Friday, November 22, 2024

ಎಫ್‌ಸಿಬಿಯು ತಂಡಕ್ಕೆ ರೂಟ್ಸ್‌ ಎಫ್‌ಸಿ ವಿರುದ್ಧ 3-0 ಅಂತರದ ಜಯ

ಬೆಂಗಳೂರು, ಸೆಪ್ಟಂಬರ್‌ 15:

ಹಾಲಿ ಚಾಂಪಿಯನ್‌ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಬೆಂಗಳೂರು ಫುಟ್ಬಾಲ್‌ ಅಂಗಣದಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಪಂದ್ಯದಲ್ಲಿ ರೂಟ್ಸ್‌ ಎಫ್‌ಸಿ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಮುನ್ನಡೆದಿದೆ.

ಜೈರೋ ರೋಡ್ರಿಗಸ್‌ (21 ಮತ್ತು 84ನೇ ನಿಮಿಷ) ಮತ್ತು ಶಾಜನ್‌ ಫ್ರಾಂಕ್ಲಿನ್‌ (59ನೇ ನಿಮಿಷ) ಎಫ್‌ಸಿಬಿಯು ಪರ ಗೋಲು ಗಳಿಸುವುದರೊಂದಿಗೆ ಚಾಂಪಿಯನ್‌ ತಂಡ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನಡೆದಿದೆ.

ಎಫ್‌ಸಿ ಬೆಂಗಳೂರು ಯುನೈಟೆಡ್‌ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿ ತನ್ನ ಪ್ರಭುತ್ವ ಸ್ಥಾಪಿಸಿತ್ತು. ಆರು ನಿಮಿಷಗಳ ಪಂದ್ಯ ಸಾಗುವವರೆಗೂ ಎಫ್‌ಸಿಬಿಯು ಅವಕಾಶ ಗಳಿಸಲು ಕಠಿಣ ಶ್ರಮಪಟ್ಟಿತು. ಹಲವು ತಾಕಲಾಟಗಳ ನಂತರ ಮನ್ವೀರ್‌ ಸಿಂಗ್‌ ನೀಡಿದ ಪಾಸ್‌ ಮೊಹಮ್ಮದ್‌  ಧೌ ಅವರಿಗೆ ಉತ್ತಮ ರೀತಿಯಲ್ಲಿ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಚೆಂಡು ಗೋಲ್‌ ಬಾಕ್ಸ್‌ನ ಮೇಲಿನಿಂದ ಸಾಗಿತ್ತು. 14ನೇ ನಿಮಿಷದಲ್ಲಿ ಶಾಜಾನ್‌ ಅವರಿಗೆ ಸುಲಭವಾಗಿ ಗೋಲ ಗಳಿಸುವ ಅವಕಾಶವಿದ್ದಿತ್ತು, ಆದರೆ ರೂಟ್ಸ್‌ ಎಫ್‌ಸಿ ಗೋಲ್‌ಕೀಪರ್‌ ಸುಲಭವಾಗಿ ತಡೆದರು.

