Sunday, December 22, 2024

ಭಟ್ಕಳದ ಕಬಡ್ಡಿ ಮನೆಯಿಂದ ಪಾಟ್ನಾ ಪೈರೇಟ್ಸ್‌ಗೆ ರಂಜಿತ್‌ ನಾಯ್ಕ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಅಪ್ಪ ಕಬಡ್ಡಿ ಆಟಗಾರ, ಅಕ್ಕ ಕಬಡ್ಡಿ ಆಟಗಾರ್ತಿ ಮನೆಯಲ್ಲಿ ಉಳಿದವರು ಕಬಡ್ಡಿ ಅಭಿಮಾನಿಗಳು, ಊರಲ್ಲಿ ಕಬಡ್ಡಿಯೇ ಉಸಿರು, ಇಂಥ ಪರಿಸರದಲ್ಲಿ ಬೆಳೆದ ಉತ್ತರ ಕನ್ನಡ ಜಿಲ್ಲೆಯ ಮೂಡ್‌ ಭಟ್ಕಳದ ರಂಜಿತ್‌ ನಾಯ್ಕ್‌ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಾಟ್ನಾ ಪೈರೇಟ್ಸ್‌ ಪರ ಅಂಗಣಕ್ಕಿಳಿಯಲಿದ್ದಾರೆ.

ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಬಿಕಾಂ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯದ ಆಟಗಾರ ರಂಜಿತ್‌ ನಾಯ್ಕ್‌ ಕಳೆದ ವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಹರಾಜಿನಲ್ಲಿ ಹೊಸ ಯುವ ಆಟಗಾರನಾಗಿ ರಂಜಿತ್‌ ಪಾಟ್ನಾ ಪೈರೇಟ್ಸ್‌ ಪಡೆಯನ್ನು ಸೇರಿದ್ದಾರೆ. ರಂಜಿತ್‌ ಅವರ ಆಟವನ್ನು ಹತ್ತಿರದಿಂದ ಬಲ್ಲ ಪಟ್ನಾ ಪೈರೇಟ್ಸ್‌ನ ಪ್ರಧಾನ ಕೋಚ್‌ ರವಿ ಶೆಟ್ಟಿಯವರು ಉತ್ತರ ಕನ್ನಡ ಜಿಲ್ಲೆಯ ಈ ಯುವ ಆಟಗಾರನಿಗೆ ಸ್ಥಾನ ಕಲ್ಪಿಸಿದ್ದರೆ.

ತಂದೆಯಂತೆ ಮಗ: ರಂಜಿತ್‌ ನಾಯ್ಕ್‌ ಅವರ ತಂದೆ ಭಾಸ್ಕರ ನಾಯ್ಕ್‌ ಭಟ್ಕಳದ ಜನಪ್ರಿಯ ಕಬಡ್ಡಿ ಕ್ಲಬ್‌ ಪರಶುರಾಮ ಕಬಡ್ಡಿ ಕ್ಲಬ್‌ನ ಆಟಗಾರರಾಗಿದ್ದರು. ಸುಮಾರು 14 ವರ್ಷಗಳ ಕಾಲ ಕಬಡ್ಡಿ ಆಡಿದವರು. ಜಿಲ್ಲಾ ಮಟ್ಟದಲ್ಲಿ ಉತ್ತಮ ಓಟಗಾರರಾಗಿದ್ದರು. ಇದರಿಂದಾಗಿ ಮನೆಯಲ್ಲಿ ಕ್ರೀಡಾ ವಾತಾವರಣ ನಿರ್ಮಾಣವಾಗಿತ್ತು. ಭಾಸ್ಕರ ನಾಯ್ಕ್‌ ಅವರ ಮಗಳು ರಕ್ಷಾ ಕೂಡ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿ. ಈಗ ಭಟ್ಕಳದಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಮಗಳು ರಕ್ಷಿತ ಕ್ರೀಡೆಯಲ್ಲಿ ತೊಡಗಿಕೊಳ್ಳದಿದ್ದರೂ ತಮ್ಮನಿಗೆ ಕಬಡ್ಡಿಯಲ್ಲಿ ಪ್ರೋತ್ಸಾಹ ನೀಡುವ ಕ್ರೀಡಾಭಿಮಾನಿ. ತಾಯಿ ಸುಶೀಲ ಕೂಡ ಮಗನ ಕ್ರೀಡಾ ಬದುಕಿಗೆ ಪ್ರೋತ್ಸಾಹ ನೀಡಿದ್ದಾರೆ. ಒಮ್ಮೆ ಕಬಡ್ಡಿ ಟೂರ್ನಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಟೆಂಪೋ ಉರುಳಿ ಬಿದ್ದು ಅನೇಕ ಕಬಡ್ಡಿ ಆಟಗಾರರು ಗಾಯಗೊಂಡು, ಆ ಟೆಂಪೋದಲ್ಲಿ ಭಾಸ್ಕರ್‌ ನಾಯ್ಕ್‌ ಕೂಡ ಪ್ರಯಾಣಿಸುತ್ತಿದ್ದರು, ಅಲ್ಲಿಂದ ಅವರು ಮತ್ತೆ ಕಬಡ್ಡಿ ಅಂಗಣವನ್ನು ಪ್ರವೇಶಿಸಿರಲಿಲ್ಲ.  ತಂದೆ ಉತ್ತಮ ರೀತಿಯಲ್ಲಿ ಕಬಡ್ಡಿ ಆಡಿದರೂ ಆಗಿನ ಕಾಲದಲ್ಲಿ ಅವರಿಗೆ ಉತ್ತಮ ಸ್ಥಾನಮಾನ ಸಿಗಲಿಲ್ಲ, ಈ ಕಾರಣಕ್ಕಾಗಿ ಅದೇ ಕ್ರೀಡೆಯಲ್ಲಿ ಯಶಸ್ಸು ಕಾಣಬೇಕೆಂಬ ಉದ್ದೇಶದಿಂದ ರಂಜಿತ್‌ ಕಬಡ್ಡಿಯನ್ನು ತಮ್ಮ ಉಸಿರಾಗಿಸಿಕೊಂಡರು.

