Sunday, December 22, 2024

ಚಿನ್ನಕ್ಕೆ ಜಿಗಿದ ಕರ್ನಾಟಕದ ಅಭಿನಯ ಶೆಟ್ಟಿ

ಬೆಂಗಳೂರು:

ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಅಂತರ್‌ ರೈಲ್ವೆ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ರೇಲ್ವೆಯನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಅಭಿನಯ ಶೆಟ್ಟಿ ಹೈಜಂಪ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಅಭಿನಯ ಅವರು ಗೆದ್ದ ನಾಲ್ಕನೇ ಚಿನ್ನದ ಪದಕ ಇದಾಗಿದೆ. 1.84 ಮೀ. ಎತ್ತರಕ್ಕೆ ಜಿಗಿದ ಅಭಿನಯ ಅಗ್ರ ಸ್ಥಾನದೊಂದಿಗೆ ದಾಖಲೆಯ ಚಿನ್ನ ಗೆದ್ದರು. ಇದು ಅವರ ವೈಯಕ್ತಿಕ ಉತ್ತಮ ಜಿಗಿತವಾಗಿದ್ದು, 1.79 ಮೀ. ಎತ್ತರಕ್ಕೆ ಜಿಗಿದ ವಾಯುವ್ಯ ರೇಲ್ವೆಯ ರುಬಿನಾ ಬೆಳ್ಳಿ ಪದಕ ಗೆದ್ದರೆ, 1.73 ಮೀ. ಎತ್ತರಕ್ಕೆ ಜಿಗಿದ ದಕ್ಷಿಣ ರೇಲ್ವೆಯ ಏಂಜಲ್‌ ಪಿ. ದೇವಸಾಯಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.  ಇದೇ ವರ್ಷ ಕೋಲ್ಕೊತಾದಲ್ಲಿ ನಡೆದ ಅಖಿಲ ಭಾರತ ಅಂತರ್‌ ರೇಲ್ವೆ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 1.83 ಮೀ. ಎತ್ತರಕ್ಕೆ ಜಿಗಿದು ಚಿನ್ನ ಗೆದ್ದಿದ್ದರು. ಇದು ರೇಲ್ವೆಯಲ್ಲಿನ ನೂತನ ದಾಖಲೆಯಾಗಿತ್ತು, ಈಗ ಅಭಿನಯ ತನ್ನದೇ ದಾಖಲೆ ಮುರಿದು ಹೊಸ ದಾಖಲೆ ಬರೆದರು.

ಈ ವರ್ಷ ಅಭಿನಯ ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲ, ಚಿನ್ನದ ಸಾಧನೆ ಮಾಡಿರುವುದು ವಿಶೇಷ, ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಷಿಪ್‌ನಲ್ಲಿ ಅಭಿನಯ 1.82ಮೀ. ಎತ್ತರಕ್ಕೆ ಜಿಗಿದು, ಅಗ್ರ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದರು. ಫೆಡರೇಷನ್‌ ಕಪ್‌ನಲ್ಲೂ ಅಭಿನಯ ತಮ್ಮ ಪಾರಮ್ಯ ಮೆರೆದಿದ್ದಾರೆ. ಕ್ಯಾಲಿಕಟ್‌ನಲ್ಲಿ ನಡೆದ ಹಿರಿಯರ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 1.83 ಮೀ. ಎತ್ತರಕ್ಕೆ ಜಿಗಿದು ಚಿನ್ನ ತಮ್ಮದಾಗಿಸಿಕೊಂಡಿದ್ದರು.

ಆರಂಭದಲ್ಲಿ ರಾಜ್ಯದ ಶ್ರೇಷ್ಠ ಕೋಚ್‌ ಜಿ.ವಿ. ಗಾಂವ್ಕರ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದ ಅಭಿನಯ ಈಗ ವಸಂತ್‌ ಜೋಗಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

“ರೇಲ್ವೆ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಸಾಧನೆ ಖುಷಿಕೊಟ್ಟಿದೆ, ಇನ್ನೂ ಎತ್ತರಕ್ಕೆ ಜಿಗಿಯಲು ಕಠಿಣ ಶ್ರಮ ವಹಿಸುವೆ. ಮುಂದಿನ ಗುರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರುವುದಾಗಿದೆ,” ಎಂದು ಅಭಿನಯ sportsmail ಗೆ ತಿಳಿಸಿದ್ದಾರೆ.

Related Articles