sportsmail ಬೆಂಗಳೂರು
ಡಿಸೆಂಬರ್ 3 ವಿಶ್ವ ದಿವ್ಯಾಂಗರ ದಿನ. ಈ ದಿನದಂದು ಹುಬ್ಬಳ್ಳಿಯಲ್ಲಿರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ವಿಶ್ವ ದಾಖಲೆಯೊಂದು ನಿರ್ಮಾಣವಾಗಲಿದೆ. ಅಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 30 ದಿವ್ಯಾಂಗರ ಕ್ರಿಕೆಟ್ ತಂಡಗಳು ಅಖಿಲ ಭಾರತ ದಿವ್ಯಾಂಗರ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿವೆ. ದಿವ್ಯಾಂಗರ ಕ್ರಿಕೆಟ್‌ನಲ್ಲಿ ಇಷ್ಟು ಪ್ರಮಾಣದಲ್ಲಿ ತಂಡಗಳು ಪಾಲ್ಗೊಳ್ಳತ್ತಿರುವುದು ಇದೇ ಮೊದಲು.
ಅಖಿಲ ಭಾರತ ದಿವ್ಯಾಂಗರ ಕ್ರಿಕೆಟ್ ಸಂಸ್ಥೆಯ ಸದಸ್ಯ, ದಕ್ಷಿಣ ವಲಯ ದಿವ್ಯಾಂಗರ ಕ್ರಿಕೆಟ್ ಫೆಡರೇಷನ್‌ನ ಮುಖ್ಯಸ್ಥ ಶಿವಾನಂದ ಗುಂಜಾಲ್ ಅವರು ಎಲ್ಲರ ಸಹಕಾರದೊಂದಿಗೆ ಈ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ.
ಮೊದಲ ಸ್ಥಾನ ಪಡೆಯುವ ಚಾಂಪಿಯನ್ ತಂಡವು 1,11,111ರೂ. ನಗದು ಬಹುಮಾನ ಹಾಗೂ ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲಲಿದೆ. ರನ್ನರ್ ಅಪ್ ತಂಡವು 77,777 ರೂ. ನಗದು ಬಹುಮಾನ ಮತ್ತು ಟ್ರೋಪಿ ಗೆಲ್ಲಲಿದೆ. ಅಲ್ಲದೆ ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್, ಉತ್ತಮ ಫೀಲ್ಡರ್ ಸೇರಿದಂತೆ ಪಂದ್ಯಶ್ರೇಷ್ಠ ಪ್ರಶಸ್ತಿಗಳಿಗೂ ನಗದು ಬಹುಮಾನವಿರುತ್ತದೆ ಎಂದು ಶಿವಾನಂದ ಗುಂಜಾಲ್ ತಿಳಿಸಿದ್ದಾರೆ.