ರಂಜಿತ್‌ ಉತ್ತಮ ರೈಡರ್‌: ಪರಶುರಾಮ ಕಬಡ್ಡಿ ಕ್ಲಬ್‌ನಲ್ಲಿ ನಡೆಯುತ್ತಿರುವ ಟೂರ್ನಿಗಳನ್ನು ನೋಡಿ ಅದರಿಂದ ಪ್ರೇರಿತರಾದ ರಂಜಿತ್‌, ಮುರುಡೇಶ್ವರದ ಮೊರಾರ್ಜಿ ಹೈಸ್ಕೂಲ್‌ನಲ್ಲಿ ಓದುತ್ತಿರುವಾಗಲೇ ಕಬಡ್ಡಿ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲಿಂದ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿಗೆ ಬಂದಾಗಿನಿಂದ ಅವರ ಪ್ರತಿಭೆಗೆ ಉತ್ತಮ ಪ್ರೋತ್ಸಾಹ ಸಿಕ್ಕಿತು. ಕಿರಿಯರ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. ನಂತರ ಮಂಗಳೂರು ವಿಶ್ವವಿದ್ಯಾನಿಲಯ, ದಕ್ಷಿಣ ವಲಯ ಮತ್ತು ಆಲ್‌ ಇಂಡಿಯಾ ಅಂತರ್‌ ವಿಶ್ವವಿದ್ಯಾನಿಲಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿದ್ದರು.

“ನನ್ನ ಯಶಸ್ಸಿಗೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್‌ ಆಳ್ವಾ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಉಚಿತ ಶಿಕ್ಷಣ ನೀಡಿ, ಕ್ರೀಡೆಗೆ ಅಗತ್ಯವಾದ ಸಹಾಯ ಮಾಡಿದ್ದಾರೆ.,” ಎಂದು ಮಿತವಾಗಿ ಮಾತನಾಡುವ ರಂಜಿತ್‌ ಹೇಳಿದರು.

