ಮುಂಬೈ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪಾಲಿಗೆ ಪತ್ನಿಯೇ ಶನಿಯಾಗಿ ಕಾಡುತ್ತಿದ್ದಾರೆ. ಶಮಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಪತ್ನಿ ಹಸೀನ್ ಜಹಾನ್ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಬಿಸಿಸಿಐ ಮುಂದಾಗಿದೆ.
ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪದ ಕುರಿತು ತನಿಖೆ ನಡೆಸುವಂತೆ ಬಿಸಿಸಿಐನ ಆಡಳಿತಾತ್ಮಕ ಸಮಿತಿ (ಸಿಒಎ) ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕ (ಎಸಿಯು)ಕ್ಕೆ ಸೂಚನೆ ನೀಡಿದೆ. ಏಳು ದಿನಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಒಎ ಮುಖ್ಯಸ್ಥ ವಿನೋದ್ ರಾಯ್, ಎಸಿಯು ಮುಖ್ಯಸ್ಥ ನೀರಜ್ ಕುಮಾರ್ಗೆ ಪತ್ರದ ಸೂಚಿಸಿದ್ದಾರೆ.
ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ ಕೋಲ್ಕತಾದಲ್ಲಿ ಕೊಲೆಯತ್ನ, ಕಿರುಕುಳದ ಕೇಸ್ ದಾಖಲಿಸಿದ್ದು, ಪೊಲೀಸರು ಎಫ್ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ.
ಶಮಿ ವಿರುದ್ಧ ವಿವಾಹೇತರ ಸಂಬಂಧಗಳ ಆರೋಪಗಳನ್ನು ಮಾಡಿ ವಿವಾದವೆಬ್ಬಿಸಿದ್ದ ಜಹಾನ್, ಕೆಲ ದಿನಗಳ ಹಿಂದಷ್ಟೇ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. ಇಂಗ್ಲೆಂಡ್ ಮೂಲದ ಮೊಹಮ್ಮದ್ ಭಾಯ್ ಎಂಬ ವ್ಯಕ್ತಿಯ ಸೂಚನೆಯಂತೆ ಶಮಿ, ದುಬೈನಲ್ಲಿ ಪಾಕಿಸ್ತಾನ ಮೂಲದ ಅಲೀಶ್ಬಾ ಎಂಬ ಮಹಿಳೆಯಿಂದ ದುಡ್ಡು ಸ್ವೀಕರಿಸಿದ್ದಾರೆ ಎಂದು ಹಸೀನ್ ಜಹಾನ್ ಆರೋಪಿಸಿದ್ದರು.