Friday, November 22, 2024

ಪ್ರೋ ಕಬಡ್ಡಿ ಲೀಗ್‌ ಹರಾಜಿನಲ್ಲಿ ಖೇಲೋ ಇಂಡಿಯಾದ 24 ಆಟಗಾರರು!

ಬೆಂಗಳೂರು: ಪ್ರೋ ಕಬಡ್ಡಿ ಲೀಗ್‌ (ಪಿಕೆಎಲ್‌) 9ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಆಗಸ್ಟ್‌ 5 ಮತ್ತು 6ರಂದು ಮುಂಬಯಿಯಲ್ಲಿ ನಡೆಯಲಿದ್ದು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳ 24 ಆಟಗಾರರನ್ನು ಹರಾಜಿನಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಮಷಾಲ್‌ ಸ್ಪೋರ್ಟ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಸುಮಾರು 500ಕ್ಕೂ ಹೆಚ್ಚು ಆಟಗಾರರು ಈ ಬಾರಿಯ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶೀಯ, ವಿದೇಶೀಯ ಹಾಗೂ ಹೊಸ ಯುವ ಆಟಗಾರರು (ಎನ್‌ವೈಪಿ) ಸೇರಿ ಒಟ್ಟು ನಾಲ್ಕು ವಿಭಾಗಗಳನ್ನು ಮಾಡಲಾಗುವುದು. ಹರಾಜಿನಲ್ಲಿ ಎ, ಬಿ, ಸಿ, ಮತ್ತು ಡಿ ವಿಭಾಗಗಳಿರುತ್ತವೆ. ನಂತರ ಆಟಗಾರರನ್ನು ಆಲ್ರೌಂಡರ್ಸ್‌,  ಡಿಫೆಂಡರ್ಸ್‌ ಮತ್ತು ರೈಡರ್ಸ್‌ಗಳನ್ನಾಗಿ ವಿಭಾಗಿಸಲಾಗುವುದು.

30ಲಕ್ಷ ರೂ. ಮೂಲ ಬೆಲೆ:  ಎ ವಿಭಾಗದಲ್ಲಿ ಸೇರಿರುವ ಆಟಗಾರರಿಗೆ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಬಿ ವಿಭಾಗದವರಿಗೆ 20ಲಕ್ಷ ಮತ್ತು ಸಿ. ವಿಭಾಗದ ಆಟಗಾರರಿಗೆ 10 ಲಕ್ಷ ರೂ. ಹಾಗೂ ಡಿ ವಿಭಾಗದ ಆಟಗಾರರಿಗೆ 6 ಲಕ್ಷ ರೂ. ನಿಗದಿಪಡಿಸಲಾಗಿದೆ.

ಆಟಗಾರರನ್ನು ಖರೀದಿಸಲು ಪ್ರತಿಯೊಂದು ಫ್ರಾಂಚೈಸಿಯು ಗರಿಷ್ಠ 4.4 ಕೋಟಿ ರೂ.ಗಳನ್ನು ವಿನಿಯೋಗಿಸಬಹುದು. 9ನೇ ಋತುವಿನ ಆಟಗಾರರ ಹರಾಜಿನಲ್ಲಿ ಬೆಂಗಳೂರಿನಲ್ಲಿ ನಡೆದ ಖೆಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳ 24 ಆಟಗಾರರು ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಸೇರಿರುತ್ತಾರೆ.

ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ, ವಿವೋ ಪಿಕೆಎಲ್‌ ನ ಲೀಗ್‌ ಕಮಿಷನರ್‌ ಮತ್ತು ಡಿಸ್ನಿ ಸ್ಟಾರ್‌ ಸ್ಪೋರ್ಟ್ಸ್‌ ಇಂಡಿಯಾದ ಸ್ಪೋರ್ಟ್ಸ್‌ ಲೀಗ್‌ ಸಿಇಒ   ಅನುಪಮ್‌ ಗೋಸ್ವಾಮಿ, “9ನೇ ಆವೃತ್ತಿಯ ಹರಾಜಿಗಾಗಿ ಆಟಗಾರರು ಸೇರಿದಂತೆ ಎಲ್ಲರೂ ಉತ್ಸುಕರಾಗಿದ್ದಾರೆ. ಪ್ರತಿಯೊಂದು ಋತುವಿನಲ್ಲೂ ಸಾಕಷ್ಟು ಯುವ ಆಟಗಾರರು ಉದಯಿಸಿರುವುದನ್ನು ನಾವು ನೋಡಿದ್ದೇವೆ. ಈ ಬಾರಿಯೂ ಸಾಕಷ್ಟು ಕುತೂಹಲಗಳಿಗೆ ಸಾಕ್ಷಿಯಾಗಲಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳ 24 ಆಟಗಾರರನ್ನು ಹರಾಜಿನಲ್ಲಿ ಸೇರಿಸಿಕೊಳ್ಳಲಾಗುವುದು,” ಎಂದು ಹೇಳಿದರು.

ಲೀಗ್‌ ನಿಯಮದಂತೆ 8ನೇ ಆವೃತ್ತಿಯಲ್ಲಿನ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ಫ್ರಾಂಚೈಸಿಗಳು ಹೊಂದಿವೆ. ಆಟಗಾರರು ಈ ನಿಯಮದಂತೆ 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಹೊಸ ಯುವ ಆಟಗಾರರ ವಿಭಾಗದಲ್ಲಿ  4 ಆಟಗಾರರನ್ನು ಉಳಿಸಿಕೊಳ್ಳಬಹುದು. ಫ್ರಾಂಚೈಸಿಗಳು ಉಳಿಸಿಕೊಳ್ಳದ ಆಟಗಾರರು ಎರಡು ದಿನಗಳ ಕಾಲ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತಾರೆ.

Related Articles