Sunday, December 22, 2024

ಕ್ರೀಡಾಂಗಣದಲ್ಲಿರುವ ತಾಯಂದಿರಿಗೆ ಸ್ತನ್ಯಪಾನದ ಮಹತ್ವ ತಿಳಿಸಿದ ಡಾ. ರವ್‌ನೀತ್‌ ಜೋಶಿ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕ್ರೀಡಾ ಜಗತ್ತಿನಲ್ಲಿ ಹೆಚ್ಚಿನ ಮಹಿಳಾ ಕ್ರೀಡಾಪಟುಗಳು ಮದುವೆಯ ನಂತರ ಅಂಗಣಕ್ಕಿಳಿಯುವುದಿಲ್ಲ. ಮದುವೆ ಆಯಿತೆಂದರೆ ಅವರ ಕ್ರೀಡಾ ಬದುಕೇ ಮುಗಿದಂತೆ. ಆದರೆ ಮದುವೆಯಾಗಿ, ಮಗುವನ್ನು ಪಡೆದು ಕ್ರೀಡಾಂಗಣದಲ್ಲಿ ಮಿಂಚಿದ ತಾಯಂದಿರ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ. ತಾಯಿಯಾದ ನಂತರವೂ ಕ್ರೀಡಾ ಸಾಧನೆ ಮಾಡಬಹುದು, ಆದರೆ ಮಗುವಿಗೆ ಹಾಲುಣಿಸುವುದು ಅತ್ಯಂತ ಪ್ರಮುಖವಾದುದು. ಆಗಸ್ಟ್‌ 1 ರಿಂದ 7ರ ವರೆಗೆ ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆ (Pediatrician and Lactation) ವಿಭಾಗದಲ್ಲಿ ಎಂಡಿ ಆಗಿರುವ ಡಾ. ರವ್‌ನೀತ್‌ ಜೋಶಿ ಮಹಿಳಾ ಕ್ರೀಡಾಪಟುಗಳು ತಮ್ಮ ಮಗುವಿಗೆ ಸ್ತನ್ಯಪಾನ ಮಾಡುವುದರ ಜೊತೆಯಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ sportsmail ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಸರ್ಹಾ ಎಲಿಯಟ್‌ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಪಂದ್ಯದಲ್ಲಿ ಅಂಗಣದಲ್ಲಿ ಆಟವಾಡುತ್ತ ಊಟದ ವಿರಾಮ ಮತ್ತು ಟೀ ವಿರಾಮದ ನಡುವೆ ತನ್ನ ಒಂಬತ್ತು ತಿಂಗಳ ಮಗು ಸ್ಯಾಮ್‌ಗೆ  ಹಾಲುಣಿಸುತ್ತ ಮೊದಲ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದು ಕ್ರೀಡಾ ಜಗತ್ತನ್ನು ಅಚ್ಚರಿಗೊಳಿಸಿತ್ತು.

ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕಿ ಬಿಸ್ಮಾ ಮಾರೂಫ್‌ ತನ್ನ ಏಳು ತಿಂಗಳ ಮಗು ಫಾತಿಮಾಳನ್ನು ಕ್ರೀಡಾಂಗಣಕ್ಕೆ ಕರೆ ತಂದು ಅಲ್ಲಿಯೇ ಹಾಲುಣಿಸುತ್ತ ಅಭ್ಯಾಸ ನಡೆಸಿದ್ದು ಕ್ರಿಕೆಟ್‌ ಜಗತ್ತಿನಲ್ಲಿ ಹೊಸ ಅಲೆಯನ್ನೆಬ್ಬಿಸಿತ್ತು.