“ನಮ್ಮ ತಂದೆ ಕಬಡ್ಡಿ ಆಟಗಾರರು, ಅಕ್ಕ ರಕ್ಷಾ ಕೂಡ ರಾಷ್ಟ್ರ ಮಟ್ಟದ ಆಟಗಾರ್ತಿ ಈ ಇಬ್ಬರೂ ನನ್ನ ಕ್ರೀಡಾ ಬದುಕಿನ ಮೇಲೆ ಅಪಾರವಾದ ಪರಿಣಾಮ ಬೀರಿದ್ದಾರೆ. ನನ್ನಕ್ಕ ನನ್ನ ಪಾಲಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಇದ್ದ ಹಾಗೆ. ಕ್ರೀಡಾ ಬದುಕಿನ ವಿಷಯದಲ್ಲಿ ಸಾಕಷ್ಟು ತಿಳಿ ಹೇಳಿದ್ದಾಳೆ, ಊರಿನಲ್ಲಿ ಕಬಡ್ಡಿ ನೋಡಿ ಬೆಳೆದ ನನಗೆ ಕಬಡ್ಡಿ ಆಟದ ಬಗ್ಗೆ ಅಪಾರ ಪ್ರೀತಿ ಮತ್ತು ಶ್ರದ್ಧೆ ಇದೆ,” ಎಂದರು.

ರವಿ ಶೆಟ್ಟಿಯ ಪ್ರತಿಭಾನ್ವೇಷಣೆ:

ದೇಶದ ಉತ್ತಮ ತರಬೇತುದಾರರಲ್ಲಿ ಒಬ್ಬರಾಗಿರುವ ಕರ್ನಾಟಕದ ರವಿ ಶೆಟ್ಟಿ ಅವರು, ನೂರಾರು ಯುವ ಕಬಡ್ಡಿ ಆಟಗಾರರಿಗೆ ಬದುಕು ಕಲ್ಪಿಸಿದವರು. ಪ್ರೊ ಕಬಡ್ಡಿ ಲೀಗ್‌ ಆರಂಭವಾದಾಗಿನಿಂದ ಬೇರೆ ಬೇರೆ ತಂಡಗಳಲ್ಲಿ ತರಬೇತುದಾರರಾಗಿ ಯುವ ಆಟಗಾರರಿಗೆ ಪ್ರೋತ್ಸಾಹ ನೀಡಿದವರು. ಹಳಿಯಾಳದಲ್ಲಿ ಒಮ್ಮೆ ಕಬಡ್ಡಿ ಪಂದ್ಯ ನಡೆಯುತ್ತಿರುವಾಗ ರವಿ ಶೆಟ್ಟಿಯವರು ರಂಜಿತ್‌ ಆಡವುದನ್ನು ಗಮನಿಸಿದ್ದರು, ನಂತರ ಉಳ್ಳಾಲದಲ್ಲಿ 21 ವರ್ಷ ವಯೋಮಿತಿಯ ಟೂರ್ನಿಯನ್ನು ನೋಡಲು ಬಂದಿದ್ದಾಗ ರಂಜಿತ್‌ ಅವರ ಅದ್ಭುತ ರೈಡ್‌ ನೋಡಿ “ಈ ಯುವ ಆಟಗಾರನಿಗೆ ಒಂದು ಅವಕಾಶ ಕಲ್ಪಿಸಬೇಕು,” ಎಂದು ಮನದಲ್ಲೇ ಅಂದುಕೊಂಡಿದ್ದರು, ಅದೇ ರೀತಿ ಹರಾಜು ಪ್ರಕ್ರಿಯೆ ನಡೆಯುವಾಗ ಹೊಸ ಯುವ ಆಟಗಾರರ ಪಟ್ಟಿಯಲ್ಲಿ ಮೊದಲ ಆಯ್ಕೆ ಮಾಡಿದರು. ಇದರೊಂದಿಗೆ ಮೂಡ ಭಟ್ಕಳದ ಗ್ರಾಮೀಣ ಪ್ರತಿಭೆಗೆ ಪ್ರೋ ಕಬಡ್ಡಿಯಲ್ಲಿ ಆಡುವ ಅವಕಾಶ ಸಿಕ್ಕಿತು.

“ರಂಜಿತ್‌ ಆಟವನ್ನು ಹಲವು ಬಾರಿ ನೋಡಿದ್ದೇನೆ. ಆತನ ಕಬಡ್ಡಿ ಆಟದಲ್ಲಿ ಉತ್ತಮ ಸುಧಾರಣೆ ಇದೆ. ಉತ್ತಮ ರೈಡರ್‌ ನಮ್ಮ ಕರ್ನಾಟಕದ ಆಟಗಾರನಿಗೊಂದು ಅವಕಾಶ ಸಿಕ್ಕಿದೆ ಎಂಬ ತೃಪ್ತಿ ಇದೆ. ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆ ಇರುವ ಆಟಗಾರ. ಆತನಿಗೆ ಪ್ರೋ ಕಬಡ್ಡಿಯಲ್ಲಿ ಯಶಸ್ಸು ಸಿಗಲಿ. ನಮ್ಮ ತಂಡಕ್ಕೆ ಆತನಿಂದ ಉತ್ತಮ ಕೊಡುಗೆಯಾಗಲಿ,” ಎಂದು ಪಾಟ್ನಾ ಪೈರೇಟ್ಸ್‌ನ ಪ್ರಧಾನ ಕೋಚ್‌ ರವಿ ಶೆಟ್ಟಿ ಹೇಳಿದ್ದಾರೆ.

