Thursday, November 21, 2024

ಡೆಲ್ಲಿಗೆ ಸೋಲುಣಿಸಿ ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್‌!

ಪುಣೆ, ಅಕ್ಟೋಬರ್‌ 29: ವಿವೋ ಪ್ರೋ ಕಬಡ್ಡಿ ಲೀಗ್‌ನ ಶನಿವಾರದ ಮೊದಲ ಪಂದ್ಯ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಬಲಿಷ್ಠ ದಬಾಂಗ್‌ ಡೆಲ್ಲಿ ತಂಡವನ್ನು 47-43 ಅಂತರದಲ್ಲಿ ಮಣಿಸಿದ ಬೆಂಗಳೂರು ಬುಲ್ಸ್‌ ಲೀಗ್‌ನಲ್ಲಿ ಜಯದ ಹೆಜ್ಜೆಯನ್ನು ಮುಂದುವರಿಸಿತು.

ಕೊನೆಯ ಎರಡು ನಿಮಿಷಗಳ ಆಟದಲ್ಲಿ ಬೆಂಗಳೂರು ಬುಲ್ಸ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. ಭರತ್‌ ಡಬಲ್‌ ಸೂಪರ್‌ ಟೆನ್‌ (20) ನೆರವಿನಿಂದ ಬೆಂಗಳೂರು ಬಲಿಷ್ಠ ಡೆಲ್ಲಿಗೆ ಅಚ್ಚರಿಯ ಆಘಾತ ನೀಡಿತು. ಟ್ಯಾಕಲ್‌ನಲ್ಲಿ ಸೌರಭ್‌ ನಂದಾಲ್‌ 6 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. 2 ನಿಮಿಷಗಳು ಬಾಕಿ ಇರುವಾಗ ದಬಾಂಗ್‌ ಡೆಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಆಲೌಟ್‌ ಮಾಡಿ ಗೆಲ್ಲುವ ಲಕ್ಷಣ ತೋರಿತ್ತು. ಆದರೆ ಬೆಂಗಳೂರು ಬುಲ್ಸ್‌ ನಂತರದ ಒಂದು ನಿಮಿಷದಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು ಆಲೌಟ್‌ ಮಾಡಿ ಮತ್ತೆ ಚೇತರಿಸದಂತೆ ಮಾಡಿತು. ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ 15 ಹಾಗೂ ಅಶು ಮಲಿಕ್‌ 15 ಅಂಕಗಳನ್ನು ಗಳಿಸಿದರೂ ಸೌರಭ್‌ ಅವರ ಭದ್ರ ಹಿಡಿತ ಡೆಲ್ಲಿಯ ಜಯವನ್ನು ಕಸಿದುಕೊಳ್ಳುವಂತೆ ಮಾಡಿತು. ಈ ಜಯದೊಂದಿಗೆ ಬೆಂಗಳೂರು ಬುಲ್ಸ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಪ್ರಥಮಾರ್ಧದಲ್ಲಿ ಬೆಂಗಳೂರು ಮುನ್ನಡೆ: ಬಲಿಷ್ಠ ದಬಾಂಗ್‌ ಡೆಲ್ಲಿ ಕೆಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಳೂರು ಬುಲ್ಸ್‌ 27-18 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಭರತ್‌ (9), ನವೀನ್‌ (5) ಮತ್ತು ವಿಕಾಸ್‌ ಕಂಡೋಲ (3) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ನೆರವಾದರು. ಟ್ಯಾಕಲ್‌ನಲ್ಲಿ ಸೌರಭ್‌ ನಂದಲ್‌ 2 ಅಂಕಗಳನ್ನು ಗಳಿಸಿದರು.

ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ ಅವರು ತಂಡದ ಪರ ಉತ್ತಮ ರೈಡಿಂಗ್‌ ಪ್ರದರ್ಶಿಸಿದರೂ ಬೆಂಗಳೂರಿನ ಶಕ್ತಿಗೆ ಅದು ಸರಿಹೊಂದಲಿಲ್ಲ. ಇದುವರೆಗೂ ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ದಬಾಂಗ್‌ ಡೆಲ್ಲಿ ತಂಡಕ್ಕೆ ಇಲ್ಲಿ ಜಯದ ಅನಿವಾರ್ಯತೆ ಇದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಡೆಲ್ಲಿಗೆ ನಿರಂತರ ಸೋಲು ತಂಡದ ಆತ್ಮಬಲವನ್ನು ಕುಸಿಯುವಂತೆ ಮಾಡುವುದು ಸ್ಪಷ್ಟ. ನವೀನ್‌ ಕುಮಾರ್‌ ಅವರನ್ನು ಎದುರಾಳಿ ತಂಡ ನಿಯಂತ್ರಿಸಿದಾಗ ಡೆಲ್ಲಿ ಕಂಗಾಲಾಗುವುದು ಸ್ಪಷ್ಟ. ಈ ತಂತ್ರವನ್ನು ಬೆಂಗಳೂರು ಅರ್ಥ ಮಾಡಿಕೊಂಡಿದ್ದು ಅದೇ ರೀತಿಯಲ್ಲಿ ಪ್ರದರ್ಣ ತೋರಿದೆ. ಡೆಲ್ಲಿ ಪಡೆಯನ್ನು ಎರಡು ಬಾರಿ ಆಲೌಟ್‌ ಮಾಡುವ ಮೂಲಕ ಬೆಂಗಳೂರು ಬುಲ್ಸ್‌ ತನ್ನ ಸಾಮರ್ಥ್ಯ ಏನೆಂಬುದನ್ನು ಸ್ಪಷ್ಟಪಡಿಸಿತ್ತು.

Related Articles