ಟೋಕಿಯೋ ಒಲಿಂಪಿಕ್ಸ್‌ನ 400ಮೀ. ಓಟದಲ್ಲಿ ಕಂಚಿನ ಪದಕ ಗೆದ್ದು, ಒಲಿಂಪಿಕ್ಸ್‌ನಲ್ಲಿ 10ನೇ ಪದಕ ಗೆದ್ದು ದಾಖಲೆ ಬರೆದ ಅಮೆರಿಕದ ಓಟಗಾರ್ತಿ ಅಲಿಸನ್‌ ಫೆಲಿಕ್ಸ್‌ ತಾಯಿಯಾಗುತ್ತಿರುವ ಸುದ್ದಿ ತಿಳಿದು ಪ್ರಾಯೋಕರಾದ ನೈಕಿ ಕಂಪೆನಿ ಶೇ, 70ರಷ್ಟು ಜಾಹೀರಾತಿನ ಹಣವನ್ನು ಕಡಿತ ಮಾಡುವುದಾಗಿ ಘೋಷಿಸಿತು. ತಾಯ್ತನವನ್ನು ಗೌರವಿಸದ ನೈಕಿಗೆ ದಿಟ್ಟ ಸವಾಲು ನೀಡಿದ ಫೆಲಿಕ್ಸ್‌ ತಾಯಿಯಾದ ಮೇಲೂ ಒಲಿಂಪಿಕ್ಸ್‌ ಪದಕ ಗೆದ್ದಿರುವುದು ಕ್ರೀಡಾ ಜಗತ್ತಿಗೆ ಮಾದರಿ ಎನಿಸಿದರು. ಅಲ್ಲದೆ ಜಗತ್ತಿನ ಇತರ ಮಹಿಳಾ ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು. ಜಮೈಕಾದ ಒಲಿಂಪಿಯನ್‌ ಶೆಲ್ಲಿ ಆನ್‌ ಪ್ರೆಸರ್‌ ಪ್ರೈಸ್‌ ಅಭ್ಯಾಸದ ನಡುವೆಯೇ ಮಗುವಿಗೆ ಹಾಲುಣಿಸುತ್ತ ಚಿನ್ನ ಗೆದ್ದು ಜಗತ್ತಿನ ವನಿತೆಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದ ಸಾಧಕಿ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಮಹಿಳಾ ಕ್ರೀಡಾಪಟುಗಳು ತಮ್ಮ ಮಕ್ಕಳಿಗೆ ಎದೆಹಾಲು ಉಣಿಸಲು ಮೊದಲ ಬಾರಿಗೆ ಕ್ರೀಡಾ ಗ್ರಾಮದಲ್ಲಿ ಅವಕಾಶ ಕಲ್ಪಿಸಲಾಯಿತು. ಆರಂಭದಲ್ಲಿ ಟೋಕಿಯೋ ಸಂಘಟನಾ ಸಮಿತಿ ಇದಕ್ಕೆ ಅವಕಾಶ ನೀಡಿರಲಿಲ್ಲ, ಆದರೆ ತೀವ್ರ ರೀತಿಯಲ್ಲಿ ಪ್ರತಿಭಟನೆ ಮೂಡಿ ಬಂದಾಗ ಅಂತಿಮವಾಗಿ ಅವಕಾಶ ಕಲ್ಪಿಸಲಾಯಿತು.

ಮೇಲಿನ ಎಲ್ಲ ಘಟನೆಗಳನ್ನು ಗಮನಿಸಿದಾಗ ಮಹಿಳಾ ಕ್ರೀಡಾಪಟುಗಳು ಮದುವೆಯಾಗಿ ಮಗುವನ್ನು ಹಡೆದ ಕಾರಣಕ್ಕೆ ಕ್ರೀಡೆಯನ್ನು ತೊರೆಯಬೇಕಾದ ಅಗತ್ಯವಿಲ್ಲ ಎಂಬುದನ್ನು ಸಾರಿ ಹೇಳುತ್ತದೆ ಮಾತ್ರವಲ್ಲ, ತಾಯಿಯಾದವಳು ಮಗುವಿಗೆ ಎದೆಹಾಲು ಉಣಿಸುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ತಿಳಿಸುತ್ತದೆ.

ಕ್ರೀಡಾಂಗಣಗಳಲ್ಲಿ ಸೌಲಭ್ಯ ಕಲ್ಪಿಸಬೇಕು:

