲೋಹದಲ್ಲಿ ಅತ್ಯಂತ ಸೂಕ್ಮ್ಚವಾಗಿ ಕೆತ್ತಲಾಗಿರುವ ಈ ಟ್ರೋಫಿಯಲ್ಲಿ 11 ರೆಕ್ಕೆಗಳಿದ್ದು, ಇದು ಕ್ರಿಕೆಟ್‌ ತಂಡದಲ್ಲಿರುವ ಒಟ್ಟು ಆಟಗಾರರನ್ನು ಪ್ರತಿನಿಧಿಸುತ್ತದೆ.

ಕರ್ನಾಟಕ ಶ್ರೇಷ್ಠ ಕ್ರಿಕೆಟಿಗರಾದ ದೇವದತ್ತ ಪಡಿಕ್ಕಲ್‌, ಶೃೇಯಸ್‌ ಗೋಪಾಲ್‌, ಕೆ. ಗೌತಮ್‌, ಮನೀಶ್‌ ಪಾಂಡೆ, ಜೆ. ಸುಚಿತ್‌, ಕರುಣ್‌ ನಾಯರ್‌, ಮಯಾಂಕ್‌ ಅಗರ್ವಾಲ್‌, ಅಭಿನವ್‌ ಮನೋಹರ್‌, ಕೆ.ಸಿ. ಕಾರಿಯಪ್ಪ, ಪ್ರವೀಣ್‌ ದುಬೆ ಮತ್ತು ಅಭಿಮನ್ಯು ಮಿಥುನ್‌ ಮಹಾರಾಜ ಟ್ರೋಫಿಯಲ್ಲಿ ಆಡುವ ನಿರೀಕ್ಷೆ ಇದೆ.

Related Articles