ದಿನದ ಭತ್ಯೆ: ದಿವ್ಯಾಂಗರ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ದಿನದ ಭತ್ಯೆ ನೀಡಲಾಗುವುದು ಎಂದು ಶಿವಾನಂದ ಅವರು ತಿಳಿಸಿರುತ್ತಾರೆ. ಇದುವರೆಗೂ ಆಟಗಾರರಿಗೆ ಎಲ್ಲಿಯೂ ದಿನದ ಭತ್ಯೆ ನೀಡಿರಲಿಲ್ಲ. ನಾವು ತಂಡದ ಪ್ರತಿಯೊಬ್ಬ ಆಟಗಾರನಿಗೂ ದಿನಕ್ಕೆ ತಲಾ 1,000 ರೂ. ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಶಿವಾನಂದ್ ಹೇಳಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮನವಿ: ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸೇರಿದ ಕ್ರೀಡಾಂಗಣವನ್ನು ಟೂರ್ನಿಗೆ ನೀಡುವಂತೆ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಲಾಗುವುದು. ಈ ಬಗ್ಗೆ ಅಖಿಲ ಭಾರತ ದಿವ್ಯಾಂಗರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಹಾರಾಜ ಟ್ರೋಫಿ ಮುಗಿದ ನಂತರ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಕರ್ಸನ್ ಘಾವ್ರಿ ಪ್ರೋತ್ಸಾಹ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕರ್ಸನ್ ಘಾವ್ರಿ ಅವರು ದಿವ್ಯಾಂಗರ ಕ್ರಿಕೆಟ್‌ಗಾಗಿ ಅಪಾರ ಶ್ರಮವಹಿಸುತ್ತಿದ್ದಾರೆ. ನೂರಾರು ಕ್ರಿಕೆಟಿಗರಿಗೆ ಬದುಕು ನೀಡಿದ ಕರ್ಸನ್ ಘಾವ್ರಿ ಈಗ ದಿವ್ಯಾಂಗರ ಕ್ರಿಕೆಟ್ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅಖಿಲ ಭಾರತ ದಿವ್ಯಾಂಗರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಘಾವ್ರಿ ಮುಂಬರುವ ಅಖಿಲ ಭಾರತ ಕ್ರಿಕೆಟ್ ಟೂರ್ನಿಯ ನೆರವಿಗಾಗಿ ಈಗಾಗಲೇ ಹಾಲಿ ಮತ್ತು ಮಾಜಿ ಕ್ರಿಕೆಟಗರಿಗೆ ವಿನಂತಿ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳೊಂದಿಗೂ ಸಂಪರ್ಕದಲ್ಲಿದ್ದು, ಶಿವಾನಂದ ಗುಂಜಾಲ್‌ಗೆ ನೆರವು ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಕ್ರಿಕೆಟ್‌ಗೆ ಜೀವ ತುಂಬಿದ ಶಿವಾನಂದ ಗುಂಜಾಲ್: ಶಿವಾನಂದ ಗುಂಜಾಲ್ ಹುಬ್ಬಳ್ಳಿಯಲ್ಲಿ ದಶಕಗಳಿಂದ ಕ್ರಿಕೆಟ್ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕ್ರೀಡಾಂಗಣ ನಿರ್ಮಾಣ, ನಿರ್ವಹಣೆ, ಕ್ರಿಕೆಟ್ ತರಬೇತಿ, ಟೂರ್ನಿಗಳ ಸಂಯೋಜನೆ, ಕ್ರಿಕೆಟಿಗರಿಗೆ ನೆರವು ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಂಡು ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿ ಕ್ರಿಕೆಟ್‌ನ ಕೇಂದ್ರವಾಗಿಸುವಲ್ಲಿ ಶಿವಾನಂದ ಅವರ ಪಾತ್ರ ಪ್ರಮುಖವಾಗಿದೆ.
ಅಖಿಲ ಭಾರತ ಕ್ರಿಕೆಟ್ ಚಾಂಪಿಯನ್‌ಷಿಪ್ ಯೋಜನೆಯ ಕುರಿತು sportsmail ಜತೆ ಮಾತನಾಡಿದ ಶಿವಾನಂದ ಗುಂಜಾಲ್, “ಸುಮಾರು 30 ತಂಡಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಧ್ಯಕ್ಷ ಕರ್ಸನ್ ಘಾವ್ರಿ ಅವರು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ದಿವ್ಯಾಂಗರ ಕ್ರಿಕೆಟಿಗೆ ಬಿಸಿಸಿಐ ಪ್ರೋತ್ಸಾಹ ನೀಡಲಿದೆ ಎಂದು ಅಧ್ಯಕ್ಷ ಸೌರವ್ ಗಂಗೂಲಿ ಈ ಹಿಂದೆ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ದಿವ್ಯಾಂಗ ಕ್ರಿಕೆಟಿಗರಿಗೆ ಅನುಕೂಲವಾಗಲಿದೆ ಎಂದು ನಾವು ನಂಬಿದ್ದೇವೆ,” ಎಂದು ಹೇಳಿದರು.