“ಮಗುವನ್ನು ಹಡೆದ ಕಾರಣಕ್ಕೆ ಮಹಿಳಾ ಕ್ರೀಡಾಪಟುಗಳು ಕ್ರೀಡೆಯನ್ನು ತೊರೆಯುವ ಅಗತ್ಯವಿಲ್ಲ. ಮಗುವಿನ ಆರೈಕೆಗೆ ಸ್ತನ್ಯಪಾನ ಅತ್ಯಂತ ಪ್ರಮುಖವಾದುದು. ಇದು ಮಗವಿಗೆ ಮಾತ್ರವಲ್ಲ, ಮಗುವಿನ ತಾಯಿಯ ಆರೋಗ್ಯಕ್ಕೂ ಉತ್ತಮವಾದುದು. ಕಠಿಣ ಅಭ್ಯಾಸದ ನಡುವೆಯೂ ತಾಯಿ ತನ್ನ ಎದೆಹಾಲನ್ನು ಮಗುವಿಗೆ ಕೊಡಬಹುದು. ಇತ್ತೀಚಿನ ವರ್ಷಗಳಲ್ಲಿ ಅನೇಕ ತಾಯಂದಿರು ತಮ್ಮ ಸೌಂದರ್ಯ ಮತ್ತು ಫಿಟ್ನೆಸ್‌ ಕಾಯ್ದುಕೊಳ್ಳವು ದೃಷ್ಟಿಯಿಂದ ಬಾಟಲಿಯಲ್ಲಿ ಹಾಲನ್ನು ಉಣಿಸುತ್ತಾರೆ. ಇದು ಸೂಕ್ತವಲ್ಲ. ಇದು ಆರೋಗ್ಯಕ್ಕೆ ಹಾನಿಕಾರಕ. ವಿವಿಧ ರೀತಿಯ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸ್ತನ ಕ್ಯಾನ್ಸರ್‌ ಸೇರಿದಂತೆ ವಿವಿಧ ರೀತಿಯ ರೋಗಗಳು ಬಾರದಂತೆ ನೋಡಿಕೊಳ್ಳಲು ಎದೆ ಹಾಲನ್ನು ಮಗುವಿಗೆ ನಿರಂತರವಾಗಿ ನೀಡುವುದು ಮುಖ್ಯ. ಮಹಿಳಾ ಕ್ರೀಡಾಪಟುಗಳಿಗಾಗಿ ಕ್ರೀಡಾಂಗಣಗಳಲ್ಲಿ ಸ್ತನ್ಯಪಾನ ನೀಡಲು ಪ್ರತ್ಯೇಕ ಕೊಠಡಿಗಳನ್ನು ತೆರೆಯುವ ಅಗತ್ಯವಿದೆ,” ಎಂದು ಡಾ. ರವ್‌ನೀತ್‌ ಜೋಶಿ ತಿಳಿಸಿದರು.

ಕ್ರೀಡಾಪಟುವಿನ ಹಕ್ಕು:

“ಎಲ್ಲ ತಾಯಂದಿರಂತಲ್ಲ ಮಹಿಳಾ ಕ್ರೀಡಾಪಟುಗಳ ಬದುಕು. ಆಕೆಗೆ ಅಂಗಣದಲ್ಲಿ ಜವಾಬ್ದಾರಿ ಇರುವಂತೆ ಮಗುವಿನ ಆರೈಕೆಯ ಜವಾಬ್ದಾರಿಯೂ ಇರುತ್ತದೆ. ಮಗುವಿಗೆ ಹಾಲುಣಿಸುವುದು ಆಕೆಯ ಹಕ್ಕು. ಆಕೆ ಮುಜುಗರದಿಂದ ದೂರವಾಗಬೇಕು, ಆಕೆಯ ಖಾಸಗಿತನವನ್ನು ಗೌರವಿಸಲು ಸೂಕ್ತವಾದ ವ್ಯವಸ್ಥೆಯನ್ನು ಸಂಘಟಕರು ಕಲ್ಪಿಸಬೇಕು. ಮಗುವಿಗೆ ಜನ್ಮನೀಡಿ ತನ್ನ ಕ್ರೀಡಾ ಬದುಕೇ ಕೊನೆಗೊಂಡಿತು ಎಂಬ ತಪ್ಪು ಕಲ್ಪನೆಯಿಂದ ಆಕೆ ಹೊರಬರಬೇಕು,” ಎಂದು ಡಾ. ರವ್‌ನೀತ್‌ ಜೋಶಿ ತಿಳಿ ಹೇಳಿದರು. ಕರ್ನಾಟಕದ ಕ್ರೀಡಾ ಇತಿಹಾಸವನ್ನು ಅವಲೋಕಿಸಿದಾಗ ಒಲಿಂಪಿಯನ್‌ ಪ್ರಮಿಳಾ ಅಯ್ಯಪ್ಪ ಹಾಗೂ ಎಚ್‌. ಎಂ. ಜ್ಯೋತಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. 2008ರ ಬೀಜಿಂಗ್‌ ಒಲಿಂಪಿಕ್ಸ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಾಗ ಪ್ರಮಿಳಾ ಅವರ ಮಗಳು ಉನ್ನತಿಗೆ ಒಂದು ವರ್ಷ. ಚಿಕ್ಕ ಮಗುವನ್ನು ಆಯ್ಕೆ ಟ್ರಯಲ್ಸ್‌ಗೆ ಕರೆತಂದಿದ್ದರು. ಆಯ್ಕೆ ಟ್ರಯಲ್ಸ್‌ ನಡುವೆ ಮಗುವಿನ ಆರೈಕೆ ನೋಡಿಕೊಂಡು ಬೀಜಿಂಗ್‌ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು. ನಂತರ ಏಷ್ಯನ್‌ ಗೇಮ್ಸ್‌ನಲ್ಲಿ ಪದಕವನ್ನೂ ಗೆದ್ದಿದ್ದರು. ತಾಯಿಯಾದ ನಂತರ ದೇಶದ ವೇಗದ ಓಟಗಾರ್ತಿ ಜ್ಯೋತಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ತಾಯಿ-ಮಗುವಿನ ಅನುಬಂಧ ಹೆಚ್ಚಳ:

ಹೆಚ್ಚಿನ ಕ್ರೀಡಾಂಗಣಗಳಲ್ಲಿ ಕ್ರೀಡಾಪಟುಗಳು ಬಾತ್‌ರೂಮ್‌ಗೆ ಹೋಗಿ ಮಗುವಿಗೆ ಹಾಲು ಕುಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸ್ಥಿತಿ ಪುನರಾವರ್ತನೆಯಾಗಬಾರದು. ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಕ್ರೀಡೆಯ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದರೆ ಜನಸಾಮಾನ್ಯರಿಗೆ ಬೇಗನೇ ಮುಟ್ಟುತ್ತದೆ. “ಎದೆ ಹಾಲು ಕೇವಲ ತಾಯಿ ಮಗುವಿನ ಆರೋಗ್ಯ ದೃಷ್ಟಿಯಿಂದ ಮಾತ್ರ ಮುಖ್ಯವಾದುದಲ್ಲ, ಅವರಿಬ್ಬರ ನಡುವಿನ ಬಂಧವನ್ನೂ ಉತ್ತಮಗೊಳಿಸುತ್ತದೆ, ಭದ್ರಗೊಳಿಸುತ್ತದೆ. ಅಲಿಸನ್‌ ಫೆಲಿಕ್ಸ್‌ ಅವರ ಬದುಕನಂತಹ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಅರಿವು ಮೂಡಿಸುವ ಕೆಲಸ ಮಾಡಬೇಕು, ಮಹಿಳಾ ಕ್ರೀಡಾಪಟುಗಳಿಗೆ ಮಗುವನ್ನು ಹೊಂದುವ ಹಕ್ಕು ಇದೆ, ಆ ಮಗುವಿಗೂ ಪೌಷ್ಠಿಕಾಂಶ ನೀಡುವ ಜವಾಬ್ದಾರಿಯೂ ಅವರಿಗಿರುತ್ತದೆ, ಸ್ತನ್ಯಪಾನ ತಾಯಿಯ ಹಕ್ಕು, ಆ ಹಕ್ಕನ್ನು ಆಕೆ ಎಲ್ಲಿಬೇಕಾದರೂ ಚಲಾಯಿಸಬಹುದು,” ಎಂದರು.

“ನಾನೊಬ್ಬ ವೈದ್ಯೆಯಾಗಿ ಈ ಬಗ್ಗೆ ಅರಿವು ಮೂಡಿಸುವುದು ನನ್ನ ಜವಾಬ್ದಾರಿ, ಅದೇ ರೀತಿ ಪುರುಷರಿಗೂ ಇದರಲ್ಲಿ ಜವಾಬ್ದಾರಿ ಇರುತ್ತದೆ. ನಮಗೆ ಉತ್ತಮ ಭವಿಷ್ಯ ಬೇಕು. ನಮ್ಮ ಮಕ್ಕಳೇ ನಮ್ಮ ಭವಿಷ್ಯ, ಅವರಿಗೆ ರಕ್ಷಣೆ ನೀಡಬೇಕು.ಇದಿರಂದ  ಭಾವನಾತ್ಮಕ ಭದ್ರತೆಯೂ ಸಾಧ್ಯ,” ಎಂದು ಹೇಳಿದರು.