“ಪ್ರೋ ಕಬಡ್ಡಿಯಲ್ಲಿ ಆಡುವುದು ನನ್ನ ಕನಸಾಗಿತ್ತು. ಆ ಕನಸು ನನಸಾಗುವಲ್ಲಿ ಇದು ಮೊದಲ ಹೆಜ್ಜೆ. ಅವಕಾಶ ಸಿಕ್ಕಾಗ ಉತ್ತಮವಾಗಿ ಆಡುವ ಆತ್ಮವಿಶ್ವಾಸವಿದೆ,” ಎಂದು ಹೇಳುವ ರಂಜಿತ್‌ಗೆ ಈಗ ತಮಿಳು ತಲೈವಾಸ್‌ ಸೇರಿರುವ ಪವನ್‌ ಶೆರಾವತ್‌ ಮಾದರಿಯ ಆಟಗಾರ. “ಪ್ರೊ ಕಬಡ್ಡಿಯನ್ನು ವೀಕ್ಷಿಸುತ್ತಿದ್ದೇನೆ, ರವಿ ಶೆಟ್ಟಿಯವರು ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಅವರು ತರಬೇತಿ ನೀಡುತ್ತಿರುವ ತಂಡದಲ್ಲೇ ಹೊಸ ಯುವ ಆಟಗಾರನಾಗಿ ಸೇರಿದ್ದು ನನ್ನ ಅದೃಷ್ಟ,” ಎಂದು ರಂಜಿತ್‌ ಗುರುವಿನ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ನೆನಪಿನಂಗಳದಲ್ಲಿ ಮನೋಜ್‌ ನಾಯ್ಕ್‌: ರಂಜಿತ್‌ ಅವರ ಮೇಲೆ ಚಿಕ್ಕಂದಿನಿಂದಲೂ ಅತ್ಯಂತ ಪ್ರಭಾವ ಬೀರಿದವರಲ್ಲಿ ಭಟ್ಕಳದ ಪರುಶುರಾಮ ಕಬಡ್ಡಿ ಕ್ಲಬ್‌ನ ಮಾಜಿ ನಾಯಕ ದಿ. ಮನೋಜ್‌ ನಾಯ್ಕ್‌ ಕೂಡ ಒಬ್ಬರು. ಮನೋಜ್‌ ನಾಯ್ಕ್‌ ಇತ್ತೀಚಿಗೆ ನಮ್ಮನಗಲಿದರು. ರಾಜ್ಯದ ಹಿರಿಯ ಕಬಡ್ಡಿ ಆಟಗಾರ ಮನೋಜ್‌ ವಿಶ್ವವಿದ್ಯಾಲಯ ಮತ್ತು ಸೀನಿಯರ್‌ ನ್ಯಾಷನಲ್‌ ಪಂದ್ಯಗಳನ್ನು ಆಡಿದವರು. “ನಮ್ಮೂರಿನ ಪ್ರತಿಯೊಬ್ಬ ಯುವ ಆಟಗಾರನಿಗೂ ಮನೋಜ್‌ ನಾಯ್ಕ್‌ ಸ್ಫೂರ್ತಿ ಇದ್ದಂತೆ. ಅವರ ಆಟವನ್ನು ನೋಡಿ ಬೆಳೆದವರು ನಾವೆಲ್ಲ. ಅವರ ಅನುಪಸ್ಥಿತಿ ನಮ್ಮೂರನ್ನು ಕಾಡುತ್ತಿದೆ,” ಎಂದು ರಂಜಿತ್‌ ಅಗಲಿದ ಹಿರಿಯ ಆಟಗಾರನನ್ನು ಸ್ಮರಿಸಿದರು.

Related Articles