ಬೆಂಗಳೂರು, 29ನೇ ಜುಲೈ, 2022: ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಗೆ ಶ್ರೀರಾಮ್ ಗ್ರೂಪ್ ಟೈಟಲ್ ಪ್ರಾಯೋಜಕತ್ವ ನೀಡಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ. ಈ ಋತುವು ಸೇರಿದಂತೆ ಒಟ್ಟು ಮೂರು ಋತುಗಳಿಗೆ ಶ್ರೀರಾಮ್ ಗ್ರೂಪ್ ಪ್ರಾಯೋಜಕತ್ವ ವಹಿಸಲಿದೆ.
ವಾಣಿಜ್ಯ ಸಮೂಹವನ್ನು ಸ್ವಾಗತಿಸಿದ ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, “ ಕರ್ನಾಟಕದಲ್ಲಿ ಅದ್ಭುತ ಕ್ರೀಡಾ ಸಾಧನೆಯನ್ನು ಪ್ರಬಲಗೊಳಿಸವು ಕೆಎಸ್‌ಸಿಎಯ ಹಂಬಲಕ್ಕೆ ಬೆಂಬಲವಾಗಿ ನಿಂತ ಶ್ರೀರಾಮ್ ಗ್ರೂಪ್ ಜೊತೆ ಕೆಲಸ ಮಾಡಲು ನಮಗೆ ಹೆಮ್ಮೆ ಅನಿಸುತ್ತಿದೆ. ಮುಂದಿನ ಮೂರು ವರ್ಷಗಳಿಗೆ ಈ ಪ್ರಾಯೋಜಕತ್ವ ಮುಂದುವರಿಯಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ದೂರದೃಷ್ಠಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಶ್ರೀರಾಮ್ ಗ್ರೂಪ್‌ಗೆ ಧನ್ಯವಾದಗಳು,” ಎಂದು ಹೇಳಿದರು.
ಮೈಸೂರಿನ ಒಡೆಯರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರ ಸ್ಮರಣಾರ್ಥ ಈ ಪ್ರತಿಷ್ಠಿತ ಟಿ20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಮಹಾರಾಜ ಪ್ರೋಫಿಯು ಆಗಸ್ಟ್ 7ರಂದು ಮೈಸೂರಿನಲ್ಲಿ ಆರಂಭಗೊಳ್ಳುತ್ತಿದ್ದು, ಮೊದಲ ಹಂತದ ಪಂದ್ಯಗಳು ಮೈಸೂರಿನಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಒಟ್ಟು 18 ಪಂದ್ಯಗಳು ಮೈಸೂರಿನಲ್ಲಿ ಮತ್ತು ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.
ಶ್ರೀ ರಾಮ್ ಕ್ಯಾಪಿಟಲ್ ಶ್ರೀರಾಮ್ ಗ್ರೂಪ್‌ನ ಹಿಡುವಳಿ ಸಂಸ್ಥೆಯಾಗಿದ್ದು, ಸಾಮಾನ್ಯ ವಿಮೆ, ಜೀವವಿಮೆ, ವೆಲ್ತ್ ಮ್ಯಾನೇಜ್‌ಮೆಂಟ್, ಅಸೆಟ್ ಮ್ಯಾನೇಟಜ್‌ಮೆಂಟ್ ಸೇರಿಂದಂತೆ ಇತರ ಹಣಕಾಸು ಸೇವಾ ಉದ್ಯಮದಲ್ಲಿ ತೊಡಗಿದೆ. ಈ ಗ್ರೂಪ್ 2 ಲಕ್ಷ ಕೋಟಿಗೂ ಅಧಿಕ ಮೊತ್ತದ ಹಾಸ್ತಿಯನ್ನು ನಿರ್ವಹಣೆ ಮಾಡುತ್ತಿದೆ. ಶ್ರೀ ರಾಮ್ ಕ್ಯಾಪಿಟಲ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಿ.ವಿ. ರವಿ ಮಾತನಾಡಿ, “ಕರ್ನಾಟಕದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಶ್ರೀರಾಮ್ ಗ್ರೂಪ್ ಬದ್ಧವಾಗಿದೆ ಮತ್ತು ಕ್ರೀಡಾಮನೋಭಾವ, ಯುವಕರಲ್ಲಿ ಶಿಸ್ತು ಮತ್ತು ಭಾವೈಕ್ಯತೆಯನ್ನು ಬೆಳೆಸುವಲ್ಲಿ ಮತ್ತು ಬಗ್ಗೆ ಉತ್ತೇಜನ ನೀಡುವಲ್ಲಿ ಉತ್ಸುಕವಾಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಬರುವ ತಂಡಗಳು ಮತ್ತು ಆಟಗಾರರು ಒಂದಾಗಿ ಆಡಿ ಮತ್ತ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಉತ್ತಮ ವೇದಿಕೆಯಾಗಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಶ್ರೀರಾಮ್ ಪ್ರಾಪರ್ಟೀಸ್‌ನ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ ಎಂ. ಮುರಳಿ ಅವರು ಮಾತನಾಡಿ, “ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯ ಟೈಟಲ್ ಪ್ರಾಯೋಜಕತ್ವ ಹೊಂದಿರುವುದಕ್ಕೆ ನಮಗೆ ಅತೀವ ಸಂತಸವಾಗುತ್ತಿದೆ. ಕ್ರಿಕೆಟ್‌ಗೆ ಹೆಚ್ಚಿನ ಉತ್ತೇಜನ ನೀಡಲು ಶ್ರೀರಾಮ್ ಗ್ರೂಪ್ ಬೇರೆ ಬೇರೆ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದೆ. ತಮಿಳುನಾಡು ಪ್ರೀಮಿಯರ್ ಲೀಗ್ ಮತ್ತು ಆಂಧ್ರ ಪ್ರೀಮಿಯರ್ ಲೀಗ್‌ಗೂ ನಮ್ಮ ಗ್ರೂಪ್ ಟೈಟಲ್ ಪ್ರಾಯೋಜಕತ್ವ ನೀಡಿದೆ. ಹಲವಾರು ಜಾಗತಿಕ ಮಟ್ಟದ ಕ್ರಿಕೆಟಿಗರನ್ನು ನೀಡಿರುವ ಮತ್ತು ದೇಶದ ಶ್ರೇಷ್ಠ ತಂಡಗಳಲ್ಲಿ ಒಂದಾಗಿರುವ ಕೆಎಸ್‌ಸಿಎ ಜೊತೆ ಈ ಟೂರ್ನಿಯಲ್ಲಿ ಭಾಗವಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಈ ಟೂರ್ನಿಯು ಯಶಸ್ಸು ಕಾಣಲಿ ಎಂದು ಹಾರೈಸುತ್ತೇವೆ,” ಎಂದರು.
ಟೂರ್ನಿಯ ಬಹು ನಿರೀಕ್ಷಿತ ಆಟಗಾರರ ಆಯ್ಕೆ ಪ್ರಕ್ರಿಯೆಯು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರಪ್ರಸಾರಗೊಳ್ಳಲಿದೆ. ಎರಡು ವಾರಗಳ ಕಾಲ ನಡೆಯುವ ಟಿ20 ಕ್ರಿಕೆಟ್ ಹಬ್ಬವು ಸ್ಟಾರ್ ಸ್ಪೋರ್ಟ್ಸ್ 2 ಹಾಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರಪ್ರಸಾರಗೊಳ್ಳಲಿದೆ. ಫ್ಯಾನ್‌ಕೋಡ್ ಆಪ್‌ನಲ್ಲೂ ಪ್ರಸಾರವಿರುತ್ತದೆ.