ಗುಣಮಟ್ಟ, ಪ್ರಮಾಣ ಬದಲಾಗುವುದಿಲ್ಲ:

ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡು, ದೈಹಿಕ ಕಸರತ್ತುಗಳನ್ನು ಮಾಡುವುದರಿಂದ ಎದೆ ಹಾಲಿನ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಏರಿಳತವಾಗುತ್ತದೆ ಎಂಬ ಅಪನಂಬಿಕೆ ಅನೇಕರಲ್ಲಿದೆ, ಇದು ತಪ್ಪು ಕಲ್ಪನೆ ಎನ್ನುತ್ತಾರೆ ಡಾ. ರವ್‌ನೀತ್‌ ಜೋಶಿ, “ತಪ್ಪು ನಂಬಿಕೆಗಳಿಂದಾಗಿ ಅನೇಕರು ಮಗುವಾದ ನಂತರ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೂರ ಸರಿದಿರುತ್ತಾರೆ. ಕ್ರೀಡಾಭ್ಯಾಸದಿಂದ ಎದೆಹಾಲಿನ ಗುಣಮಟ್ಟ ಕುಗ್ಗುತ್ತದೆ ಮತ್ತು ಪ್ರಮಾಣವೂ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದು ಸತ್ಯಕ್ಕೆ ದೂರವಾದುದು, ದೈಹಿಕ ಗುಣಕ್ಕೆ ಹೊಂದಿಕೊಂಡು ಮಗುವಿಗೆ ಅಗತ್ಯವಿರುವ ಹಾಲು ಮತ್ತು ಗುಣ ಮಟ್ಟ ಇದ್ದೇ ಇರುತ್ತದೆ. ಕ್ರೀಡಾಚಟುವಟಿಕೆಗಳಿಗೆ ತೆರಳವು ಮುನ್ನ ಎದೆಹಾಲು ನೀಡಿದರೆ, ಕ್ರೀಡಾಚಟುವಟಿಕೆಗಳನ್ನು ಮುಗಿಸಿ ಬಂದ ನಂತರ ಸ್ನಾನ ಮಾಡಿ ನೀಡಿದರೆ ಉತ್ತಮ. ಹಾಲುಣಿಸುವ ತಾಯಿಗೆ ದಿನಕ್ಕೆ 500ಕ್ಯಾಲರಿ ಹೆಚ್ಚುವರಿ ಪೌಷ್ಠಿಕಾಂಶ ಅಗತ್ಯವಿರುತ್ತದೆ, ಅದೇ ರೀತಿ 25ಗ್ರಾಂ ಹೆಚ್ಚುವರಿ ಪ್ರೋಟೀನ್‌ ಅಗತ್ಯವಿರುತ್ತದೆ. ಅದಕ್ಕೆ ಪೂರಕವಾದ ಆಹಾರ ಸೇವಿಸಬೇಕು. ಹಾಲುಣಿಸುವದರಿಂದ ದೇಹದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಸೌಂದರ್ಯ ಕಳೆದುಹೋಗುತ್ತದೆ ಮತ್ತು ಫಿಟ್ನೆಸ್‌ ಕಡಿಮೆಯಾಗುತ್ತದೆ ಎಂಬುದೆಲ್ಲ ಸತ್ಯಕ್ಕೆ ದೂರವಾದುದು,” ಎಂದು ಹೇಳಿದರು.

ಡಾ. ರವ್‌ನೀತ್‌ ಜೋಶಿ (M.D Pediatrics, IBCLC Lactation specialist Manipal Hospital
Bangalore)

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ, ಕರ್ನಾಟಕದ ಶ್ರೇಷ್ಠ ಸ್ಪಿನ್‌ ಮಾಂತ್ರಿಕ ಸುನಿಲ್‌ ಜೋಶಿ ಅವರ ಪತ್ನಿ ಡಾ. ರವ್‌ನೀತ್‌ ಜೋಶಿ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ Pediatrician and Lactation ವಿಭಾಗದ ಎಂಡಿ ಆಗಿರುತ್ತಾರೆ. ಹಲವು ವರ್ಷಗಳಿಂದ ಸ್ತನ್ಯಪಾನದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

Related Articles