ಎಫ್‌ಸಿ ಬೆಂಗಳೂರು ಯುನೈಟೆಡ್‌ ಆಕ್ರಮಣಕಾರಿ ಆಟವಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಅಂತಿಮವಾಗಿ 21ನೇ ನಿಮಿಷದಲ್ಲಿ ಗೋಲು ದಾಖಲಾಯಿತು. ಪ್ರಫುಲ್‌ ಕುಮಾರ್‌ ನೀಡಿದ ದೂರದ ಪಾಸನ್ನು ಜೈರೋ ಉತ್ತಮ ರೀತಿಯಲ್ಲಿ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಎಫ್‌ಸಿಬಿಯು ಗೋಲು ಗಳಿಸುವ ಅವಕಾಶಗಳನ್ನು ನಿರ್ಮಿಸಿಕೊಳ್ಳುವುದನ್ನು ಮುಂದುವರಿಸಿತು, 43ನೇ ನಿಮಿಷದಲ್ಲಿ ಮನೋಜ್‌ ಕನ್ನನ್‌ ಅವರಿಂದ ದೊರೆತ ಶಾರ್ಟ್‌ ಕಾರ್ನರ್‌ಗೆ ಜೈರೋ ಹೆಡರ್‌ ಮೂಲಕ ಗೋಲು ಗಳಿಸಲು ಯತ್ನಿಸಿದರು. ಆದರೆ ನೇರವಾಗಿ ಗೋಲು ಗಳಿಸುವ ಅವಕಾಶ ತಪ್ಪಿತು. ಎಫ್‌ಸಿಬಿಯು ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮುನ್ನಡೆ ಸಾಧಿಸಿತು. ರೂಟ್ಸ್‌ ಎಫ್‌ಗೆ ಗೋಲು ಗಳಿಸಲು ಕೇವಲ ಒಂದು ಬಾರಿ ಅವಕಾಶ ಸಿಕ್ಕಿರುವುದನ್ನು ಗಮನಿಸಿದಾಗ ಎಫ್‌ಸಿ ಬೆಂಗಳೂರು ಯುನೈಟೆಡ್‌ನ ಅಟ್ಯಾಕ್‌ ಹಾಗೂ ಡಿಫೆನ್ಸ್‌ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ದ್ವಿತಿಯಾರ್ಧದಲ್ಲಿ ಎಫ್‌ಸಿಬಿಯು ಪ್ರಥಮಾರ್ಧದಂತೆ ಆರಂಭದಿಂದಲೂ ಅವಕಾಶಗಣನ್ನು ನಿರ್ಮಾಣ ಮಾಡಲಾರಂಬಿಸಿತು. ದ್ವಿತಿಯಾರ್ಧದ ಮೂರನೇ ನಿಮಿಷದಲ್ಲಿ ಆಯ್ನಾಮ್‌ ಜೆರ್ವಾ ಉತ್ತಮ ಪಾಸೊಂದನ್ನು ಸೆಲ್ವಿನ್‌ ಮಿರಾಂಡ ಅವರಿಗೆ ನೀಡಿದರು. ಹೆಡರ್‌ ಮೂಲಕ ಗೋಲು ಗಳಿಸಲು ಯತ್ನಿಸಿದರೂ ಚೆಂಡು ಗೋಲ್‌ಬಾಕ್ಸ್‌ನ ಅಂಚಿನಿಂದ ಮೇಲೆ ಸಾಗಿತು. ಆ ನಂತರ ಶಾಜನ್‌ ಅವರ ಗೋಲು ಗಳಿಸುವ ಯತ್ನವೂ ವಿಫಲವಾಯಿತು. 59ನೇ ನಿಮಿಷದಲ್ಲಿ ಆಯ್ನಾಮ್‌ ಜೆರ್ವಾ ನೀಡಿದ ಪಾಸನ್ನು ರೂಟ್ಸ್‌ ಎಫ್‌ಸಿ ಡಿಫೆಂಡರ್‌ ತಪ್ಪಾಗಿ ಗ್ರಹಿಸಿದರು, ಫ್ರಾಂಕ್ಲಿನ್‌ ಯಾವುದೇ ಪ್ರಮಾದ ಎನಸಗದೆ ಎಫ್‌ಸಿಬಿಯು ತಂಡಕ್ಕೆ 2-0 ಮುನ್ನಡೆ ನೀಡಿದರು. ಎಫ್‌ಸಿಬಿಯು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದನ್ನು ಮುಂದುವರಿಸಿತು, 84ನೇ ನಿಮಿಷದಲ್ಲಿ ರಾಕೇಶ್‌ ಪ್ರಧಾನ್‌ ನೀಡಿದ ಫ್ರೀ ಕಿಕ್‌ ಮೂಲಕ ಜೈರೋ ವೈಯಕ್ತಿಕ ಎರಡನೇ ಗೋಲು ಗಳಿಸಿ ತಂಡಕ್ಕೆ 3-0 ಜಯ ತಂದಿತ್ತರು.

ಬಿಡಿಎಫ್‌ಎ ಸೂಪರ್‌ ಡಿವಿಜನ್‌ನಲ್ಲಿ ಎರಡು ಬಾರಿ ಚಾಂಪಿಯನ್‌ ಪಟ್ಟ ಗೆದ್ದಿರುವ ಎಫ್‌ಸಿ ಬೆಂಗಳೂರು ಯುನೈಟೆಡ್‌ ತನ್ನ ಜಯದ ಅಭಿಯಾನವನ್ನು ಮುಂದುವರಿಸುವ ಮೂಲಕ ಮತ್ತೊಮ್ಮೆ ಚಾಂಪಿಯನ್‌ ಪಟ್ಟ ಗೆಲ್ಲುವತ್ತ ಹೆಜ್ಜೆ ಇಟ್ಟಿತು.

Related Articles